Advertisement

ಮೊಟ್ಟೆ ವಿತರಣೆಗೆ ಪೋಷಕರ ಒಪ್ಪಿಗೆ ಕಡ್ಡಾಯ

03:07 PM Jul 28, 2022 | Team Udayavani |

ದಾವಣಗೆರೆ: ಸಾಕಷ್ಟು ಪರ-ವಿರೋಧದ ನಡುವೆಯೂ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಬಿಸಿಯೂಟದೊಂದಿಗೆ ಮೊಟ್ಟೆ ನೀಡುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಿರುವ ಸರ್ಕಾರ, ವಿದ್ಯಾರ್ಥಿಗಳ ಪೋಷಕರ ಲಿಖಿತ ಒಪ್ಪಿಗೆ ಪಡೆದುಕೊಂಡೇ ಮೊಟ್ಟೆ ವಿತರಿಸಲು ಮುಂದಾಗಿದೆ.

Advertisement

ಸರ್ಕಾರದ ಈ ನಿರ್ಧಾರದಿಂದ ಹೊಸದಾಗಿ ಕಾರ್ಯಕ್ರಮ ಜಾರಿಯಾಗುತ್ತಿರುವ ರಾಜ್ಯದ 23 ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಮೂಲಕ ಪಾಲಕರ ಒಪ್ಪಿಗೆ ಪತ್ರಕ್ಕೆ ಸಹಿ ಸಂಗ್ರಹಿಸುವ ಕಾರ್ಯ ನಡೆದಿದೆ. ಎಲ್ಲ ಶಾಲೆಗಳಲ್ಲಿ ಶಾಲಾ ಮುಖ್ಯಸ್ಥರು ಈ ಕುರಿತು ಪಾಲಕರ ಒಪ್ಪಿಗೆ ಪತ್ರದ ಮಾದರಿ ತಯಾರಿಸಿ ಅದಕ್ಕೆ ಪಾಲಕರಿಂದ ಒಪ್ಪಿಗೆಯ ಸಹಿ ಸಂಗ್ರಹಿಸಲು ಮುಂದಾಗಿದ್ದಾರೆ.

ಶಾಲೆಯಲ್ಲಿ ಬಿಸಿಯೂಟದೊಂದಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ಇವುಗಳಲ್ಲಿ ಯಾವುದಾದರೂ ಒಂದನ್ನು ಮಗುವಿಗೆ ವಿತರಿಸಲಾಗುತ್ತದೆ. ಇದರಲ್ಲಿ ನಿಮ್ಮ ಮಗುವಿಗೆ (ಒಂದೇ ಆಯ್ಕೆ ಮಾಡಬೇಕು) ಯಾವುದನ್ನು ನೀಡಲು ನಿಮ್ಮ ಅನುಮತಿ ಇದೆ ಎಂಬುದನ್ನು ಸೂಚಿಸಿ ಸಹಿಯೊಂದಿಗೆ ಪತ್ರ ಕಳುಹಿಸಿ ಕೊಡಬೇಕು ಎಂದು ಪ್ರತಿ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಪಾಲಕರಿಗೆ ಸೂಚಿಸಲಾಗುತ್ತಿದೆ. ಈ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಂಡೇ ಆಹಾರ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ. ಇದರಿಂದಾಗಿ ಪಾಲಕರು ತಮ್ಮ ಮಗುವಿಗೆ ಯಾವ ಆಹಾರ ನೀಡಬಹುದು ಎಂದು ಲಿಖೀತವಾಗಿಯೇ ಒಪ್ಪಿಗೆ ಸೂಚಿಸಬೇಕಾಗಿದೆ.

ಎಚ್ಚರಿಕೆಯಿಂದ ವಿತರಣೆ: ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಕೆಲವರಿಂದ ವಿರೋಧ ಬಂದ ಹಿನ್ನೆಲೆಯಲ್ಲಿ ಸರ್ಕಾರ, ಪಾಲಕರಿಂದ ಒಪ್ಪಿಗೆ ಪತ್ರ ಪಡೆಯಲು ಮುಂದಾಗಿದ್ದು ಯಾವುದೇ ಕಾರಣಕ್ಕೂ ಯಾವ ವಿದ್ಯಾರ್ಥಿಗೂ ಬಲವಂತವಾಗಿ ಮೊಟ್ಟೆ ನೀಡಬಾರದು ಎಂದು ಸಹ ನಿರ್ದೇಶನ ನೀಡಿದೆ. ಮೊಟ್ಟೆ, ಬಾಳೆಹಣ್ಣು ಹಾಗೂ ಶೇಂಗಾಚಿಕ್ಕಿ ವಿತರಿಸುವಾಗ ಆಯಾ ತರಗತಿ ಶಿಕ್ಷಕರು ಯಾವ ಮಗುವಿನ ಪಾಲಕರು ಯಾವುದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ ಎಂಬುದನ್ನು ಗುರುತಿಸಿ, ಪ್ರತ್ಯೇಕವಾದ ಪಟ್ಟಿ ತಯಾರಿಸಿ, ಲೋಪವಾದಂತೆ ಎಚ್ಚರಿಕೆಯಿಂದ ವಿತರಣೆಗೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯ ಸರ್ಕಾರ 1ರಿಂದ 8ನೇ ತರಗತಿ ಮಕ್ಕಳಿಗಾಗಿ ಮೊದಲು ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಮೊಟ್ಟೆ (ಮೊಟ್ಟೆ ಸೇವಿಸದವರಿಗೆ ಬಾಳೆಹಣ್ಣು ಇಲ್ಲವೇ ಶೇಂಗಾ ಚಿಕ್ಕಿ) ವಿತರಿಸುವ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮ ಅನುಷ್ಠಾನಗೊಳಿಸಿತ್ತು. ಈಗ ಅದನ್ನು ರಾಜ್ಯದ ಉಳಿದ 23 ಜಿಲ್ಲೆಗಳಿಗೂ ವಿಸ್ತರಿಸಿದ್ದು ಈ ಕಾರ್ಯಕ್ರಮದಿಂದ ವಾರದಲ್ಲಿ ಎರಡು ದಿನ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ಇವುಗಳಲ್ಲಿ ಯಾವುದಾದರೂ ಒಂದನ್ನು ಮಗುವಿಗೆ ನೀಡಲಾಗುತ್ತದೆ. ಈ ಕಾರ್ಯಕ್ರಮದಿಂದ ಹೊಸದಾಗಿ 30.62 ಲಕ್ಷ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದು ಇದಕ್ಕಾಗಿ ಸರ್ಕಾರ 84.52 ಕೋಟಿ ರೂ. ಖರ್ಚು ಮಾಡಲಿದೆ.

Advertisement

ಮೊಟ್ಟೆ ತಿನ್ನುವ ವಿದ್ಯಾರ್ಥಿಗಳಿಗೆ ಬೇಯಿಸಿದ ಹಾಗೂ ಸಿಪ್ಪೆ ಸುಲಿದು ಗುಣಮಟ್ಟದ ತಾಜಾ ಒಂದು ಮೊಟ್ಟೆ, ಮೊಟ್ಟೆ ಸೇವಿಸದ ಮಕ್ಕಳಿಗೆ ಗುಣಮಟ್ಟದ ಒಂದು ಅಥವಾ ಎರಡು ಮಾಗಿದ ಬಾಳೆಹಣ್ಣು ಬದಲಿಗೆ ಶೇಂಗಾ ಚಿಕ್ಕಿ ಸೇವಿಸುವ ಮಕ್ಕಳಿಗೆ ಒಂದು ಬಿಲ್ಲೆ (20ಗ್ರಾಂ- 40ಗ್ರಾಂ) ಆರು ರೂ.ಗಳ ವೆಚ್ಚಕ್ಕೆ ಮೀರದಂತೆ ಖರೀದಿಸಿ ವಿತರಿಸಲು ಶಿಕ್ಷಣ ಇಲಾಖೆ ಯೋಜನೆ ರೂಪಿಸಿಕೊಂಡಿದೆ.

ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಈ ಪೂರಕ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮದ ಮೂಲಕ ಸರ್ಕಾರ, ಸಾರ್ವಜನಿಕರಿಗೆ ತಮ್ಮ ಆಹಾರ ಆಯ್ಕೆ ಮಾಡಿಕೊಳ್ಳುವ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಟ್ಟಿರುವುದು ವಿಶೇಷ.

ಮೊಟ್ಟೆಗೆ ಪ್ರತ್ಯೇಕ ಪಾತ್ರೆ

ಮೊಟ್ಟೆ ಬೇಯಿಸಲು ಪ್ರತ್ಯೇಕ ಪಾತ್ರೆ ಬಳಸಬೇಕು. ಬೇಯಿಸಿದ ಮೊಟ್ಟೆಯ ಸಿಪ್ಪೆ ಸುಲಿದು ಸಂಗ್ರಹಿಸಿಟ್ಟು ವಿತರಿಸಲು ಸಹ ಪ್ರತ್ಯೇಕ ಪಾತ್ರೆ ಬಳಸುವಂತೆ ಅಡುಗೆಯವರಿಗೆ ಸೂಚಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಮೂಲಕ ನಿರ್ದೇಶನ ನೀಡಿದ್ದಾರೆ.

ಶಾಲಾ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸಲು ಪೂರಕ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಇಲ್ಲವೇ ಶೇಂಗಾ ಚಿಕ್ಕಿ ನೀಡಲಾಗುವುದು. ಇದಕ್ಕಾಗಿ ವಿದ್ಯಾರ್ಥಿಗಳ ಪೋಷಕರಿಂದ ಲಿಖೀತವಾಗಿ ಒಪ್ಪಿಗೆ ಪತ್ರ ಪಡೆಯಲಾಗುತ್ತಿದೆ. –ಜಿ.ಆರ್‌. ತಿಪ್ಪೇಶ್‌, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next