Advertisement

ಪರಂವಾ ಸ್ಟುಡಿಯೋಸ್‌ ನ ಹೊಸ ಪ್ರೇಮಕಥೆ ‘ಇಬ್ಬನಿ ತಬ್ಬಿದ ಇಳೆಯಲಿ’

09:47 AM Aug 21, 2022 | Team Udayavani |

ಪರಂವಾ ಸ್ಟುಡಿಯೋಸ್‌’ ಬ್ಯಾನರ್‌ನಡಿ ರಕ್ಷಿತ್‌ ಶೆಟ್ಟಿ ನಿರ್ಮಿಸುತ್ತಿರುವ ಹೊಸ ಚಿತ್ರ ಕಳೆದ ತಿಂಗಳಷ್ಟೇ ಘೋಷಣೆಯಾಗಿತ್ತು. ಇನ್ನೂ ಹೆಸರು ಬಿಟ್ಟುಕೊಡದ ಈ ಚಿತ್ರದಲ್ಲಿ ವಿಹಾನ್‌ ಗೌಡ ಮತ್ತು ಅಂಕಿತಾ ಅಮರ್‌ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದಾಗಿ ಚಿತ್ರತಂಡ ತಿಳಿಸಿತ್ತು. ಇದೀಗ ಈ ಸಿನಿಮಾದ ಹೆಸರನ್ನು ಚಿತ್ರತಂಡ ಅಧಿಕೃತವಾಗಿ ಅನೌನ್ಸ್‌ ಮಾಡಿದೆ. ಅಂದಹಾಗೆ, ಶನಿವಾರ ಸಂಜೆ ಈ ಸಿನಿಮಾದ ಹೆಸರು ಅಧಿಕೃತವಾಗಿ ಹೊರಬಿದ್ದಿದ್ದು, ಸಿನಿಮಾಕ್ಕೆ “ಇಬ್ಬನಿ ತಬ್ಬಿದ ಇಳೆಯಲಿ’ ಎಂಬ ಹೆಸರನ್ನು ಇಡಲಾಗಿದೆ.

Advertisement

ಪ್ರೀತಿ ಎಂದರೆ ಏನು? ಹಳೆಯ ನೆನಪುಗಳಾ? ನಾಳೆ ಜತೆಯಾಗಿರಬೇಕು ಎಂಬ ಕನಸುಗಳಾ? ದೂರವಾದ ನಂತರದ ಚಡಪಡಿಕೆಯಾ? ಇದೆಲ್ಲದರ ಸಂಗಮವೇ “ಇಬ್ಬನಿ ತಬ್ಬಿದ ಇಳೆಯಲಿ’. ಇದೊಂದು ಕಾವ್ಯಾತ್ಮಕ ಪ್ರೇಮಕಥೆಯಾಗಿದ್ದು, ಬೇಷರತ್ತಾಗಿ ಪ್ರೀತಿಸುವುದನ್ನು ಸಂಭ್ರಮಿಸುವ ಚಿತ್ರ. ನಿನ್ನೆ, ಇಂದು ಮತ್ತು ನಾಳೆಯ ಪ್ರೀತಿಯನ್ನು ತೋರಿಸುವ ಚಿತ್ರ. ಪ್ರೇಕ್ಷಕರು ಚಿತ್ರವನ್ನು ನೋಡುತ್ತಾ, ಹಾಡುತ್ತಾ, ನಲಿಯುತ್ತಾ, ತಮ್ಮನ್ನೇ ತಾವು ಮರೆಯುವಂತಹ ಚಿತ್ರ ಎಂದಿರುವ ಚಿತ್ರತಂಡ, ಕಾಲೇಜಿನಿಂದ ಪ್ರಾರಂಭವಾಗುವ ಈ ಕಥೆಯು ಪ್ರೌಢಾವಸ್ಥೆಯಲ್ಲಿ ಅಂತ್ಯವಾಗುತ್ತದೆ. ಹೀಗೆ ಒಂದು ದಶಕದ ವಿವಿಧ ಕಾಲಘಟ್ಟವನ್ನು ಈ ಚಿತ್ರವು ಸೂಕ್ಷ್ಮವಾಗಿ ತೋರಿಸಲಿದ್ದು, ಇಲ್ಲಿ ಹಸಿರು ಎಷ್ಟು ಮುಖ್ಯವೋ, ಆಧುನಿಕ ನಗರ ದೃಶ್ಯಗಳು ಸಹ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲ, ಬೇಸಿಗೆಯ ಘಮ, ಚಳಿಗಾಲದ ಹಿತ ಮತ್ತು ಮಳೆಗಾಲದ ಮಾಧುರ್ಯವೂ ಈ ಚಿತ್ರದಲ್ಲಿರಲಿದೆ ಎಂದಿದೆ.

ಈ ಹಿಂದೆ ರಕ್ಷಿತ್‌ ಶೆಟ್ಟಿ ಅವರ “ಸೆವೆನ್‌ ಆಡ್ಸ್‌’ ಚಿತ್ರಕಥಾ ವಿಭಾಗದಲ್ಲಿ ಸಕ್ರಿಯವಾಗಿ “ಕಿರಿಕ್‌ ಪಾರ್ಟಿ’ ಮತ್ತು “ಅವನೇ ಶ್ರೀಮನ್ನಾರಾಯಣ’ ಚಿತ್ರಗಳ ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದ ಮತ್ತು “ಕಥಾಸಂಗಮ’ ಚಿತ್ರದ ‘ರೇನ್‌ಬೋ ಲ್ಯಾಂಡ್‌’ ಕಿರುಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಜಿತ್‌ ಬೆಳ್ಳಿಯಪ್ಪ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಈ ಚಿತ್ರದ ಕಥೆ ಹೊಸತನ ಕೇಳುವುದರಿಂದ, ಹೊಸ ಕಲಾವಿದರು ಮತ್ತು ತಂತ್ರಜ್ಞರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ನಾಯಕ-ನಾಯಕಿಯಾಗಿ ವಿಹಾನ್‌ ಮತ್ತು ಅಂಕಿತಾ ಅಮರ್‌ ಆಯ್ಕೆಯಾಗಿದ್ದು, ಸದ್ಯದಲ್ಲೇ ಎರಡನೆಯ ನಾಯಕಿಯ ಅಧಿಕೃತ ಘೋಷಣೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಇದೊಂದು ಸಂಗೀತಮಯ ಪ್ರೇಮಕಥೆಯಾಗಿದ್ದು, ಗಗನ್‌ ಬದೇರಿಯಾ ಸಂಗೀತ ಸಂಯೋಜಿಸುತ್ತಿದ್ದಾರೆ. “ನ್ಯೂಯಾರ್ಕ್‌ ಫಿಲಂ ಅಕಾಡೆಮಿ’ಯಲ್ಲಿ ಕಲಿತು ಬಂದಿರುವ ಶ್ರೀವತ್ಸನ್‌ ಸೆಲ್ವರಾಜನ್‌, ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಹಿಂದೆ “ಕಥಾ ಸಂಗಮ’ ಚಿತ್ರದ “ಗಿರ್ಗಿಟ್ಲೆ’ ಕಥೆಯನ್ನು ನಿರ್ದೇಶಿಸದ್ದ ಶಶಿಕುಮಾರ್‌, ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

Advertisement

ಅಂದಹಾಗೆ, “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಪ್ರಾರಂಭವಾಗಲಿದ್ದು, 2023ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next