Advertisement

ಪ್ಯಾರಾಲಿಂಪಿಕ್ಸ್‌ : ಭಾರತದ ಗುರಿ 15 ಪದಕ ; ಚೆಫ್ ಡಿ ಮಿಷನ್‌ ಗುರುಶರಣ್‌ ಸಿಂಗ್‌ ವಿಶ್ವಾಸ

01:24 AM Aug 21, 2021 | Team Udayavani |

ಹೊಸದಿಲ್ಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಭಾರತ 5 ಚಿನ್ನ ಸೇರಿದಂತೆ 15 ಪದಕ ಗೆಲ್ಲಲಿದೆ ಎಂದು ಚೆಫ್ ಡಿ ಮಿಷನ್‌ ಗುರುಶರಣ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಕೂಟದ ಇತಿಹಾಸದಲ್ಲೇ ಭಾರತ ಗರಿಷ್ಠ 54 ಕ್ರೀಡಾ ಪಟುಗಳನ್ನು ಕಳುಹಿಸಿರುವುದರಿಂದ ಪದಕಗಳ ಸಂಖ್ಯೆಯಲ್ಲೂ ದಾಖಲೆ ನಿರ್ಮಾಣವಾಗಲಿದೆ ಎಂಬುದು ಗುರುಶರಣ್‌ ಸಿಂಗ್‌ ಲೆಕ್ಕಾಚಾರ.

“ಸಾಧನೆಯ ಲೆಕ್ಕಾಚಾರದಲ್ಲಿ ಖಂಡಿತವಾಗಿಯೂ ಇದು ನಮ್ಮ ಅತ್ಯುತ್ತಮ ಪ್ಯಾರಾಲಿಂಪಿಕ್ಸ್‌ ಕೂಟ ವಾಗಲಿದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ಪ್ಯಾರಾ ಆ್ಯತ್ಲೀಟ್‌ಗಳು ಕಠಿನ ತರಬೇತಿಯೊಂದಿಗೆ ಸಿದ್ಧತೆ ನಡೆಸಿದ್ದಾರೆ. ಎಲ್ಲರೂ ಸ್ಪರ್ಧೆಗಾಗಿ ಕಾತರಗೊಂಡಿದ್ದಾರೆ. ನಾವು 15 ಪದಕಗಳ ನಿರೀಕ್ಷೆಯಲ್ಲಿದ್ದೇವೆ. ಪ್ಯಾರಾ ಆ್ಯತ್ಲೆಟಿಕ್ಸ್‌, ಪ್ಯಾರಾ ಬ್ಯಾಡ್ಮಿಂಟನ್‌, ಪ್ಯಾರಾ ಶೂಟಿಂಗ್‌ ಮತ್ತು ಪ್ಯಾರಾ ಆರ್ಚರಿಯಲ್ಲಿ ನಮಗೆ ಪದಕ ಒಲಿಯುವ ಹೆಚ್ಚಿನ ವಿಶ್ವಾಸವಿದೆ’ ಎಂಬುದಾಗಿ ಸಿಂಗ್‌ ಹೇಳಿದರು.

11 ಕೂಟಗಳಲ್ಲಿ 12 ಪದಕ ಮಾತ್ರ!
ಈ ವರೆಗಿನ ಒಟ್ಟು 11 ಪ್ಯಾರಾಲಿಂಪಿಕ್ಸ್‌ ಕೂಟಗಳಲ್ಲಿ ಭಾರತ ಗೆದ್ದದ್ದು 12 ಪದಕ ಮಾತ್ರ. ಇದರಲ್ಲಿ 4 ಚಿನ್ನ ಸೇರಿದೆ. ಈ ಬಾರಿ 9 ಕ್ರೀಡೆಗಳಲ್ಲಿ ಭಾರತ ಸ್ಪರ್ಧಿಸಲಿದೆ. ಪ್ಯಾರಾ ಕನೋಯಿಂಗ್‌, ಪವರ್‌ಲಿಫ್ಟಿಂಗ್‌, ಟೇಬಲ್‌ ಟೆನಿಸ್‌, ಟೇಕ್ವಾಂಡೊ ಕೂಡ ಇದರಲ್ಲಿ ಸೇರಿದೆ. ಪ್ಯಾರಾ ಹೈಜಂಪರ್‌ ಮರಿಯಪ್ಪನ್‌ ತಂಗವೇಲು ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ ವೇಳೆ 1.86 ಮೀ. ಸಾಧನೆಗೈದದ್ದು ತಂಗವೇಲು ಹೆಗ್ಗಳಿಕೆಯಾಗಿದೆ.

ಹಾಗೆಯೇ ಪ್ಯಾರಾ ಜಾವೆಲಿನ್‌ನಲ್ಲೂ ಭಾರತಕ್ಕೆ ದೊಡ್ಡ ಪದಕದ ನಿರೀಕ್ಷೆ ಇದೆ. ಹಾಲಿ ವಿಶ್ವ ಚಾಂಪಿಯನ್‌ ಸುಂದರ್‌ ಸಿಂಗ್‌ ಗುರ್ಜಾರ್‌, ಅಜಿತ್‌ ಸಿಂಗ್‌ (ಎಫ್46), ವಿಶ್ವದಾಖಲೆಯ ಸರದಾರ ಸಂದೀಪ್‌ ಚೌಧರಿ (ಎಫ್ 64), ನವದೀಪ್‌ ಸಿಂಗ್‌ (ಎಫ್ 41) ಇಲ್ಲಿನ ಭರವಸೆಗಳಾಗಿದ್ದಾರೆ.

Advertisement

ಬ್ಯಾಡ್ಮಿಂಟನ್‌ ಭರವಸೆಗಳು
ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ವಿಶ್ವದ ನಂ.1 ಶಟ್ಲರ್‌, ಎರಡು ಬಾರಿಯ ವಿಶ್ವ ಚಾಂಪಿಯನ್‌ ಪ್ರಮೋದ್‌ ಭಗತ್‌ (ಎಸ್‌ಎಲ್‌3), ವಿಶ್ವದ ನಂ.2 ಶಟ್ಲರ್‌ ಕೃಷ್ಣ ನಗರ್‌ (ಎಸ್‌ಎಚ್‌ 6), ತರುಣ್‌ ಧಿಲ್ಲಾನ್‌ (ಎಸ್‌ಎಲ್‌4) ಕೂಡ ಪದಕ ಗೆಲ್ಲಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಆರ್ಚರಿಯಲ್ಲಿ ರಾಕೇಶ್‌ ಕುಮಾರ್‌, ಶ್ಯಾಮಸುಂದರ್‌ (ಕಂಪೌಂಡ್‌), ವಿವೇಕ್‌ ಚಿಕಾರ, ಹರ್ವಿಂದರ್‌ ಸಿಂಗ್‌ (ರೀಕರ್ವ್‌), ವನಿತಾ ಆರ್ಚರ್‌ ಜ್ಯೋತಿ ಬಲಿಯಾನ್‌ (ಕಂಪೌಂಡ್‌ ಸಿಂಗಲ್ಸ್‌, ಮಿಕ್ಸೆಡ್‌) ರೇಸ್‌ನಲ್ಲಿದ್ದಾರೆ. ಪಿಸಿಐ ಅಧ್ಯಕ್ಷೆ ದೀಪಾ ಮಲಿಕ್‌ ನೇತೃತ್ವದಲ್ಲಿ ಭಾರತದ ಮೊದಲ ತಂಡ ಈಗಾಗಲೇ ಟೋಕಿಯೊ ತಲುಪಿದೆ.

ಟೋಕಿಯೋಗೆ ಆಗಮಿಸಿದ ಪ್ಯಾರಾಲಿಂಪಿಕ್ಸ್‌ ಜ್ಯೋತಿ
ಟೋಕಿಯೊ: ಪ್ಯಾರಾಲಿಂಪಿಕ್ಸ್‌ ಕ್ರೀಡಾಜ್ಯೋತಿ ಶುಕ್ರವಾರ ಆತಿಥೇಯ ತಾಣವಾದ ಟೋಕಿಯೋಗೆ ಆಗಮಿಸಿತು. ಇದೇ ವೇಳೆ ಜಪಾನ್‌ನಲ್ಲಿ ಕೋವಿಡ್‌-19 ಸೋಂಕಿತರ ಸಂಖ್ಯೆ ಕೂಡ ದಾಖಲೆ ಪ್ರಮಾಣಕ್ಕೆ ಏರಿಕೆ ಕಂಡಿತು!

ದೇಶದ 63 ಮುನ್ಸಿಪಾಲಿಟಿ ನಗರಗಳಿಂದ ಆಗಮಿಸಿದ ಒಲಿಂಪಿಕ್ಸ್‌ ಜ್ವಾಲೆಯನ್ನು ಒಟ್ಟುಗೂಡಿಸಿ ಒಂದೇ ಜ್ಯೋತಿಯಾಗಿ ಪರಿವರ್ತಿಸಲಾಯಿತು. ಟೋಕಿಯೊ ಗವರ್ನರ್‌ ಯುರಿಕೊ ಕೊçಕೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವೀಕ್ಷಕರನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಸಾಂಪ್ರದಾಯಿಕ ಟಾರ್ಚ್‌ ರಿಲೇಯನ್ನೂ ರದ್ದುಗೊಳಿಸಲಾಗಿತ್ತು.

“ಮಾಮುಲು ಒಲಿಂಪಿಕ್ಸ್‌ ಕ್ರೀಡಾಪಟುಗಳಿಗಿಂತ ಪ್ಯಾರಾ ಒಲಿಂಪಿಕ್ಸ್‌ ಕ್ರೀಡಾಳುಗಳನ್ನು ಹೆಚ್ಚು ಎಚ್ಚರಿಕೆಯಿಂದ ಗಮನಿಸಬೇಕಿದೆ. ಇಲ್ಲಿ ರಿಸ್ಕ್ ಜಾಸ್ತಿ. ನಮ್ಮ ಜವಾಬ್ದಾರಿ ಹೆಚ್ಚು’ ಎಂಬುದಾಗಿ ಟೋಕಿಯೊ 2020 ಅಧಿಕಾರಿ ಹಿಡೆಮಸ ನಕಮುರ ಹೇಳಿದರು. ಗುರುವಾರ ಮೊದಲ ಬಾರಿಗೆ ಜಪಾನ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ಯಾರಾಲಿಂಪಿಕ್ಸ್‌ಗೆ ಸಂಬಂಧಿಸಿದಂತೆ ಈ ವರೆಗೆ 86 ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿವೆ. ಇವರೆಲ್ಲ ಜಪಾನ್‌ ಮೂಲದ ಕಾರ್ಮಿಕರು ಮತ್ತು ಗುತ್ತಿಗೆದಾರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next