ಬರ್ಮಿಂಗ್ ಹ್ಯಾಂ: ಆತಿಥೇಯ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ತಂಡ ದಿನದ ಗೌರವ ಸಂಪಾದಿಸಿದೆ. ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಅದ್ಭುತ ಜೊತೆಯಾಟದ ಕಾರಣದಿಂದ ಭಾರತ ತಂಡ ದಿನದ ಅಂತ್ಯಕ್ಕೆ ಏಳು ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಆರಂಭದಲ್ಲಿ ಸತತ ವಿಕೆಟ್ ಕಳೆದುಕೊಂಡಿತು. ಕೇವಲ 98 ರನ್ ಗೆ ಐದು ವಿಕೆಟ್ ಕಳೆದುಕೊಂಡಿದ್ದ ವೇಳೆ ಜೊತೆಯಾದ ಪಂತ್ ಮತ್ತು ಜಡೇಜಾ ಆರನೇ ವಿಕೆಟ್ ಗೆ 222 ರನ್ ಜೊತೆಯಾಟವಾಡಿದರು.
ತನ್ನ ಎಂದಿನ ಶೈಲಿಯಲ್ಲೇ ಆಡಿದ ರಿಷಭ್ ಪಂತ್ ಕೇವಲ 111 ಎಸೆತಗಳಲ್ಲಿ 146 ರನ್ ಗಳಿಸಿದರು. ಮೊದಲ ಸೆಶನ್ ನಲ್ಲಿ ತಂಡವನ್ನು ಕಾಡಿದ್ದ ಜೇಮ್ಸ್ ಆ್ಯಂಡರ್ಸನ್ ರನ್ನು ಬಳಿಕ ಪಂತ್ ಕಾಡಿದರು. ಪಂತ್ ಈ ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 20 ಬೌಂಡರಿ ಮತ್ತು ನಾಲ್ಕು ಭರ್ಜರಿ ಸಿಕ್ಸರ್ ಬಾರಿಸಿದರು. ರವೀಂದ್ರ ಜಡೇಜಾ ಅಜೇಯ 83 ರನ್ ಗಳಿಸಿ ಆಡುತ್ತಿದ್ದಾರೆ.
ಇವರಿಬ್ಬರು ಆರನೇ ವಿಕೆಟ್‌ಗೆ 222 ರನ್‌ಗಳ ಬೃಹತ್ ಮೊತ್ತವನ್ನು ಸೇರಿಸಿದರು. ಇದು ಆರನೇ ವಿಕೆಟ್‌ಗೆ ಇಂಗ್ಲೆಂಡ್‌ನಲ್ಲಿ ಭಾರತ ತಂಡ ಮಾಡಿದ ಗರಿಷ್ಠ ಜೊತೆಯಾಟವಾಗಿದೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಜಂಟಿ ನಾಲ್ಕನೇ ಅತ್ಯುನ್ನತ ಜೊತೆಯಾಟವಾಗಿದೆ.
ಇದನ್ನೂ ಓದಿ:ಬಾಸ್ಕೆಟ್‌ಬಾಲ್ ತಂಡಕ್ಕೆ ಇವರನ್ನು ಹುಡುಕಿಕೊಡಿ- ವಿಡಿಯೋ ವೈರಲ್
ವಾಂಖೆಡೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ದಿಲೀಪ್ ವೆಂಗ್‌ಸರ್ಕರ್ ಮತ್ತು ರವಿಶಾಸ್ತ್ರಿ ಅವರ 298* ರನ್ ಗಳ ಜೊತೆಯಾಟ ದಾಖಲೆಯಾಗಿ ಉಳಿದಿದೆ.
ಏಷ್ಯಾದಿಂದ ಹೊರಕ್ಕೆ ಅತೀ ವೇಗದ ಶತಕ ಬಾರಿಸಿದ ಮೂರನೇ ಭಾರತೀಯ ಎಂಬ ಸಾಧನೆಯನ್ನು ಪಂತ್ ಮಾಡಿದರು. ಪಂತ್ 89 ಎಸೆತಗಳಲ್ಲಿ ಶತಕ ಪೂರೈಸಿದರು. ವೆಸ್ಟ್ ಇಂಡೀಸ್ ವಿರುದ್ಧ ಸೆಹ್ವಾಗ್ 78 ಎಸೆತಗಳಲ್ಲಿ ಶತಕ ಬಾರಿಸಿದ್ದು ದಾಖಲೆಯಾಗಿದೆ. ಎರಡನೇ ಸ್ಥಾನದಲ್ಲಿ ಮೊಹ್ಮಮದ್ ಅಜರುದ್ದೀನ್ ಇದ್ದಾರೆ. (88 ಎಸೆತ)
ವಿದೇಶಿ ಟೆಸ್ಟ್ ಗಳಲ್ಲಿ ಆರು ಅಥವಾ ಕೆಳ ಕ್ರಮಾಂಕದಲ್ಲಿ ಪಂತ್ ಮತ್ತು ಜಡೇಜಾ ಭಾರತದ ಪರ ಅತ್ಯುತ್ತಮ ಜೊತೆಯಾಟ ದಾಖಲೆಯನ್ನು ಸರಿಗಟ್ಟಿದರು. ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಮೊಹಮ್ಮದ್ ಅಜರುದ್ದೀನ್ ಕೂಡಾ ಆರನೇ ವಿಕೆಟ್ ಗೆ 222 ರನ್ ಜೊತೆಯಾಟವಾಡಿದ್ದರು.