Advertisement
ಪಂಜದಲ್ಲಿ ಸುಸಜ್ಜಿತ ಆಸ್ಪತ್ರೆ ಇದ್ದರೂ, ಎಲ್ಲ ಅವಧಿಗಳ ಸೇವೆ ದೊರಕುತ್ತಿಲ್ಲ. ಇದರ ವ್ಯಾಪ್ತಿಗೆ ಬರುವ ಗ್ರಾಮಗಳ ಜನತೆಗೆ ಆರೋಗ್ಯ ಸುವ್ಯವಸ್ಥೆ ಕಾಪಾಡುವಲ್ಲಿ ತೀರಾ ತೊಂದರೆ ಅನುಭವಿಸುತ್ತಿದ್ದಾರೆ. ಔಷಧಕ್ಕಾಗಿ ನಿತ್ಯ ಇಲ್ಲಿ ಪರದಾಟ ನಡೆಸುತ್ತಿದ್ದಾರೆ. ರಾತ್ರಿ ಹೊತ್ತು ಚಿಕಿತ್ಸೆಗಾಗಿ ಅಲೆದಾಡುವ ಸ್ಥಿತಿ ಇದೆ. ಹೋಬಳಿ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿರುವ ಈ ಆಸ್ಪತ್ರೆ ಪಂಜದ ಜನತೆಗೆ ಪೂರ್ಣ ಪ್ರಮಾಣದಲ್ಲಿ ಫಲಕಾರಿಯಾಗಿ ಉಳಿದಿಲ್ಲ. ಇಲ್ಲಿನ ಆಸ್ಪತ್ರೆ ಸೇವೆ ಎಲ್ಲ ಗ್ರಾಮಗಳ ಜನತೆಗೆ ಸಿಗುವಂತೆ ಆಗಬೇಕಿದ್ದರೆ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಮೂಲ ಸೌಕರ್ಯ ಒದಗಿಸಬೇಕು. 24 ತಾಸುಗಳ ಸೇವೆ ದೊರಕುವಂತಾಗಬೇಕು.
Related Articles
ಕೊಲ್ಲಮೊಗ್ರು, ಗುತ್ತಿಗಾರು, ಸುಬ್ರಹ್ಮಣ್ಯ ಬೆಳ್ಳಾರೆಗಳಲ್ಲಿ ಪ್ರಾಥಮಿಕ ಆಸ್ಪತ್ರೆಗಳು ಮಾತ್ರ ಕಾರ್ಯಚರಿಸುತ್ತಿವೆ. ಅವುಗಳಲ್ಲಿ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರು ಸೇರಿದಂತೆ ಪ್ರಮುಖ ಸಿಬಂದಿ ಹಾಗೂ ಮೂಲ ಸೌಕರ್ಯ ಕೊರತೆ ಇದೆ. ಪಂಜದ ಈ ಆಸ್ಪತ್ರೆಗೆ ಹೆರಿಗೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ವ್ಯವಸ್ಥೆ ಇಲ್ಲದ ಕಾರಣ ಕಾಣಿಯೂರು ಅಥವಾ ಪುತ್ತೂರಿಗೆ ತೆರಳುವ ಅನಿವಾರ್ಯತೆ ಇದೆ.
Advertisement
ಮಹಿಳಾ ವೈದ್ಯರಿಲ್ಲ, ಹುದ್ದೆ ಖಾಲಿ ಪಂಜ ಆಸ್ಪತ್ರೆಯಲ್ಲಿ ಖಾಯಂ ವೈದ್ಯರು ಇದ್ದಾರೆ. ಇಲ್ಲಿಗೆ ಮುಖ್ಯವಾಗಿ ಮಹಿಳಾ ವೈದ್ಯರ ಅಗತ್ಯತೆಯಿದೆ. ಅಗತ್ಯವಾಗಿ ಸ್ಟಾಫ್ ನರ್ಸ್ ಹುದ್ದೆಯನ್ನು ಸೃಷ್ಟಿಸಿ ಇಲ್ಲಿಗೆ ಮೂರು ಹುದ್ದೆ ಭರ್ತಿಗೊಳಿಸಬೇಕಿದೆ. ಔಷಧ ವಿತರಕ ಹುದ್ದೆ ಖಾಲಿಯಿದೆ. ಶ್ರೂಶಕಿಯರಿದ್ದಾರೆ. ಅವರನ್ನು ಇತರ ಅಸಾಂಕ್ರಾಮಿಕ ರೋಗ ನಿರ್ವಹಣೆಗೆ ನಿಯೋಜಿಸಲಾಗಿದೆ. ಗ್ರೂಪ್ ಡಿ ಒಂದು ಹುದ್ದೆ, ಫಾರ್ಮಸಿಸ್ಟ್ ಹುದ್ದೆ ಖಾಲಿ ಇದೆ. ಕೇಂದ್ರದಲ್ಲಿ ಎಲ್ಲ ಕಾಯಿಲೆಗಳಿಗೆ ಪರೀಕ್ಷೆ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತದೆ. ರೋಗಿಯ ರಕ್ತ, ಮೂತ್ರ ಪರೀಕ್ಷೆಗೆ ಪ್ರಯೋಗಾಲಯದ ವ್ಯವಸ್ಥೆಯಿದೆ. ಎಕ್ಸ್‌ರೇ ವ್ಯವಸ್ಥೆ ಅತ್ಯವಶ್ಯಕವಾಗಿ ಒದಗಿಸಬೇಕಿದೆ. ರಾತ್ರಿ ಹೊತ್ತು ಪರದಾಟ
ಪಂಜ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತು ಅನಾರೋಗ್ಯ ಅಥವಾ ಅವಘಡ ಸಂಭವಿಸಿದರೆ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದಿರುವುದಿಲ್ಲ. ಸಂಜೆ 5ರ ಅನಂತರ ಯಾವುದೇ ಸೇವೆಗಳು ಇಲ್ಲಿ ಸಿಗುವುದಿಲ್ಲ. ಅನ್ಯ ಖಾಸಗಿ ವ್ಯವಸ್ಥೆಗಳೂ ಇಲ್ಲ. 6 ಬೆಡ್‌ನ ವ್ಯವಸ್ಥೆಗಳು ಇಲ್ಲಿದ್ದರೂ, ಅದು ಸಾಕಾಗುವುದಿಲ್ಲ. ಹೆಚ್ಚಿನ ಬೆಡ್ ವ್ಯವಸ್ಥೆ ಒದಗಿಸಿ ಎಲ್ಲ ಸಮಯದಲ್ಲಿಯೂ ಸೇವೆ ಸಿಗುವಂತೆ ಮಾಡುವ ಅಗತ್ಯವಿದೆ. ಹಳೆ ಕಟ್ಟಡ ಅನಾಥ
ಆಸ್ಪತ್ರೆಗೆಂದು 1.95 ಸೆಂಟ್ಸ್ ಜಾಗ ಇದೆ. ಹೆರಿಗೆ ಕೋಣೆ ಸೌಲಭ್ಯ, ಔಷ ಧ ದಾಸ್ತಾನು ಕೊಠಡಿ, ಮಹಿಳಾ ವೈದ್ಯಾಧಿಕಾರಿ ಕೊಠಡಿ, ಸ್ಟಾಫ್ ನರ್ಸ್ ಕೊಠಡಿ, ಕಿರಿಯ ಆರೋಗ್ಯ ಕ್ವಾಟ್ರಸ್‌ಗಳು ಖಾಲಿ ಬಿದ್ದಿವೆ. ಅದಕ್ಕೆ ಸಂಬಂಧಿಸಿ ಅಗತ್ಯ ಸಿಬಂದಿ ಹಾಗೂ ಇತರ ಸವಲತ್ತುಗಳು ಇಲ್ಲ. ಹಳೆಯ ಆಸ್ಪತ್ರೆ ಕಟ್ಟಡ ಅನಾಥವಾಗಿ ಬಿದ್ದಿದೆ. ಸಂಘಟನೆಗಳ ಕಾಳಜಿ
ಪಂಜ ಹೋಬಳಿ ವ್ಯಾಪ್ತಿ ವಿಸ್ತಾರವಾಗಿ ಹರಡಿರುವುದರಿಂದ ಕೇಂದ್ರಕ್ಕೆ ಸಂಬಂಧಿಸಿ ಅಗತ್ಯ ಆ್ಯಂಬುಲೆನ್ಸ್ ಆವಶ್ಯಕತೆಯಿದೆ. 108 ಆರೋಗ್ಯ ಕವಚ ವ್ಯವಸ್ಥೆ ಕೂಡ ಇಲ್ಲಿಲ್ಲ. ಹೀಗಾಗಿ ಸ್ಥಳೀಯ ಯುವ ತೇಜಸ್ಸು ಮತ್ತು ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಸಂಘಟನೆಗಳು ಸ್ಥಳೀಯ ಜನರ ಸಹಕಾರ ಪಡೆದು ಆ್ಯಂಬುಲೆನ್ಸ್ ಹೊಂದಲು ಕಾನ್ಮೋನ್ಮುಖವಾಗಿದೆ. ಮನವಿ ನೀಡಿದರೂ ಫಲವಿಲ್ಲ
ಇಲ್ಲಿ ವಿದ್ಯುತ್ ಸಮಸ್ಯೆ ಇದೆ. ಜನರೇಟರ್ ವ್ಯವಸ್ಥೆಯ ಅಗತ್ಯವೂ ಆಸ್ಪತ್ರೆಗೆ ಇದೆ. ಇಲ್ಲಿಯ ಸಮುಚ್ಛಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿ ದಿನದ ಇಪ್ಪತ್ತ ನಾಲ್ಕು ಗಂಟೆ ಚಿಕಿತ್ಸಾ ಸೇವೆ ಸಿಗುವಂತಾಗಲು ಸಂಬಂಧಪಟ್ಟ ಆರೋಗ್ಯ ಸಚಿವರು ಸಹಿತ ಅಧಿಕಾರಿ ವರ್ಗಕ್ಕೆ ಇಲ್ಲಿಯ ವಿವಿಧ ಸಂಘ ಸಂಸ್ಥೆಗಳು ಮನವಿ ನೀಡಿ ಒತ್ತಾಯಿಸುವ ಪ್ರಯತ್ನ ನಡೆದಿದೆ. ಈವರೆಗೆ ಫಲ ದೊರಕಿಲ್ಲ. ವ್ಯವಸ್ಥೆಗಳಿದ್ದಲ್ಲಿ ಉತ್ತಮ
ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದೇವೆ. ಸ್ಟಾಫ್ ನರ್ಸ್ ಹುದ್ದೆ ಸೃಷ್ಟಿಸಿ ಇನ್ನಿತರ ಕೆಲ ವ್ಯವಸ್ಥೆಗಳು ಇದ್ದಲ್ಲಿ ಇನ್ನೂ ಉತ್ತಮವಾಗಿ ಸೇವೆ ನೀಡಲು ಅನುಕೂಲವಾಗುತ್ತದೆ.
– ಡಾ| ಮಂಜುನಾಥ,
ವೈದ್ಯರು, ಪಂಜ ಆಸ್ಪತ್ರೆ ಮೇಲ್ದರ್ಜೆ ಅತ್ಯವಶ್ಯ
ಪಂಜವು ಸುತ್ತಮುತ್ತಲಿನ 15 ಗ್ರಾಮಗಳಿಗೆ ಕೇಂದ್ರಬಿಂದು. ಬಹಳಷ್ಟು ಬಾರಿ ರಾತ್ರಿ ಹೊತ್ತಿಗೆ ಆಸೌಖ್ಯಕ್ಕೆ ಅಥವಾ ಆವಘಡಕ್ಕೆ ತುತ್ತಾದ ಮಂದಿಗೆ ಪ್ರಥಮ ಚಿಕಿತ್ಸೆ ಕೂಡ ಲಭ್ಯವಾಗದಂತಹ ಸ್ಥಿತಿ ಇದೆ. ಬಹುಮುಖ್ಯವಾಗಿ ಪಂಜ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಬೇಕು.
– ಆಶಿತ್ ಕಲ್ಲಾಜೆ, ಪಂಜ ಬಾಲಕೃಷ್ಣ ಭೀಮಗುಳಿ