ಬಂಟ್ವಾಳ : ನೇತ್ರಾವತಿ ನದಿ ಪಾಣೆಮಂಗಳೂರು ಕಾಂಕ್ರಿಟ್ ಸೇತುವೆಯಲ್ಲಿ ಸನಿಹದಲ್ಲಿ ನೂತನ ನಿರ್ಮಾಣದ ಸೇತುವೆಯ ತಳದಲ್ಲಿ ನಡೆಯುತ್ತಿರುವ ಬೇಸ್‌ಮೆಂಟ್ ನಿರ್ಮಾಣಕ್ಕೆ ಮಣ್ಣನ್ನು ಕೊರೆಯುವ ಯಂತ್ರವು ಭಾರೀ ಜನಾಕರ್ಷಣೆಗೆ ಒಳಗಾಗಿದೆ.
ಇನ್ನೂರ ಐವತ್ತು ಅಡಿ ಎತ್ತರ
ಇನ್ನೂರ ಐವತ್ತು ಅಡಿ ಎತ್ತರದ ಯಂತ್ರದ ಮೂಲಕ ನದಿಯ ತಳಭಾಗವನ್ನು ಬಗೆದು ಅಲ್ಲಿ ಶಿಲೆಯನ್ನು ಹುಡುಕಿ ನೂತನ ಸೇತುವೆಯ ಪಿಲ್ಲರ್ ಎಬ್ಬಿಸಲು ಸಹಾಯ ಆಗುವಂತೆ ಈ ಯಂತ್ರವನ್ನು ಇಲ್ಲಿ ಅಳವಡಿಸಲಾಗಿದೆ.
ನದಿಯ ಅರ್ಧಕ್ಕೆ ಮಣ್ಣನ್ನು ತುಂಬಿಸಿ ಅದರ ಮೇಲೆ ಬೃಹತ್ ಗಾತ್ರದ ಈ ಯಂತ್ರವನ್ನು ತರಲಾಗಿದೆ. ಅದರ ಮೂಲಕ ನೆಲವನ್ನು ಕೊರೆದು ಶಿಲೆಯನ್ನು ಪತ್ತೆಹಚ್ಚಿ ಮುಂದಿನ ಜೂನ್ ತಿಂಗಳ ಮಳೆ ಬರುವ ಮೊದಲು ಪಿಲ್ಲರ್ ಎಬ್ಬಿಸುವುದು ಯೋಜನೆಯ ಉದ್ದೇಶ.
ರಾಷ್ಟ್ರೀಯ ಹೆದ್ದಾರಿ ಮಂಗಳೂರು- ಬೆಂಗಳೂರು ಚತುಷ್ಪಥ ಕಾಮಗಾರಿ ಇನ್ನೊಂದು ಸೇತುವೆ ನಿರ್ಮಾಣ ಯೋಜಿಸಿದ್ದು ಇಲ್ಲಿ ನಿರ್ಮಾಣ ಪೂರ್ವದ ಕೆಲಸವನ್ನು ಮಾಡಲು ಯೋಜಿಸಲಾಗಿದೆ. ಮುಂದಿನ ಜೂನ್ ಒಳಗೆ ನೀರಿನ ಮಟ್ಟಕ್ಕೆ (7 ಮೀ.) ತನಕ ನದಿ ಪಾತಳಿಯಿಂದ ಪಿಲ್ಲರ್ ಎಬ್ಬಿಸುವ ಯೋಜನೆ ತಯಾರಾಗಿದೆ.
ಮಳೆ ತಡವಾದರೆ ಕಾಮಗಾರಿಯ ಬಹುತೇಕ ಭಾಗ ಮುಂದಿನ ಹದಿನೈದು ದಿನಗಳಲ್ಲಿ ಆಗಲಿದೆ. ಮಳೆ ನಿರಂತರ ಬಂದು ನದಿಯಲ್ಲಿ ನೀರಿನ ಹರಿವು ಹೆಚ್ಚಿದರೆ ಕಾಮಗಾರಿ ನಿಲ್ಲಿಸಿ ಮುಂದಿನ ಅಕ್ಟೋಬರ್ ತಿಂಗಳ ಆರಂಭದಲ್ಲಿ ಕೆಲಸಕ್ಕೆ ಪುನರ್ ಚಾಲನೆ ನೀಡುವುದಾಗಿ ತಿಳಿದು ಬಂದಿದೆ.
ಸಾಮಾನ್ಯ ಕೊಳವೆ ಬಾವಿ ಕೊರೆಯುವ ಯಂತ್ರವನ್ನು ಅನೇಕರು ಕಂಡಿದ್ದಾರೆ. ಆದರೆ ಇಂತಹ ಮಾದರಿ, ಕ್ಷಣಾರ್ಧದಲ್ಲಿ ಮಣ್ಣನ್ನು ಬಗೆದು ಮೇಲಕ್ಕೆ ಎತ್ತುವ ಯಂತ್ರದ ಸಾಮರ್ಥ್ಯವನ್ನು ಕಂಡು ಜನರು ಬೆರಗಾಗುತ್ತಾರೆ. ದಿನಂಪ್ರತಿ ಸಾರ್ವಜನಿಕರಿಂದ ಈ ಯಂತ್ರದ ವೀಕ್ಷಣೆ ಹೆಚ್ಚಾಗಿದೆ.