Advertisement

ಪಾಂಡೇಶ್ವರ,ಕೋಟದಲ್ಲಿ ನೀರಿನ ಅಭಾವ

06:30 AM Mar 25, 2018 | Team Udayavani |

ಕೋಟ: ಬೇಸಿಗೆ ತೀವ್ರಗೊಳ್ಳು ತ್ತಿದ್ದಂತೆ, ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಹಲವು ಭಾಗಗಳಲ್ಲಿ ನೀರಿನ ಅಭಾವ ಕಾಣಿಸಿಕೊಂಡಿದೆ. ಪಾಂಡೇಶ್ವರ, ಕೋಟ ಗ್ರಾ.ಪಂ. ವ್ಯಾಪ್ತಿಯಲ್ಲೂ ನೀರಿನ ಸಮಸ್ಯೆ ಇದ್ದು ಶಾಶ್ವತ ಯೋಜನೆ ಇಲ್ಲದ್ದರಿಂದ ವರ್ಷಂಪ್ರತಿ ಸಮಸ್ಯೆಗಳು ಮುಂದುವರಿದಿವೆ. 
 
ಎಲ್ಲೆಲ್ಲಿ ಸಮಸ್ಯೆ? 
ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಗುಂಡ್ಮಿ, ಯಕ್ಷಿಮಠ, ಅಲಿತೋಟ, ಪಾರಂಪಳ್ಳಿ, ಚುಂಚ್‌ಮನೆ, ಹೊಳ್ಳರ ತೋಟ, ಮಧ್ಯಸ್ಥರ ತೋಟ, ಶಾಲಾ ತೋಟ, ಕೆಮ್ಮಣ್ಣು ಕೆರೆ, ಕಾರ್ಕಡ ಸೌರಿಬೈಲು, ಭಟ್ರಕಟ್ಟೆ ಮುಂತಾದ ಭಾಗಗಳಲ್ಲಿ ನೀರಿನ ಸಮಸ್ಯೆ ಇದೆ. ಇಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜಾಗುತ್ತಿದೆ. 

Advertisement

ಪಾಂಡೇಶ್ವರ ಗ್ರಾ.ಪಂ. ವ್ಯಾಪ್ತಿಯ ಮೂಡಹಡು 2ನೇ ವಾರ್ಡ್‌ ಹಾಗೂ ಸೂಳುದ್ರುವಿನಲ್ಲಿ  ಹಲವು ವರ್ಷಗಳಿಂದ ನೀರಿನ ಸಮಸ್ಯೆ ಇದೆ. ಮುಂಜಾಗೃತೆ ಕ್ರಮವಾಗಿ ದಿನಕ್ಕೆ 1 ಗಂಟೆ ಮಾತ್ರ ನೀರು ಬಿಡಲಾಗುತ್ತಿದೆ. ಕೋಟ ಗ್ರಾ.ಪಂ. ವ್ಯಾಪ್ತಿಯ ಗಿಳಿಯಾರಿನ ಹೊನ್ನಾರಿ, ಮೂಡುಗಿಳಿಯಾರುಗಳಲ್ಲಿ ನೀರಿನ ಸಮಸ್ಯೆ ಇದೆ. 2 ವರ್ಷಗಳ ಹಿಂದೆ ಇಲ್ಲಿ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗಿದ್ದು, ಈ ಬಾರಿ ಬೇಡಿಕೆ ಇದ್ದರೆ ಪರಿಶೀಲಿಸುವುದಾಗಿ ಗ್ರಾ.ಪಂ. ಮುಖ್ಯಸ್ಥರು ತಿಳಿಸಿದ್ದಾರೆ.
  
ನೀರಿನ ಮೂಲಗಳು 
ಸಾಲಿಗ್ರಾಮ ಪ.ಪಂ.ನಲ್ಲಿ 15,123 ಜನಸಂಖ್ಯೆ ಇದ್ದು   8 ಸರಕಾರಿ ಬಾವಿ ಹಾಗೂ 1 ಖಾಸಗಿ ಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 5 ಓವರ್‌ ಹೆಡ್‌ ಟ್ಯಾಂಕ್‌ಗಳಿವೆ‌. ಪಾರಂಪಳ್ಳಿ ವಿಷ್ಣುಮೂರ್ತಿ ದೇವಸ್ಥಾನ ಸಮೀಪದ 1 ಬಾವಿ ನಿರುಪಯುಕ್ತಗೊಂಡಿದೆ. 

ಕೋಟ ಗ್ರಾ.ಪಂ. 9858 ಜನಸಂಖ್ಯೆ ಹೊಂದಿದ್ದು ಇಲ್ಲಿ 15 ಸರಕಾರಿ ಬಾವಿಗಳಿವೆ. ಇದರಲ್ಲಿ 3 ನಿರುಪಯುಕ್ತವಾಗಿವೆ. 7 ಓವರ್‌ ಹೆಡ್‌ ಟ್ಯಾಂಕ್‌ಗಳಿದೆ. ಪಾಂಡೇಶ್ವರ ಗ್ರಾ.ಪಂ.ನಲ್ಲಿ 6175 ಜನಸಂಖ್ಯೆ ಹೊಂದಿದ್ದು  4 ಸರಕಾರಿ ಬಾವಿ, 5 ಓವರ್‌ ಹೆಡ್‌ ಟ್ಯಾಂಕ್‌ಗಳಿದೆ.

ಬಹುಗ್ರಾಮ ಯೋಜನೆ ಬೇಕು  
ಸಾಲಿಗ್ರಾಮದ ಕುದ್ರುಮನೆ ಸಮೀಪ ಹಿರೇ ಹೊಳೆಗೆ ಅಣ್ಣೆಕಟ್ಟು ನಿರ್ಮಿಸಿ ನೀರು ಶುದ್ಧೀಕರಿಸಿ ಪಂಚಾಯತ್‌ ವ್ಯಾಪ್ತಿ ಮತ್ತು ಸುತ್ತಲಿನ ಪಾಂಡೇಶ್ವರ, ಐರೋಡಿ, ಕೋಟ, ಕೋಟತಟ್ಟು, ವಡ್ಡರ್ಸೆ ಗ್ರಾಮಗಳಿಗೆ ನೀರು ನೀಡುವ 40 ಕೋಟಿ ವೆಚ್ಚದ ಬೃಹತ್‌ ಯೋಜನೆ ಪ್ರಸ್ತಾವನೆಯಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ ಯೋಜನೆ ಕಾರ್ಯಗತವಾಗಿಲ್ಲ. ಇದು ಆದರೆ ನೀರಿನ ಬವಣೆ ಶಾಶ್ವತವಾಗಿ ನೀಗಲಿದೆ. ಈ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸಬೇಕಿದೆ. 

ಬೇಸಗೆಯ ಆರಂಭದಲ್ಲಿದ್ದೇವೆ.  ಹಲವು ಊರುಗಳಲ್ಲಿ  ಕುಡಿಯುವ ನೀರಿನ ಕೊರತೆ ಬಾಧಿಸತೊಡಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳಿಗೆ ಪರಿಹಾರ ಕ್ರಮ ಕೈಗೊಳ್ಳಲು ಅನುಕೂಲವಾಗಲೆಂಬುದು ಈ ಸರಣಿಯ ಆಶಯ.ನಿಮ್ಮ ಭಾಗದಲ್ಲಿ ನೀರಿನ ಸಮಸ್ಯೆ ಇದ್ದರೆ ನಮಗೆ ತಿಳಿಸಬಹುದು.ವಾಟ್ಸಾಪ್‌ ನಂಬರ್‌ 91485 94259

Advertisement

ಬೇಡಿಕೆ ಇದ್ದಲ್ಲಿ ಕ್ರಮ 
ಕೋಟ ಗ್ರಾ.ಪಂ. ವ್ಯಾಪ್ತಿಯ ಗಿಳಿಯಾರು  ಹೊನ್ನಾರಿ, ಮೂಡುಗಿಳಿಯಾರುಗಳಲ್ಲಿ  ಈ ಹಿಂದೆ ನೀರಿನ ಸಮಸ್ಯೆ ಎದುರಾಗಿತ್ತು. ಈ ಬಾರಿ ಇದುವರೆಗೆ ಟ್ಯಾಂಕರ್‌ ನೀರಿಗೆ ಮನವಿ ಬಂದಿಲ್ಲ. ಬೇಡಿಕೆ ಇದ್ದಲ್ಲಿ ಈ ಕುರಿತು ಕ್ರಮಕೈಗೊಳ್ಳಲಾಗುವುದು.
– ವನಿತಾ ಶ್ರೀಧರ್‌ ಆಚಾರ್ಯ, ಕೋಟ ಗ್ರಾ.ಪಂ. ಅಧ್ಯಕ್ಷರು

ಎರಡು ದಿನಕ್ಕೊಮ್ಮೆ ನೀರು 
ನೀರಿನ ಕೊರತೆ ಸರಿದೂಗಿಸಲು ಸಾಲಿಗ್ರಾಮ ಪ.ಪಂ. ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಅತೀ ಹೆಚ್ಚು ಸಮಸ್ಯೆ ಇರುವ ಕಡೆಗಳಿಗೆ ಪ್ರತಿ ವರ್ಷ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಈ ಬಾರಿ ಕೂಡ  ಟೆಂಡರ್‌ ಕರೆಯಲಾಗಿದೆ. ಇದಕ್ಕೆ 90ಸಾವಿರ ರೂ ಮೀಸಲಿಡಲಾಗುತ್ತದೆ.

– ಶ್ರೀಪಾದ್‌ ಪುರೋಹಿತ್‌, ಮುಖ್ಯಾಧಿಕಾರಿಗಳು ಸಾಲಿಗ್ರಾಮ ಪ.ಪಂ.

ಟ್ಯಾಂಕ್‌ ಹಾಗೂ ಬಾವಿಗಾಗಿ ಜಿ.ಪಂ.ಗೆ ಮನವಿ ಪಾಂಡೇಶ್ವರ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯಿದ್ದು, 1 ಗಂಟೆ ನೀರು ನೀಡುವ ಮೂಲಕ ಸಮಸ್ಯೆ ಸರಿದೂಗಿಸಿಕೊಳ್ಳಲಾಗುತ್ತಿದೆ. 1ಬಾವಿ ಹಾಗೂ ಓವರ್‌  ಹೆಡ್‌ ಟ್ಯಾಂಕ್‌ಗೆ ಅನುದಾನ ನೀಡುವಂತೆ ಜಿ.ಪಂ.ಗೆ ಮನವಿ ಮಾಡಲಾಗಿದೆ. 
– ಗೋವಿಂದ ಪೂಜಾರಿ, ಅಧ್ಯಕ್ಷರು ಪಾಂಡೇಶ್ವರ ಗ್ರಾ.ಪಂ.

– ರಾಜೇಶ್‌ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next