ಸುರತ್ಕಲ್/ಮಂಗಳೂರು: ಯಶವಂತಪುರ -ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ (16595/ 96)ಗೆ ಪ್ರಯಾಣಿಕರ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೆಚ್ಚುವರಿ ಸ್ಲಿಪರ್ ಬೋಗಿ ಅಳವಡಿಸುವಂತೆ ಆಗ್ರಹ ಕೇಳಿ ಬರತೊಡಗಿದೆ.
ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್ 2020ರಲ್ಲಿ ಆರಂಭ ವಾದ ಬಳಿಕ ಪ್ರಯಾಣಿಕರ ಬೇಡಿಕೆ ಕಡಿಮೆಯಾದುದೇ ಇಲ್ಲ. ಈ ರೈಲು ಯಶಸ್ವಿ ಯಾಗಿ ಓಡಾಟ ನಡೆಸುತ್ತ ಬಂದಿದೆ. ಅಲ್ಲದೆ ಬೇರೆ ರೈಲುಗಳಿಗಿಂತ ಬೇಗನೆ, 50 ನಿಮಿಷ ಮುಂಚಿತವಾಗಿ ಬೆಂಗಳೂರು ತಲುಪುವುದು ಕೂಡ ಇದು ಪ್ರಯಾಣಿಕರಿಗೆ ಪ್ರಿಯವಾಗಲು ಕಾರಣ.
ಇದರಿಂದ ನಿತ್ಯ ಪ್ರಯಾಣಿಕರು ಮಾತ್ರವಲ್ಲದೆ ಶಾಸಕರು, ಸಚಿವರು, ಗಣ್ಯರು ಕೂಡ ಶಿರಾಡಿ ಘಾಟಿ ರಸ್ತೆ ಮಾರ್ಗದ ಅವ್ಯವಸ್ಥೆ ಹಾಗೂ ರಸ್ತೆ ಮೂಲಕ ಪ್ರಯಾಣದಲ್ಲಿ ಆಗಾಗ ಆಡಚಣೆ ಎದುರಾಗುತ್ತಿರುವುದರಿಂದ ಈ ರೈಲನ್ನೇ ಆಶ್ರಯಿಸಿದ್ದಾರೆ.
ಮುಖ್ಯವಾಗಿ ಪಂಚಗಂಗಾ ಎಕ್ಸ್‌ಪ್ರೆಸ್ ಒಟ್ಟು 622 ಕಿ.ಮೀ. ದೂರ ಪ್ರಯಾಣಿಸುವ ಮೂಲಕ ಕರಾವಳಿಯ ಮೂರು ಜಿಲ್ಲೆಯಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ತೀರ್ಥಕ್ಷೇತ್ರಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿ. ಯುವಜನರು ಕೂಡ ಪ್ರವಾಸಿ ಆಕರ್ಷಣೆಯಿಂದ ಈ ರೈಲನ್ನು ನೆಚ್ಚಿಕೊಂಡು ಪ್ರಯಾಣ ಬೆಳೆಸುತ್ತಾರೆ. 20 ಪ್ರಮುಖ ನಿಲ್ದಾಣಗಳಲ್ಲಿ ಇದಕ್ಕೆ ನಿಲುಗಡೆಯಿದೆ.
ಈಗಿರುವ ಪಂಚಗಂಗಾ ಎಕ್ಸ್‌ಪ್ರೆಸ್‌ನಲ್ಲಿ 2 ಲಗೇಜ್, 3 ದ್ವಿತೀಯ ದರ್ಜೆ, ತ್ರಿ ಟೈರ್ ಸ್ಲಿಪರ್, 1 ಹವಾನಿಯಂತ್ರಿತ ಹಾಗೂ ಒಟ್ಟು 14 ಸಾಧಾರಣ ದರ್ಜೆಯ ಸ್ಲಿಪರ್ ಬೋಗಿಗಳಿದ್ದು, ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಗೆ ಸಾಕಾಗುತ್ತಿಲ್ಲ. ಇದಕ್ಕಾಗಿ ಹೆಚ್ಚುವರಿ ಎರಡು ಬೋಗಿಗಳನ್ನು ಜೋಡಿಸಬೇಕು ಎನ್ನುತ್ತಾರೆ ಈ ರೈಲಿನ ಯಾನಿಗಳಲ್ಲಿ ಒಬ್ಬರಾದ ರಾಮಚಂದ್ರ ರಾವ್.
ಹೆಚ್ಚಿದ ಬೇಡಿಕೆ
ಈಗ ಸ್ಲಿಪರ್ ಬೋಗಿಗಳು 2- 3 ತಿಂಗಳ ಮೊದಲೇ ವೈಟಿಂಗ್ ಲಿಸ್ಟ್‌ನಲ್ಲಿ ಕಾಣಿಸಿಕೊಳ್ಳ ತೊಡಗಿದ್ದು, ತತ್ಕಾಲ್ ಸೀಟಿಗಾಗಿ ತಡಕಾಟ ನಿತ್ಯ ಇರುತ್ತದೆ. ಕಳೆದ ಎಪ್ರಿಲ್‌ನಿಂದ ಜೂನ್ ವರೆಗೆ ಶೇ. 120ರಷ್ಟು ಬುಕಿಂಗ್ ಆಗಿದ್ದು, ದಾಖಲೆ ಬರೆದಿದೆ. ಸುರತ್ಕಲ್‌ನಲ್ಲಿ ಬುಕಿಂಗ್‌ಗೆ ಹೆಚ್ಚಿನ ಸಾಲು ಕಂಡು ಬರುತ್ತಿದೆ. ಸುರತ್ಕಲ್ ಸುತ್ತಮುತ್ತ ಈ ರೈಲು ಪ್ರಯಾಣಕ್ಕೆ ಬೇಡಿಕೆಗೆ ತಕ್ಕಂತೆ ಸೀಟು ಸಿಗದೆ ಕೊನೆಗೆ ಸಿಕ್ಕಿದ ಬಸ್ ಏರಿ ಹೋಗುವ ಬವಣೆ ಪ್ರಯಾಣಿಕರದ್ದಾಗಿದೆ.
ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿಗೆ ಬೇಡಿಕೆ ಬಂದಿದೆ. ಈ ಕುರಿತ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ.
-ಅನೀಶ್ ಹೆಗ್ಡೆ, ಚೀಫ್ ಪಬ್ಲಿಕ್ ರಿಲೇಶನ್ಸ್ ಆಫೀಸರ್, ನೈಋತ್ಯ ರೈಲ್ವೇ