Advertisement

Panchaganga Express Train: ಹೆಚ್ಚುವರಿ ಬೋಗಿಗಿಂತ ಹೊಸ ರೈಲು ಸೂಕ್ತ

11:41 PM Aug 19, 2023 | Team Udayavani |

ಕುಂದಾಪುರ: ಯಶವಂತಪುರ-ಕಾರವಾರ ಮಧ್ಯೆ ಪ್ರತಿದಿನ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲು ಕರಾವಳಿಗರ ಜೀವನಾಡಿಯಾಗಿದ್ದು, ಅದಕ್ಕೆ ಹೆಚ್ಚುವರಿ ಬೋಗಿ ಅಳವಡಿಸಿದರೆ ನಿಧಾನಗತಿಯ ಸಂಚಾರದಿಂದ ವಿಳಂಬವಾಗಲಿದೆ. ಅದಕ್ಕಿಂತ ಹೊಸ ರೈಲೇ ಸೂಕ್ತ ಎನ್ನುವ ಈ ಹಿಂದಿನ ಬೇಡಿಕೆಯನ್ನು ಕುಂದಾಪುರ ಹಾಗೂ ಉತ್ತರ ಕನ್ನಡ ಭಾಗದ ರೈಲು ಪ್ರಯಾಣಿಕರ ಸಮಿತಿ ಪುನರುಚ್ಚರಿಸಿದೆ.

Advertisement

ಬೆಂಗಳೂರಿನಿಂದ ತಡವಾಗಿ ಹೊರಟು ಬೇಗನೆ ಕರಾವಳಿ ತಲುಪುವ ಹೆಚ್ಚುವರಿ ರೈಲಿಗಾಗಿ ನಿರಂತರ ಆಗ್ರಹಿಸಲಾಗುತ್ತಿದ್ದು, ಈಗಿರುವ ಬೆಂಗಳೂರು – ಮೈಸೂರು – ಮಂಗಳೂರು ರೈಲನ್ನು ಸುರತ್ಕಲ್‌, ಉಡುಪಿ, ಮುಡೇìಶ್ವರದವರೆಗೆ ವಿಸ್ತರಣೆ ಮಾಡಿ ಅಥವಾ ವಿಶೇಷ ರೈಲನ್ನೇ ಖಾಯಂ ಮಾಡಿ ಎನ್ನುವ ಬೇಡಿಕೆ ಬಲವಾಗಿ ಕೇಳಿ ಬಂದಿದೆ.

ಸಮಸ್ಯೆಯೇನು?
14 ಬೋಗಿಗಳಿರುವ ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ಬೋಗಿ ಅಳವಡಿಸಿದರೆ ಘಾಟಿ ಪ್ರದೇಶದಲ್ಲಿ ತೀರಾ ನಿಧಾನಗತಿಯಲ್ಲಿ ಸಂಚರಿಸು ವಂತಾಗಲಿದೆ. ಘಾಟಿಯ ಕ್ರಾಸಿಂಗ್‌ನಲ್ಲಿ ಸಾಧ್ಯವಿರುವ ಅತ್ಯುತ್ತಮ ಸಮಯದಲ್ಲಿ ಬೆಂಗಳೂರು – ಕರಾವಳಿಯ ರೈಲುಗಳು ಓಡುತ್ತಿದ್ದು, ಹೆಚ್ಚುವರಿಯಾಗಿ ಕೋಚ್‌ ಹಾಕಿದರೆ ಘಾಟ್‌ ಕ್ರಾಸಿಂಗ್‌ ಸಂಪೂರ್ಣ ಹಾಳಾಗಲಿದೆ. ಅಲ್ಲಿಂದ ರೈಲುಗಳು ಕನಿಷ್ಠ 2-3 ಗಂಟೆ ಬೇಗ ಹೊರಡಬೇಕಾಗುತ್ತದೆ. ಇದಲ್ಲದೆ ಇಲ್ಲಿಂದ ಹೊರಟ ರೈಲು ಬೆಂಗಳೂರಿಗೆ ಬೆಳಗ್ಗೆ ವಿಳಂಬವಾಗಿ ತಲುಪಲಿದೆ. ಇದರಿಂದ ಊರಿನಿಂದ ಹೊರಟು ಮರು ದಿನ ಕಚೇರಿ ಕೆಲಸಕ್ಕೆ ಹೋಗುವವರಿಗೆ ಸಮಸ್ಯೆಯಾಗಲಿದೆ ಎನ್ನುವ ವಾದ ಕುಂದಾಪುರ ರೈಲು ಪ್ರಯಾಣಿಕರ ಸಮಿತಿಯದ್ದು.

ರಾಜ್ಯದ ಉಳಿದೆಡೆಗಳಿಂದ ರಾತ್ರಿ 10ಕ್ಕೆ ಹೊರಟು ಬೆಳಗ್ಗೆ 5.30ರ ವೇಳೆಗೆ ಬೆಂಗಳೂರಿಗೆ ತಲುಪುತ್ತವೆ. ಆದರೆ ಕರಾವಳಿಯ 3 ಜಿಲ್ಲೆಗಳಿಂದ ಮಾತ್ರ ಸಂಜೆ 6ಕ್ಕೆ ಹೊರಟು, ಮರು ದಿನ ಬೆಳಗ್ಗೆ 7 ಗಂಟೆಗೆ ಸುದೀರ್ಘ‌ ಪ್ರಯಾಣದ ಮೂಲಕ ತಲುಪುವ ಅನಿವಾರ್ಯ ಇದೆ. ಈಗ ಹೊಸ ಬೋಗಿ ಅಳವಡಿಸಿದರೆ ಇನ್ನೂ ವಿಳಂಬವಾಗಲಿದೆ. ಬೇಡಿಕೆ ಹೆಚ್ಚಿದ್ದರೆ ಹೊಸ ರೈಲು ಓಡಿಸಲಿ. ಇಲ್ಲದಿದ್ದರೆ ಘಾಟಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ.
– ರಾಜೀವ್‌ ಗಾಂವ್ಕರ್‌,ಅಧ್ಯಕ್ಷರು, ಉತ್ತರ ಕನ್ನಡ ರೈಲ್ವೇ ಸೇವಾ ಸಮಿತಿ

ಪಂಚಗಂಗಾ ರೈಲು ಜನಪ್ರಿಯ ಆಗಿರುವುದೇ ಸೂಕ್ತ ವೇಳಾಪಟ್ಟಿಯ ಕಾರಣಕ್ಕೆ. ಹೆಚ್ಚುವರಿ ಕೋಚ್‌ ಹಾಕಿ, ಈಗಿನ ಸಮಯಕ್ಕೆ ಓಡಿಸಿದರೆ ಸ್ವಾಗತ. ಆದರೆ ಅದರಿಂದ 2-3 ಗಂಟೆ ವಿಳಂಬ ಸಂಚರಿಸುವಂತಾದರೆ ಖಂಡಿತ ವಿರೋಧವಿದೆ. ಜನದಟ್ಟಣೆ ಹೆಚ್ಚಿರುವುದರಿಂದ ಹೊಸ ರೈಲು ಆರಂಭಿಸುವುದೇ ಸೂಕ್ತ.
– ಗಣೇಶ್‌ ಪುತ್ರನ್‌,
ಅಧ್ಯಕ್ಷರು, ಕುಂದಾಪುರ ರೈಲು ಪ್ರಯಾಣಿಕರ ಸಮಿತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next