ಪಣಜಿ: ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ತರಕಾರಿ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಗೋವಾ ರಾಜ್ಯವು ತರಕಾರಿಗೆ ಪ್ರಮುಖವಾಗಿ ಕರ್ನಾಟಕವನ್ನೇ ಅವಲಂಭಿಸಿದೆ.
ಕಳೆದ 3-4 ವರ್ಷಗಳಿಂದ ಗೋವಾದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯಲಾಗುತ್ತಿದೆ. ಗೋವಾದಲ್ಲಿ ಬೆಳೆಯುವ ತರಕಾರಿಗೂ ಕೂಡ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು, ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗದ ಕಾರಣ ಕರ್ನಾಟಕದ ಬೆಳಗಾವಿ ಭಾಗದಿಂದ ಬರುವ ತರಕಾರಿಗೆ ಗೋವಾ ಅವಲಂಭಿತವಾಗಿರುವಂತಾಗಿದೆ.
ಸದ್ಯ ತರಕಾರಿ, ಹಣ್ಣುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಇದನ್ನು ತಪ್ಪಿಸಲು ಜನರು ನಿಂಬೆ ನೀರು, ನಿಂಬೆ ಶರಬತ್, ಹಣ್ಣಿನ ರಸ, ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಇದರಿಂದ ನಿಂಬೆ ಹಾಗೂ ಇತರೆ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ. ಉತ್ತಮ ಗುಣಮಟ್ಟದ ಮಧ್ಯಮ ಗಾತ್ರದ ನಿಂಬೆಹಣ್ಣು 8 ರೂ. ರಂತೆ ಮಾರಾಟವಾಗುತ್ತಿದೆ.
ಮಾವಿನಹಣ್ಣುಗಳ ದರವೂ ಹೆಚ್ಚು
ಗೋವಾದ ಮಾವಿನ ಹಣ್ಣಿನ ರಾಜ ಎಂದು ಪ್ರಸಿದ್ಧಿ ಪಡೆದಿರುವ ಮಾನಕುರಾದ್, ಹಾಪುಸ್, ತೋತಾಪುರಿ, ಸೆಂಡೂರಿ ಹೀಗೆ ನಾನಾ ಬಗೆಯ ಮಾವು ಮಾರುಕಟ್ಟೆ ಪ್ರವೇಶಿಸಿದೆ. ಆದರೆ ಈ ಮಾವು ಸಾಮಾನ್ಯ ಜನರ ಕೈಗೆಟಕುವ ದರಕ್ಕೆ ಇನ್ನೂ ಬಂದಿಲ್ಲ. ಮಾನಕುರಾದ್ ಮಾವು ಡಜನ್‍ಗೆ 2,500-3,000 ರೂ., ಹಾಪುಸ್ 1,000 ರೂ., ಸೆಂಡೂರಿಗೆ 250 ರಿಂದ 300 ರೂ.ವರೆಗೆ ಮಾರಾಟವಾಗುತ್ತಿದೆ.
ಮುಕ್ತ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ:
ಈರುಳ್ಳಿ – 40 ರೂ., ಆಲೂಗಡ್ಡೆ – 40 ರೂ., ಟೊಮೆಟೊ – 50 ರೂ., ಕ್ಯಾರೆಟ್ – 60 ರೂ., ಬೆಂಡೆಕಾಯಿ – 80 ರೂ., ಎಲೆಕೋಸು – 40 ರೂ., ಮೆಣಸಿನಕಾಯಿ – 80 ರೂ. ಹೀಗೆ ಹಣ್ಣು ತರಕಾರಿ ದರ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗುವಂತೆ ಮಾಡಿದೆ.