ಪಣಜಿ: ಗೋವಾ ರಾಜ್ಯಾದ್ಯಂತ ಗೌರಿ ಗಣೇಶ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಪ್ರಸಕ್ತ ಬಾರಿ ಹಬ್ಬದ ಇತರ ಎಲ್ಲ ಖರೀದಿಗಳು ಜೋರಾಗಿ ನಡೆದಿದ್ದರೂ ಕೂಡ ಪಟಾಕಿ ಖರೀದಿ ಮಾತ್ರ ಭಾರಿ ಇಳಿಕೆಯಾಗಿರುವುದು ಕಂಡುಬರುತ್ತಿದೆ. ಇದರಿಂದ ಪಟಾಕಿ ಮಾರಾಟಗಾರರು ಕಂಗಾಲಾಗಿದ್ದಾರೆ.
ಪಟಾಕಿಗಳ ಮಾಲಿನ್ಯದ ಬಗ್ಗೆ ಪೋಷಕರಲ್ಲಿ ಜಾಗೃತಿ ಮತ್ತು ಟಿವಿ, ಸ್ಮಾರ್ಟ್‍ಫೋನ್‍ಗಳಂತಹ ಮಾಧ್ಯಮಗಳು ಮಕ್ಕಳ ಮೇಲೆ ಹೆಚ್ಚಿದ ಪ್ರಭಾವದಿಂದ ಮಕ್ಕಳು ಪಟಾಕಿಯಿಂದ ದೂರ ಸರಿಯುತ್ತಿದ್ದಾರೆ ಎಂದು ಪಟಾಕಿ ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿನ ಮಕ್ಕಳು ಗಣೇಶೋತ್ಸವದಲ್ಲಿ ವಿವಿಧ ರೀತಿಯ ಪಟಾಕಿಗಳನ್ನು ಹಚ್ಚುವ ಮೂಲಕ ತಮ್ಮ ಸಂತೋಷವನ್ನು ಕಂಡುಕೊಳ್ಳುತ್ತಿದ್ದರು. ಪಿಸ್ತೂಲು, ಭೂ ಚಕ್ರ, ಹೂವಿನ ಕುಂಡ, ಗರ್ನಲ್ ಇತ್ಯಾದಿಗಳನ್ನು ತಂದು ಖುಷಿ ಪಡುತ್ತಿದ್ದರು.
ಆದರೆ ಈಗ ಈ ಟ್ರೆಂಡ್ ಬದಲಾಗಿದೆ ಮತ್ತು ಮಕ್ಕಳು ಸ್ಮಾರ್ಟ್‍ಫೋನ್ ಮತ್ತು ಇತರ ಆಟಗಳಲ್ಲಿ ತಮ್ಮ ಸಂತೋಷವನ್ನು ಕಂಡುಕೊಳ್ಳುತ್ತಿದ್ದಾರೆ. ಇದರಿಂದಾಗಿ ಪಟಾಕಿ ಖರೀದಿಯಿಂದ ಜನ ದೂರ ಸರಿಯುತ್ತಿರುವುದು ಕಂಡುಬರುತ್ತಿದೆ ಎಂದು ಪಣಜಿ ಮಾರುಕಟ್ಟೆಯ ಪಟಾಕಿ ಮಾರಾಟಗಾರರೋರ್ವರು ಅಭಿಪ್ರಾಯಪಟ್ಟಿದ್ದಾರೆ.
ಪಣಜಿಯಲ್ಲಿ ಒಂದೂವರೆ ದಿನಗಳ ಕಾಲ ಪೂಜಿಸಲ್ಪಟ್ಟ ಗಣೇಶನನ್ನು ಸೆ.20ರ ಬುಧವಾರ ಸಂಜೆ ವಿಸರ್ಜನೆ ಮಾಡಲಾಯಿತು. ಇನ್ನೂ ಹೆಚ್ಚಿನ ಮನೆಗಳಲ್ಲಿ 5 ದಿನ ಹಾಗೂ 7 ದಿನ ಗಣೇಶನನ್ನು ಪೂಜಿಸಲಾಗುತ್ತದೆ. ಇದರಿಂದಾಗಿ ಒಂದು ವಾರಗಳ ಕಾಲ ಗೋವಾದಲ್ಲಿ ಗೌರಿ ಗಣೇಶ ಹಬ್ಬದ ವಾತಾವರಣವಿರುತ್ತದೆ.