Advertisement

ಪಣಜಿ: ಮಹದಾಯಿ- ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳಿ

06:09 PM Jul 03, 2023 | Team Udayavani |

ಪಣಜಿ: ಮಹದಾಯಿ ನದಿ ನೀರಿನ ಸಮಸ್ಯೆ ನ್ಯಾಯಾಧೀಕರಣದ ಹೊರಗೆ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚರ್ಚೆ ನಡೆಸಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ನಿಮಗೆ ನಾವು ಬೇಕು ನಮಗೆ ನೀವು ಬೇಕು ಈ ಭಾವನೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇಂತಹ ಭೌಗೋಳಿಕ ಸಮಸ್ಯೆ ಈ ಹಿಂದಿನಿಂದ ಇದೆ. ಗೋವಾದಲ್ಲಿ ಬೆಳಗಾಯಿತೆಂದರೆ ಚಟುವಟಿಕೆ ನಡೆಯಬೇಕಾದರೆ ಕನ್ನಡಿಗರೇ ಬೇಕು ಎಂದು ಪಂಚಮಸಾಲಿ ಪೀಠಾಧ್ಯಕ್ಷ ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನುಡಿದರು.

Advertisement

ಕಸಾಪ ದಕ್ಷಿಣ ಗೋವಾ ಜಿಲ್ಲಾ ಘಟಕ, ಸಾಲಸೇಟ ತಾಲೂಕು ಘಟಕ ಹಾಗೂ ಸ್ನೇಹ ಯುವ ಸಾಂಸ್ಕೃತಿಕ ಸಂಘ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಡಗಾಂವ ಲಕ್ಷ್ಮೀ ಎಂಟರ್‌ಪ್ರೈಸಸ್‌ ಹೋಟೆಲ್‌ನಲ್ಲಿ ನಡೆದ ಕಲಾ ಸಂಗಮ ಗೋವಾ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಹದಾಯಿ ನದಿಯ ಒಂದು ಕೊಡದ ನೀರಿನಲ್ಲಿ ಕರ್ನಾಟಕ ಕೇಳಿರುವುದು ಕೇವಲ ಒಂದು ಲೋಟ ನೀರು ಮಾತ್ರ. ಒಂದು ಲೋಟ ನೀರನ್ನು ನಮ್ಮ ಬಾಗಲಕೋಟೆ, ಗದಗ ಜಿಲ್ಲೆ, ಬೆಳಗಾವಿ ಜಿಲ್ಲೆ, ಸೇರಿದಂತೆ ಉತ್ತರ ಕರ್ನಾಟಕಕ್ಕೆ ಕುಡಿಯುವ ನೀರು ಪೂರೈಸಬೇಕು ಎಂಬುದು ನಮ್ಮ ಆಶಯ.

3.5 ಟಿಎಂಸಿ ನೀರನ್ನು ಕರ್ನಾಟಕಕ್ಕೆ ನೀಡಬೇಕು ಎಂದು ನ್ಯಾಯಾಧಿಕರಣ ಹೇಳಿದೆ. 40 ವರ್ಷದ ಈ ಪ್ರಕರಣದಲ್ಲಿ ಕೋರ್ಟು ಕಚೇರಿ ಎಂದು ಹೇಳುತ್ತ ರಾಜಕಾರಣ ಮಾಡುವುದಕ್ಕಿಂತ ಕೂಡಲೇ ಎರಡೂ ಸರ್ಕಾರದ ಮುಖ್ಯಮಂತ್ರಿಗಳು ಒಂದು ಸಂಧಾನ ರೀತಿಯಲ್ಲಿ, ನ್ಯಾಯಾಧೀಕರಣದ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಎರಡೂ ರಾಜ್ಯಗಳ ಪರಿಸರವಾಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಂಡು ಮಹದಾಯಿ ಸಮಸ್ಯೆ ಬಗೆಹರಿಸಬೇಕು ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನುಡಿದರು.

ಗೋವಾ ಕನ್ನಡಿಗರ ಮನೆ ತೆರವುಗೊಳಿಸಿದ್ದ ಸಂದರ್ಭದಲ್ಲಿ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಈ ನಿರಾಶ್ರಿತ ಕನ್ನಡಿಗರಿಗೆ ಮನವಿ ಮಾಡಿದ್ದೆವು. ಇಷ್ಟೇ ಅಲ್ಲದೆಯೇ ಗೋವಾದ ಅಂದಿನ ಮುಖ್ಯಮಂತ್ರಿ ಮನೋಹರ್‌ ಪರೀಕ್ಕರ್‌ ಅವರನ್ನು ಕೂಡ ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಅಂದು ಕರ್ನಾಟಕ ಸರ್ಕಾರ ಇಲ್ಲಿನ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿಕೊಡಲು ಮುಂದಾಗಿತ್ತು, ಆದರೆ ಕಾರಣಾಂತರಗಳಿಂದ ಅಂದು ನಂತರ ಅದು ಸಾಧ್ಯವಾಗಿಲ್ಲ. ಆದರೆ ಇಂದು ಸಿದ್ಧರಾಮಯ್ಯ ಅವರೇ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾರೆ. ಇದರಿಂದಾಗಿ ಇದೀಗ ಮತ್ತೆ ಇಲ್ಲಿನ ನಿರಾಶ್ರಿತ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಿಕೊಡಲು ಮನವಿ ಮಾಡಲಾಗುವುದು.

Advertisement

ಗೋವಾದಲ್ಲಿ ಕಡಿನಾಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಗಡಿನಾಡಲ್ಲಿ ಬಂದು ಇಲ್ಲಿಯೇ ಕನ್ನಡಿಗರ ಪರ ಹೋರಾಟ ನಡೆಸುತ್ತಿರುವ ಸಿದ್ಧಣ್ಣ ಮೇಟಿ ಅವರನ್ನು ಗಡಿನಾಡ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಕರ್ನಾಟಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ಸ್ವಾಮೀಜಿ ನುಡಿದರು.

ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್‌ ಕಾಮತ್‌, ಕಸಾಪ ಗೋವಾ ರಾಜ್ಯಾಧ್ಯಕ್ಷ ಡಾ| ಸಿದ್ಧಣ್ಣ ಮೇಟಿ, ಕರ್ನಾಟಕದ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ ಹೊಸ್ಮನಿ, ಕಸಾಪ ಗೋವಾ ರಾಜ್ಯ ಗೌರವ ಕಾರ್ಯದರ್ಶಿ ನಾಗರಾಜ ಗೋಂದಕರ್‌, ಕಸಾಪ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಪರಶುರಾಮ ಕಲಿವಾಳ, ಸಾಲಸೇಟ ತಾಲೂಕು ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ, ಚಿತ್ರನಟಿ ಮೀನಾ, ಹಿರಿಯ ಪತ್ರಕರ್ತ ರಹಮತ್‌ ಕಂಚಗಾರ, ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಹಿರಿಯ ಪತ್ರಕರ್ತ ಮಾರುತಿ ಬಡಿಗೇರ, ಸ್ನೇಹಯುವ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ರಂಜಿತಕುಮಾರ್‌, ಮತ್ತಿತರರು ಉಪಸ್ಥಿತರಿದ್ದರು.

ರಾಗಿಣಿ ಸಂಗೀತ ನೃತ್ಯಾಲಯ ಬೆಂಗಳೂರು ತಂಡ, ಪಿ ಆ್ಯಂಡ್‌ ಪಿ ಡಾನ್ಸ್‌ ಅಕಾಡಮಿ ಮಡಗಾಂವ ಗೋವಾ, ಮಧುರ ಮಧುರವಿ ಮಂಜುಳಗಾನ ತಂಡದಿಂದ ಗಾಯನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಪತ್ರಕರ್ತ ಮಾರುತಿ ಬಡಿಗೇರ ಸ್ವಾಗತಿಸಿದರು. ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next