Advertisement

ಪಾಲ್ತಾಡಿ: ಜಲಕ್ಷಾಮ ಆತಂಕ ದೂರ ಮಾಡಿದ ಕೃಷಿಕರು

04:05 PM Dec 17, 2017 | Team Udayavani |

ಸವಣೂರು: ಕೃಷಿಗೆ ನೀರಿಲ್ಲ ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. 650 ಅಡಿ ಬೋರ್‌ವೆಲ್‌ ಕೊರೆದರೂ ಅಂತರ್ಜಲದ ಕರುಣೆ ಉಕ್ಕುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಹೊಳೆಯಲ್ಲಿ ಹರಿಯುತ್ತಿರುವ ನೀರನ್ನು ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಸಿ ಇಂಗಿಸುವ ಮಾದರಿ ಕಾರ್ಯವನ್ನು ಪಾಲ್ತಾಡಿಯ ಮಂಜುನಾಥನಗರ, ನಾಡೋಳಿಯ ಕೃಷಿಕರು ಮಾಡಿದ್ದಾರೆ.

Advertisement

ಜಲಸಂಪನ್ಮೂಲ ಇಲಾಖೆಯಿಂದ ನಿರ್ಮಿಸಿದ ಈ ಅಣೆಕಟ್ಟೆಗೆ ಗ್ರಾ.ಪಂ., ಜಿ.ಪಂ. ಅಥವಾ ಯಾವುದಾದರೂ ಇಲಾಖೆ ಹಲಗೆ ಜೋಡಿಸಲಿ ಎಂದು ಗ್ರಾಮಸ್ಥರು ಕಾಯಲಿಲ್ಲ, ದುಂಬಾಲು ಬೀಳಲಿಲ್ಲ. ಕೃಷಿಕರೇ ಸೇರಿಕೊಂಡು, ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಸಿ, ಬರವನ್ನು ದೂರ ಮಾಡಿದ್ದಾರೆ.

ಬರದಿಂದ ಕೃಷಿಯ ರಕ್ಷಣೆ
ಪಾಲ್ತಾಡಿ ಗ್ರಾಮದ ಮಂಜುನಾಥನಗರದ ನಾಡೋಳಿಯಲ್ಲಿ ಹರಿಯುವ ಗೌರಿ ಹೊಳೆಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಸುವ ಮೂಲಕ ಸುತ್ತಲಿನ 25ಕ್ಕೂ ಹೆಚ್ಚು ಕೃಷಿಕರ ತೋಟಗಳಿಗೆ ನೀರುಣಿಸಲಾಗುತ್ತಿದೆ. ಇದರಿಂದ ಬಿರು ಬೇಸಿಗೆಯಲ್ಲಿ ತೋಟ ಒಣಗುವ ಆತಂಕ ದೂರವಾಗಿದೆ.

2 ಕಿ.ಮೀ. ಉದ್ದ, 40 ಅಡಿ ಅಗಲದ ಈ ಅಣೆಕಟ್ಟೆಯಲ್ಲಿ 10 ಅಡಿ ನೀರು ನಿಲ್ಲುವ ಸಾಮರ್ಥ್ಯವಿದ್ದು, ಸದ್ಯ 9 ಅಡಿ ನೀರಿದೆ. ಈ ಅಣೆಕಟ್ಟೆಯಲ್ಲಿ ಎಪ್ರಿಲ್‌, ಮೇ ತಿಂಗಳವರೆಗೂ ನೀರು ಸಂಗ್ರಹ ಇರುತ್ತದೆ. ಜತೆಗೆ, ಸುತ್ತಲಿನ ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಸಹಕಾರಿ. ಸುತ್ತಲಿನ ಕೆರೆ, ಬಾವಿಗಳ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.

ಕೃಷಿಕರೇ ಕಟ್ಟಿಕೊಂಡ ಸಮಿತಿ
ಅಡಿಕೆ ಬೆಳೆಗಾರರೇ ಹೆಚ್ಚಿರುವ ಈ ಗ್ರಾಮದಲ್ಲಿ ಕೃಷಿಕರೇ ಸೇರಿ ಸಮಿತಿ ರಚಿಸಿಕೊಂಡು ಹಲಗೆ ಅಳವಡಿಸುವ ಕೆಲಸ ಮಾಡುತ್ತಿದ್ದಾರೆ. ಸಮಿತಿಯಲ್ಲಿ ಬಿ.ಕೆ. ರಮೇಶ್‌, ಡಾ| ರಾಮಚಂದ್ರ ಭಟ್‌ ಸಾರಡ್ಕ, ರಮೇಶ್‌ ರಾವ್‌ ನಾಡೋಳಿ, ಸುಬ್ರಹ್ಮಣ್ಯ ನಿಡ್ವಣ್ಣಾಯ, ನಾರಾಯಣ ರೈ ಕುಂಜಾಡಿ, ಸೋಮಪ್ಪ ಗೌಡ ಮುಂತಾದ ಪ್ರಮುಖರಿದ್ದಾರೆ.

Advertisement

ಇದರ ನಿರ್ವಹಣೆಯನ್ನು ರಮೇಶ್‌ ರಾವ್‌ ಮಾಡುತ್ತಿದ್ದಾರೆ. ಅವರ ಮುತುವರ್ಜಿಯಿಂದಲೇ ಜಲಸಂಪನ್ಮೂಲ ಇಲಾಖೆಯ ವತಿಯಿಂದ ಐದು ವರ್ಷಗಳ ಹಿಂದೆ 25 ಲಕ್ಷ ರೂ. ವೆಚ್ಚದಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿತ್ತು. ಕಳೆದ ವರ್ಷ ದುರಸ್ತಿ ಕಾರ್ಯವನ್ನೂ ನಡೆಸಲಾಗಿತ್ತು. ಐದು ವರ್ಷಗಳಿಂದಲೂ ನಿರಂತರವಾಗಿ ನೀರು ಸಂಗ್ರಹಿಸಲಾಗುತ್ತಿದೆ.

ಇಲ್ಲಿನ ಗ್ರಾಮ ವಿಕಾಸ ಸಮಿತಿಯೂ ಜಲ ಸಂರಕ್ಷಣೆಯ ಕುರಿತು ವಿಶೇಷ ಕಾಳಜಿ ವಹಿಸುತ್ತಿದೆ. ಗ್ರಾಮ ವಿಕಾಸದ ಪಂಚ ಕಾರ್ಯಗಳಲ್ಲಿ ಜಲಸಂರಕ್ಷಣೆಯೂ ಒಂದು. ಈ ಗ್ರಾಮದಲ್ಲಿ ಹಲವೆಡೆ ಸಣ್ಣ ಸಣ್ಣ ತೊರೆಗಳಿಗೂ ಮಣ್ಣು ಹಾಗೂ ಅಡಿಕೆ ಮರದ ಹಲಗೆಯನ್ನು ಹಾಕಿ ತಾತ್ಕಾಲಿಕ ಕಟ್ಟಗಳನ್ನು ರಚಿಸಿದ್ದಾರೆ. ಈ ಮೂಲಕ ಜಲ ಸಂರಕ್ಷಣೆಯ ಮಾದರಿ ಕಾರ್ಯ ಮಾಡುತ್ತಿದೆ.

ಜಲಕ್ಷಾಮಕ್ಕೆ ತಡೆ
ಕಿಂಡಿ ಅಣೆಕಟ್ಟಿನ ಉತ್ತಮ ನಿರ್ವಹಣೆಯಿಂದಾಗಿ ಭವಿಷ್ಯದ ಸಂಭಾವ್ಯ ಜಲಕ್ಷಾಮ ತಡೆಗಟ್ಟಬಹುದು. ಕೃಷಿಕರು ಈಗ ಪಂಪ್‌ಗ್ಳಿಗೆ ಆಟೋ ಸ್ಟಾರ್ಟರ್‌ ಅಳವಡಿಸಿರುವ ಕಾರಣ ಅಗತ್ಯಕ್ಕಿಂತ ಹೆಚ್ಚು ನೀರು ವ್ಯಯವಾಗುತ್ತಿದೆ. ಇದನ್ನು ತಡೆಹಿಡಿಯಬೇಕಾಗಿದೆ. ಹೊಳೆಗಳಲ್ಲಿ ಪ್ರತಿ 2 ಕಿ.ಮೀ.ಗೆ ಒಂದರಂತೆ ಕಿಂಡಿ ಅಣೆಕಟ್ಟು ನಿರ್ಮಿಸುವುದು ಅವಶ್ಯ. ನದಿಯ ಪಾತ್ರದಲ್ಲಿ ಹರಿಯುವ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದು ಈ ಕೃಷಿಕರ ಅಭಿಪ್ರಾಯ.

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next