ಮುಂಬಯಿ: ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಪರ್ಯಾಯದ ಪೂರ್ವಭಾವಿ ಸಭೆಯು ಮುಂಬಯಿ ಸಮಿತಿಯ ವತಿಯಿಂದ ಜು. 22ರಂದು ಸಂಜೆ 5ರಿಂದ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯ ಪೇಜಾವರ ಮಠದ ಮಧ್ವ ಭವನದಲ್ಲಿ ಜರಗಲಿದೆ.
ಉಡುಪಿಯಲ್ಲಿ ಶ್ರೀ ಕೃಷ್ಣ ಪೂಜಾ ದೀಕ್ಷಾ ಪರ್ಯಾಯವು ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಆಷ್ಟಮಠದ ಪೀಠಾಧೀಪತಿಗಳು 16 ವರ್ಷಗಳಲ್ಲಿ ಎರಡೆರಡು ವರ್ಷಗಳಂತೆ ಶ್ರೀ ಕೃಷ್ಣನ ಪೂಜೆಯನ್ನು ನೆರವೇರಿಸುತ್ತಾರೆ. 2018, ಜನವರಿ 18 ರಂದು ಉಡುಪಿಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪೂಜಾ ಕೈಂಕರ್ಯವನ್ನು ಸ್ವೀಕರಿಸಲಿದ್ದಾರೆ. ಪರ್ಯಾಯದ ಪೂರ್ವಭಾವಿಯಾಗಿ ಶ್ರೀಪಾದರು ಮೊದಲು ಪಶ್ಚಿಮ ಭಾರತ, ಉತ್ತರ ಭಾರತ, ದಕ್ಷಿಣ
ಭಾರತ ಮತ್ತು ಮುಕ್ತಿನಾಥದಲ್ಲಿ ತೀರ್ಥ ಸ್ಥಾನವನ್ನು ಮಾಡಿ ವಿವಿಧ ನಗರಗಳ ಸಂಚಾರವನ್ನು ಈಗಾಗಲೇ ಕೈಗೊಂಡಿದ್ದಾರೆ.
ಬೆಂಗಳೂರು ನಗರದಲ್ಲಿ ಪವಿತ್ರವಾದ ಚಾತುರ್ಮಾಸ್ಯ ವ್ರತವನ್ನು ಪೂರೈಸಿಕೊಂಡು ಸೆಪ್ಟೆಂಬರ್ 21ರಂದು ಮುಂಬಯಿ ನಗರಕ್ಕೆ ಶ್ರೀಗಳು ಆಗಲಿಸದ್ದಾರೆ. ಶ್ರೀಪಾದರು ಸೆಪ್ಟೆಂಬರ್ 21ರಿಂದ ಅಕ್ಟೋಬರ್ 21ರವರೆಗೆ ಮುಂಬಯಿ ನಗರದಲ್ಲೇ ವಾಸ್ತವ್ಯವಿದ್ದು, ವಿವಿಧೆಡೆಗಳಲ್ಲಿ ಸಂಸ್ಥಾನ ಪೂಜೆ, ಪಾದಪೂಜೆ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ.
ಇದರ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಮುಂಬಯಿ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ, ಶ್ರೀಗಳ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೂಕ್ತವಾದ ಸಲಹೆ-ಸೂಚನೆಗಳನ್ನು ನೀಡುವಂತೆ ಮುಂಬಯಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.