ಕಾರವಾರ: ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಭಾರತಕ್ಕೆ ಬಂದು, ಕಳೆದ ಸುಮಾರು ಆರು ವರ್ಷಗಳಿಂದ ಭಟ್ಕಳದ ನವಾಯತ ಕಾಲೋನಿಯಲ್ಲಿ ವಾಸವಾಗಿದ್ದ ಪಾಕಿಸ್ತಾನಿ ಮಹಿಳೆಯೋರ್ವಳನ್ನು ಬಂಧಿಸುವಲ್ಲಿ ಭಟ್ಕಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಮಹಿಳೆಯನ್ನು ಖತೀಜಾ ಮೆಹರಿನ್ ಎಂದು ಗುರುತಿಸಲಾಗಿದೆ. ಈ ಮಹಿಳೆ ನವಾಯತ ಕಾಲೋನಿಯಲ್ಲಿ 2015ರಿಂದ ಅಕ್ರಮವಾಗಿ ವಾಸ್ತವ್ಯ ಮಾಡಿಕೊಂಡಿದ್ದು ವೀಸಾ ಅಥವಾ ಇಲ್ಲಿ ವಾಸ್ತವ್ಯ ಮಾಡಲು ಪರವಾನಿಗೆಯನ್ನು ಕೂಡಾ ಹೊಂದಿಲ್ಲ ಎನ್ನಲಾಗಿದೆ.
ಪಾಕಿಸ್ತಾನದ ಪೌರಳಾಗಿರುವ ಈಕೆಯು ಭಟ್ಕಳದ ನವಾಯತ ಕಾಲೋನಿಯ ನಿವಾಸಿ ಜಾವೀದ್ ಮೊಹಿದ್ದೀನ ರುಕ್ನುದ್ದೀನ್ ಈತನನ್ನು ಸುಮಾರು ಆರು ವರ್ಷಗಳ ಹಿಂದೆ ದುಬೈಯಲ್ಲಿ ವಿವಾಹವಾಗಿದ್ದಳು. ನಂತರ 2014ರಲ್ಲಿ ಮೂರು ತಿಂಗಳ ವಿಸಿಟಿಂಗ್ ವೀಸಾದೊಂದಿಗೆ ಭಾರತಕ್ಕೆ ಬಂದು ಹಿಂತಿರುಗಿದ್ದ ಈಕೆಯು ಮತ್ತೆ ಪುನ: 2015ರಲ್ಲಿ ಯಾವುದೇ ಸೂಕ್ತ ದಾಖಲೆಯಿಲ್ಲದೇ ಭಾರತದೊಳಕ್ಕೆ ಬಂದು ಗೌಪ್ಯವಾಗಿ ಭಟ್ಕಳದಲ್ಲಿ ತನ್ನ ಮೂವರು ಮಕ್ಕಳೊಂದಿಗೆ ತನ್ನ ಪತಿಯ ಮನೆಯಾದ ನವಾಯತ ಕಾಲೋನಿಯ ವೈಟ್ ಹೌಸ್‌ನಲ್ಲಿ ನೆಲೆಸಿದ್ದಳು. ಅಕ್ರಮವಾಗಿ ಪ್ರವೇಶ ಪಡೆದಿದ್ದರೂ ಈಕೆಯಲ್ಲಿ ಇಲ್ಲಿನ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ, ರೇಶನ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಎಲ್ಲವೂ ಪತ್ತೆಯಾಗಿದ್ದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿಯನ್ನು ಕಲೆ ಹಾಕಿದ ಪೊಲೀಸ್ ಇಲಾಖೆ ಅಕ್ರಮವಾಗಿ ನೆಲೆಸಿರುವುದನ್ನು ಖಚಿತಪಡಿಸಿಕೊಂಡು ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಮನೆಯನ್ನು ಶೋಧ ಮಾಡಿದಾಗ ಈಕೆಯು ಇರುವುದು ಖಚಿತವಾಗಿದ್ದು ಆಕೆಯನ್ನು ಬಂಧಿಸಿ ವಿದೇಶಿಯರ ಕಾಯ್ದೆ ಕಲಂ 14, 14 (ಎ)(ಬಿ), ಹಾಗೂ ಐ.ಪಿ.ಸಿ. ಕಲಂ 468 ಹಾಗೂ 471ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಈಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ:ಚೊಚ್ಚಲ ಟಿ20 ವಿಶ್ವಕಪ್ ವೇಳೆ ನಾನೂ ನಾಯಕತ್ವದ ಆಕಾಂಕ್ಷಿಯಾಗಿದ್ದೆ: ಯುವರಾಜ್ ಸಿಂಗ್
ಈಕೆಯನ್ನು ಪತ್ತೆ ಹಚ್ಚುವಲ್ಲಿ ಎಸ್.ಪಿ. ಶಿವಪ್ರಕಾಶ ದೇವರಾಜು, ಹೆಚ್ಚುವರಿ ಎಸ್.ಪಿ. ಬದರೀನಾಥ, ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ, ಸಿ.ಪಿ.ಐ. ದಿವಾಕರ ಪಿ.ಎಂ. ಇವರ ಮಾರ್ಗದರ್ಶನದಲ್ಲಿ ಭಟ್ಕಳ ನಗರ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ಸುಮಾ ಬಿ., ಸಿಬ್ಬಂದಿಗಳಾದ ನಾರಾಯಣ ನಾಯ್ಕ, ಮಗ್ದುಂ ಪತ್ತೇಖಾನ್, ಲೋಕಪ್ಪ, ಗ್ರಾಮೀಣ ಠಾಣೆಯ ಹೀನಾ ಎಫ್. ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿದ್ದರು.