ಹೊಸದಿಲ್ಲಿ : ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಮುಖ್ಯ ಸಂಪಾದಕ ಶುಜಾತ್ ಬುಖಾರಿಯನ್ನು ಹತ್ಯೆಗೈಯಲು ಬೈಕಿನಲ್ಲಿ ಬಂದಿದ್ದ ಮೂವರ ಪೈಕಿ ಒಬ್ಟಾತನು ಪಾಕ್ ಉಗ್ರ ನವೀದ್ ಜಾಟ್ ಎಂದು ಗುಪ್ತಚರ ದಳ ಹೇಳಿದೆ.
ನವೀದ್ ಜಾಟ್ ಕಾಶ್ಮೀರದಲ್ಲಿನ ಹಲವಾರು ಉಗ್ರ ದಾಳಿಗಳಲ್ಲಿ ಭಾಗಿಯಾಗಿದ್ದವ. ಅಂತೆಯೇ ಆತ ಎನ್‌ಐಎ ವಿಚಕ್ಷಣೆಗೆ ಒಳಪಟ್ಟಿರುವ ಉಗ್ರನಾಗಿದ್ದಾನೆ. ಈತ ಈಚೆಗೆ ಶ್ರೀನಗರ ಆಸ್ಪತ್ರೆಯಿಂದ ಪರಾರಿಯಾಗಿದ್ದ.
ರೈಸಿಂಗ್ ಕಾಶ್ಮೀರ್ ಮುಖ್ಯ ಸಂಪಾದಕ ಶುಜಾತ್ ಬುಖಾರಿ ಅವರ ಹತ್ಯೆ ನಡೆದ ಕೆಲವೇ ತಾಸುಗಳಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಶಂಕಿತ ಹಂತಕರ ಫೋಟೋಗಳನ್ನು ಬಿಡುಗಡೆ ಮಾಡಿದ್ದರು.
ಪೊಲೀಸರಿಗೆ ಸಿಕ್ಕಿರುವ ಸಿಸಿಟಿವಿ ಫೂಟೇಜ್‌ನಲ್ಲಿ ಬೈಕ್‌ನಲ್ಲಿ ಮೂವರು ಉಗ್ರರು ಇದ್ದು ಮುಂದೆ ಕುಳಿತವ ಕಪ್ಪು ಹೆಲ್ಮೆಟ್ ಧರಿಸಿದ್ದ. ಮಧ್ಯದಲ್ಲಿದ್ದನ ಕೈಯಲ್ಲಿ ಬ್ಯಾಗ್ ಇದ್ದು ಆತ ಮುಖವನ್ನು ಮುಚ್ಚಿಕೊಂಡಿದ್ದ. ಈತನ ಬೆನ್ನ ಹಿಂದೆ ಕುಳಿತವ ಕಪ್ಪು ಮುಖವಾಡ ತೊಟ್ಟಿದ್ದ.
ಬುಖಾರಿ ಹಂತಕರನ್ನು ಸೆರೆ ಹಿಡಿಯಲು ಜನರು ತಮಗೆ ತಿಳಿದಿರುವ ಮಾಹಿತಿಯನ್ನು ಕೊಡುವಂತೆ ಪೊಲೀಸರು ಕೋರಿದ್ದರು.
ಪಾಕಿಸ್ಥಾನದ ಮುಲ್ತಾನ್ ನವನಾಗಿರುವ ಮೊಹಮ್ಮದ್ ನವೀದ್ ಜಾಟ್ ಈ ವರ್ಷ ಫೆ.6ರಂದು ಶ್ರೀನಗರದಲ್ಲಿನ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಬಂಧಿತ ನವೀದ್ ಜಾಟ್‌ನನ್ನು ವೈದ್ಯಕೀಯ ಪರೀಕ್ಷೆಗಾಗಿ ಒಯ್ಯುತ್ತಿದ್ದ ಇಬ್ಬರು ಪೊಲೀಸರನ್ನು ಆತನ ಸಂಗಡಿಗರು ಗುಂಡಿಕ್ಕಿ ಕೊಂದು ಜಾಟ್ ಪಲಾಯನಕ್ಕೆ ಸಹಕರಿಸಿದ್ದರು.