Advertisement

ಪಾಕ್‌ ನಾಕಾಣೆ ನಾಟಕ ; ಭಾರತೀಯ ದೂತಾವಾಸ ಕಚೇರಿಯ ಇಬ್ಬರ ಸೆರೆ

02:13 AM Jun 16, 2020 | Sriram |

ಹೊಸದಿಲ್ಲಿ: ಮೊದಲು ನಾಪತ್ತೆ, ಆಮೇಲೆ ತೀವ್ರ ಹುಡುಕಾಟದ ನಾಟಕ, ಪರಿಸ್ಥಿತಿ ಅವಲೋಕನದ ಸುಳ್ಳು ಹೇಳಿಕೆ, ಅನಂತರ ಬಂಧನದ ಪ್ರಸ್ತಾವ ಮತ್ತು ಅಪಘಾತದ ಗಂಭೀರ ಆರೋಪ… ರಾತ್ರಿ ವೇಳೆಗೆ ಬೇಷರತ್‌ ಬಿಡುಗಡೆ… ಸೋಮವಾರ ನಡೆದ ಭಾರತೀಯ ದೂತಾವಾಸ ಕಚೇರಿಯ ಇಬ್ಬರು ಸಿಬಂದಿ ನಾಪತ್ತೆ ಪ್ರಕರಣದಲ್ಲಿ ಪಾಕಿಸ್ಥಾನದ ಅನುಮಾನಾಸ್ಪದ ನಡೆ ಇದು!

Advertisement

ಭಾರತೀಯ ದೂತಾವಾಸ ಅಧಿಕಾರಿಗಳಿಗೆ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಯೋಧರನ್ನು ತಾನೇ ಬಂಧಿಸಿ, ಮೊದಲಿಗೆ ಅದನ್ನು ಹೇಳದೆ ಸುಮ್ಮನಿದ್ದು, ಆನಂತರ ತಾನೇ ಬಂಧಿಸಿದ್ದಾಗಿ ಹೇಳಿದ್ದ ಪಾಕಿಸ್ಥಾನದ ಧೂರ್ತತನ ವಿಶ್ವದ ಮುಂದೆ ಮತ್ತೆ ಸಾಬೀತಾಗಿದೆ. ನಾಟಕೀಯ ಬೆಳವಣಿಗೆ­ಯಿಂದ ಕ್ರುದ್ಧಗೊಂಡು ಭಾರತ ನೀಡಿದ ಎಚ್ಚರಿಕೆಗೆ ಬೆದರಿದ ಪಾಕ್‌ ಸೋಮ ವಾರ ರಾತ್ರಿ ವೇಳೆಗೆ ಇಬ್ಬರನ್ನೂ ಬಿಡುಗಡೆ ಮಾಡಿದೆ. ಯಾವುದೇ ವಿಚಾರಣೆ ನಡೆಸ ಕೂಡದು,ಹಿಂಸೆ ಮಾಡ ಕೂಡದು ಎಂಬ ಭಾರತದ ತೀಕ್ಷ್ಣ ಎಚ್ಚರಿಕೆಗೂ ಪಾಕ್‌ ತಲೆ ಬಾಗಿಸಿದೆ. ಆದರೆ ಇವರಿಬ್ಬರ ದೇಹದಲ್ಲಿ ಕೆಲವು ಗಾಯಗಳ ಗುರುತು ಇದೆ ಎಂದು ಹೈಕಮಿಷನರ್‌ ಕಚೇರಿಯ ಅಧಿಕಾರಿ ಗಳು ಹೇಳಿದ್ದಾರೆ.

ಏನಾಗಿತ್ತು?
ಸೋಮವಾರ ಬೆಳಗ್ಗೆ 8.30. ಇಸ್ಲಾಮಾ ಬಾದ್‌ನಲ್ಲಿರುವ ದೂತಾವಾಸದ ಕಚೇರಿಯ ಸಿಬಂದಿಗೆ ನಾಪತ್ತೆಯಾದ ಇಬ್ಬರು ಯೋಧರು ಸಂಪರ್ಕಕ್ಕೆ ಸಿಗಲಿಲ್ಲ. ತತ್‌ಕ್ಷಣ ಭಾರತದ ವಿದೇಶಾಂಗ ಇಲಾಖೆಯು ಹೊಸದಿಲ್ಲಿಯಲ್ಲಿ ಇರುವ ಪಾಕ್‌ ಹೈಕಮಿಷನ್‌ ಮೂಲಕ ಪಾಕ್‌ ಸರಕಾರಕ್ಕೆ ಈ ವಿಚಾರ ತಲುಪಿಸಿ, ವಿವರ ಸಲ್ಲಿಸುವಂತೆ ಕೇಳಿತು. ಆಗ ಪಾಕ್‌ ಹೇಳಿದ್ದು, “ಸಿಬಂದಿ ನಾಪತ್ತೆ ಬಗ್ಗೆ ಗೊತ್ತಿಲ್ಲ… ಈಗ ವಿಷಯ ನಮ್ಮ ಗಮನಕ್ಕೆ ಬಂದಿದೆ. ಅದನ್ನು ಪರಿಶೀಲಿಸುತ್ತಿದ್ದೇವೆ’.

ಇತ್ತ ಭಾರತದಲ್ಲಿ ತಳಮಳ. ಸಿಬಂದಿ ಏನಾದರು, ಎಲ್ಲಿ ಹೋದರು ಎಂದು ಆತಂಕಮನೆ ಮಾಡಿತ್ತು. ಸಮಯ ಉರುಳಿ ಮಧ್ಯಾಹ್ನ ವಾಯಿತು. ಸಂಜೆಯಾಗುತ್ತಿದ್ದರೂ ಪಾಕ್‌ ಮಾತ್ರ ನಾಪತ್ತೆಯಾದ ಭಾರತೀಯರ ಬಗ್ಗೆ ತುಟಿ ಪಿಟಿಕ್ಕೆನ್ನಲಿಲ್ಲ.

ಭಾರತದ ತಾಕೀತು
ಪಾಕಿಸ್ಥಾನದ ಅಧಿಕೃತ ಮಾಹಿತಿ ಹೊರ ಬೀಳುತ್ತಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಭಾರತದ ವಿದೇಶಾಂಗ ಇಲಾಖೆಯು ಭಾರತದಲ್ಲಿ ರುವ ಪಾಕ್‌ ಉಪ ಹೈ ಕಮಿಷನರ್‌ ಸಯ್ಯದ್‌ ಹೈದರ್‌ ಶಾ ಅವರಿಗೆ ನೋಟಿಸ್‌ ಜಾರಿಗೊಳಿಸಿತು. ಪಾಕ್‌ ಅಧಿಕಾರಿಗಳ ವಶದಲ್ಲಿರುವ ಭಾರತೀಯ ರಾಜತಾಂತ್ರಿಕ ಸಿಬಂದಿಯನ್ನು ಯಾವುದೇ ವಿಚಾರಣೆ ಮಾಡಬಾರದು. ಯಾವುದೇ ರೀತಿಯಲ್ಲಿ ಹಿಂಸಿಸಬಾರದು. ಈ ಕೂಡಲೇ ಅವರನ್ನು ವಾಹನ ಸಹಿತ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಗೆ ರವಾನಿಸಬೇಕು ಎಂದು ತಾಕೀತು ಮಾಡಿತು.

Advertisement

ಮುಯ್ಯಿಗೆ ಮುಯ್ಯಿ?
ವಾರದ ಹಿಂದೆ ಗೂಢಚರ್ಯೆ ನಡೆಸುತ್ತಿದ್ದ ಆರೋಪದಡಿ ಭಾರತವು ಹೊಸದಿಲ್ಲಿಯ ಪಾಕಿಸ್ಥಾನಿ ರಾಯಭಾರಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಬಿದ್‌ ಹುಸೇನ್‌ ಅಬಿದ್‌ (42), ಮೊಹಮ್ಮದ್‌ ತಾಹೀರ್‌ ಖಾನ್‌ (44) ಮತ್ತು ಜಾವೇದ್‌ ಹುಸೇನ್‌ (36) ಎಂಬವರನ್ನು ಭಾರತದಿಂದ ಉಚ್ಚಾಟಿಸಿತ್ತು. ಭಾರತೀಯ ಸೇನೆಗೆ ಸಂಬಂಧಿಸಿದ ಗುಪ್ತ ಮಾಹಿತಿಗಳನ್ನು ಇವರು ಹಣ ಮತ್ತು ಐಫೋನ್‌ ನೀಡುವ ಆಮಿಷ ಒಡ್ಡಿ ಕದಿಯುತ್ತಿದ್ದರು. ಈ ಘಟನೆಯ ಬೆನ್ನಲ್ಲೇ ಪಾಕ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರನ್ನು ತೀವ್ರವಾಗಿ ವಿಚಾರಣೆ ನಡೆಸಿದ ಪಾಕ್‌ ಅಧಿಕಾರಿಗಳು ಮಾನಸಿಕ ಹಿಂಸೆ ನೀಡಿದ್ದರು. ಬಳಿಕ ಭಾರತೀಯ ರಾಯಭಾರಿ ಕಚೇರಿಯ ಮತ್ತೂಬ್ಬ ಅಧಿಕಾರಿಯಾದ ಗೌರವ್‌ ಅಹ್ಲುವಾಲಿಯಾ ಅವರನ್ನು ವಾರದ ಹಿಂದೆ ಐಎಸ್‌ಐ ಏಜೆಂಟ್‌ಗಳು ಹಿಂಬಾಲಿಸಲಾರಂಭಿದ್ದರು. ಇವೆಲ್ಲ ಘಟನೆಗಳ ಬೆನ್ನಲ್ಲೇ ಇಬ್ಬರು ರಾಜತಾಂತ್ರಿಕ ಅಧಿಕಾರಿಗಳನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿದೆ.

ಅಪಘಾತದ
ಕಥೆ ಕಟ್ಟಿದ ಪಾಕ್‌
“ಇಸ್ಲಾಮಾಬಾದ್‌ನ ಎಂಬೆಸಿ ರಸ್ತೆಯಲ್ಲಿ ಭಾರತೀಯ ಸಿಬಂದಿ ಇದ್ದ ಬಿಎಂಡಬ್ಲ್ಯು ಕಾರು ವ್ಯಕ್ತಿಯೊಬ್ಬರ ಮೇಲೆ ಹರಿಯಿತು. ಘಟನೆಯಲ್ಲಿ ವ್ಯಕ್ತಿಗೆ ಮಾರಣಾಂತಿಕ ಗಾಯವಾಗಿದೆ. ಅಪಘಾತ ನಡೆದ ತತ್‌ಕ್ಷಣ ಸಿಬಂದಿ ಘಟನ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ, ಸಿಬಂದಿಯನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪ ಘಾತಕ್ಕೆ ಕಾರಣವಾಗಿರುವ ಕಾರನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಅತಿವೇಗ ಮತ್ತು ಬೇಜವಾಬ್ದಾರಿಯಿಂದ ಕಾರು ಚಲಾಯಿಸಿ ಅಪಘಾತ ಸಂಭವಿಸಿದೆ’ ಎಂದು ಪಾಕಿಸ್ಥಾನದ ಜಿಯೋ ಮಾಧ್ಯಮ ವರದಿ ಮಾಡಿತ್ತು. ಆದರೆ ಅಪಘಾತದ ಬಗ್ಗೆ ಪಾಕಿಸ್ಥಾನದ ಯಾವುದೇ ಅಧಿಕಾರಿ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಗೂ ಆ ಬಗ್ಗೆ ಮಾಹಿತಿ ಒದಗಿಸಿರಲಿಲ್ಲ.

ಪಾಕ್‌ಗೆ ಹರಿಯುವ ನೀರಿಗೆ ತಡೆ
ಭಾರತದ ಪ್ರಮುಖ ಮೂರು ನದಿಗಳಿಂದ ಪಾಕಿಸ್ಥಾನಕ್ಕೆ ಹರಿಯುತ್ತಿರುವ ನೀರನ್ನು ನಮ್ಮಲ್ಲೇ ಉಳಿಸಿಕೊಳ್ಳುವ ಪ್ರಯತ್ನಗಳಿಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಗುಜರಾತ್‌ನ ಬಿಜೆಪಿ ಕಾರ್ಯ ಕರ್ತರು ಮತ್ತು ಬೆಂಬಲಿಗರಿಗಾಗಿ ಆಯೋಜಿಸಲಾಗಿದ್ದ ವರ್ಚುವಲ್‌ ರ್ಯಾಲಿಯಲ್ಲಿ ಮಾತನಾಡಿದ ಅವರು, ಭಾರತ-ಪಾಕ್‌ ಭೂಭಾಗದಲ್ಲಿ ಒಟ್ಟು ಆರು ನದಿಗಳು ಹರಿಯುತ್ತವೆ. ದೇಶ ವಿಭಜನೆಯಾದಾಗ ಆದ ಒಪ್ಪಂದದಂತೆ ಈ ಪೈಕಿ ಮೂರು ನದಿಗಳ ನೀರಿನಲ್ಲಿ ಇಂತಿಷ್ಟನ್ನು ಪಾಕಿಸ್ಥಾನಕ್ಕೆ ಬಿಡಬೇಕಿದೆ. ಆದರೆ ಉಳಿದ ಮೂರು ನದಿಗಳ ನೀರೂ ಪಾಕ್‌ನತ್ತ ಹರಿಯುತ್ತಿದೆ. ಹಾಗಾಗಿ ಒಪ್ಪಂದದಲ್ಲಿ ಉಲ್ಲೇಖವಾಗದ ನದಿಗಳ ನೀರನ್ನು ಭಾರತದ ಕಡೆಗೇ ತಿರುಗಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಆ ಕುರಿತಂತೆ
ಸರಕಾರ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ್ದಾರೆ.

ಪಾಕ್‌ ಮಾಧ್ಯಮಗಳಿಂದಲೇ ಬಹಿರಂಗ
ಸಂಜೆಯ ನಾಪತ್ತೆಯಾದ ಸಿಬಂದಿ ಪಾಕಿಸ್ಥಾನದ ಗುಪ್ತಚರ ಇಲಾಖೆಯಾದ ಐಎಸ್‌ಐ ವಶದಲ್ಲಿರುವುದನ್ನು ಪಾಕಿಸ್ಥಾನಿ ಮಾಧ್ಯಮಗಳೇ ಬಹಿರಂಗಗೊಳಿಸಿದ್ದವು. ಭಾರತೀಯ ರಾಜತಾಂತ್ರಿಕ ಸಿಬಂದಿಯಿದ್ದ ಕಾರು ವ್ಯಕ್ತಿಯೊಬ್ಬನ ಮೇಲೆ ಹರಿದು ಆತ ತೀವ್ರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ ಪೊಲೀಸರು ಭಾರತದ ಇಬ್ಬರು ರಾಜತಾಂತ್ರಿಕ ಸಿಬಂದಿಯನ್ನು ಬಂಧಿಸಿದ್ದಾರೆಂಬ ಸುದ್ದಿ ಹರಿದಾಡಿತ್ತು. ಮಾಧ್ಯಮಗಳಲ್ಲಿ ಈ ವರದಿ ಬಿತ್ತರವಾಗುತ್ತಲೇ ಎಚ್ಚೆತ್ತುಕೊಂಡ ಪಾಕ್‌, “ಹಿಟ್‌ ಆ್ಯಂಡ್‌ ರನ್‌ ಪ್ರಕರಣದಲ್ಲಿ ಅವರಿಬ್ಬರನ್ನೂ ಬಂಧಿಸಲಾಗಿದೆ. ವಾಹನ ಸಹಿತ ಅವರನ್ನು ದಸ್ತಗಿರಿ ಮಾಡಲಾಗಿದೆ’ ಎಂದು ಅಧಿಕೃತವಾಗಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next