Advertisement

DLS ; 401 ರನ್ ಗಳಿಸಿದರೂ ನ್ಯೂಜಿಲ್ಯಾಂಡ್ ಗೆ ಸೋಲು: ಪಾಕಿಸ್ಥಾನಕ್ಕೆ 21 ರನ್‌ ಜಯ

08:17 PM Nov 04, 2023 | Team Udayavani |

ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ರನ್ ಮಳೆ ಮತ್ತೊಂದೆಡೆ ಸುರಿದ ಭಾರಿ ಮಳೆ ಪಂದ್ಯಕ್ಕೆ ಅಡ್ಡಿಯಾಗಿ ಚಿತ್ರಣ ಬದಲಿಸಿತು. ಅಮೋಘ ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ 401 ರನ್ ಗಳಿಸಿದರೂ ಸೋಲು ಅನುಭವಿಸಬೇಕಾಯಿತು. ಪಾಕಿಸ್ಥಾನ DLS ನಿಯಮದ ಅನ್ವಯ 21 ರನ್ ಗಳ ಜಯ ಸಾಧಿಸಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿತು.

Advertisement

ಪಾಕಿಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ನ್ಯೂಜಿಲ್ಯಾಂಡ್ ಬ್ಯಾಟ್ಸ್ ಮ್ಯಾನ್ ರಚಿನ್ ರವೀಂದ್ರ ಅವರ ಅಮೋಘ ಶತಕ, ವಿಲಿಯಮ್ಸನ್ ಅವರ ಅಬ್ಬರದ ಬ್ಯಾಟಿಂಗ್ ಮತ್ತು ಉಳಿದ ಆಟಗಾರರ ಅಮೂಲ್ಯ ಕೊಡುಗೆಯ ಮೂಲಕ 401 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ರಚಿನ್ ರವೀಂದ್ರ 108, ನಾಯಕ ವಿಲಿಯಮ್ಸನ್ 95 ರನ್ ಗಳಿಸಿ ಶತಕದ ಹೊಸ್ತಿಲಿನಲ್ಲಿ ಎಡವಿದರು. ಕಾನ್ವೇ 35, ಡೇರಿಲ್ ಮಿಚೆಲ್ 29, ಚಾಪ್ಮನ್ 39, ಗ್ಲೆನ್ ಫಿಲಿಪ್ಸ್ 41, ಸ್ಯಾಂಟ್ನರ್ 26( ನಾಟೌಟ್ ) ಅವರ ಕೊಡುಗೆ ದೊಡ್ಡ ಮೊತ್ತ ಕಲೆ ಹಾಕಲು ಕಾರಣವಾಯಿತು.

ಫಖರ್ ಜಮಾನ್ ಅಬ್ಬರ

ಗುರಿ ಬೆನ್ನಟ್ಟಿದ ಪಾಕ್ 6 ರನ್ ಆಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತಾದರೂ ಆಬಳಿಕ ಫಖರ್ ಜಮಾನ್ ಅಬ್ಬರಿಸಿದರು. 81ಎಸೆತಗಳಲ್ಲಿ ಔಟಾಗದೆ 126 ರನ್ ಗಳಿಸಿದರು. ಬರೋಬ್ಬರಿ 11 ಸಿಕ್ಸರ್ ಮತ್ತು 8 ಬೌಂಡರಿ ಬಾರಿಸಿದರು. ಜಮಾನ್ ಅವರಿಗೆ ಸಾಥ್ ನೀಡಿದ ನಾಯಕ ಬಾಬರ್ ಅಜಮ್ ಔಟಾಗದೆ 66 ರನ್ ಗಳಿಸಿದರು. 25.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದ್ದ ವೇಳೆ ಮತ್ತೆ ಮಳೆ ಅಡ್ಡಿ ಮಾಡಿತು. ಪಂದ್ಯದ ಫಲಿತಾಂಶವನ್ನು ಡಿಎಲ್ ಎಸ್ ನಿಯಮ ಅನ್ವಯಿಸಿ ಪ್ರಕಟಿಸಲಾಯಿತು.

ಬೆಂಗಳೂರಿನಲ್ಲಿ ಸಂವೇದನಾಶೀಲ ಫಲಿತಾಂಶ ಪಾಕಿಸ್ಥಾನವನ್ನು ಪಂದ್ಯಾವಳಿಯಲ್ಲಿ ಜೀವಂತವಾಗಿರಿಸಿ ಸೆಮಿಸ್‌ನ ಓಟವನ್ನು ಇನ್ನೂ ಮುಕ್ತವಾಗಿರಿಸಿದೆ. ಮತ್ತೊಂದೆಡೆ, ನ್ಯೂಜಿಲ್ಯಾಂಡ್ ನ ಸೋಲು ದಕ್ಷಿಣ ಆಫ್ರಿಕಾ ತಂಡವನ್ನು ಸೆಮಿ ಫೈನಲ್ ಗೆ ಏರುವಂತೆ ಮಾಡಿತು. ಸೆಮಿಗೆ ಅಧಿಕೃತವಾಗಿ ಅರ್ಹತೆ ಪಡೆದ ಎರಡನೇ ತಂಡವಾಗಿದೆ. ಇನ್ನೆರಡು ಸ್ಥಾನಕ್ಕೆ ತೀವ್ರ ಪೈಪೋಟಿ ಆರಂಭವಾಗಿದೆ.

Advertisement

ದಕ್ಷಿಣ ಆಫ್ರಿಕಾ 7ಪಂದ್ಯಗಳಲ್ಲಿ 6 ಜಯ ಸಾಧಿಸಿದ್ದು 12 ಅಂಕಗಳೊಂದಿಗೆ ಸೆಮಿ ಫೈನಲ್ ಗೇರಿದೆ. ನ್ಯೂಜಿಲ್ಯಾಂಡ್ ಆಡಿದ 8ನೇ ಪಂದ್ಯದಲ್ಲಿ 4 ನೇ ಆಘಾತಕಾರಿ ಸೋಲಿನೊಂದಿಗೆ ಹಾದಿ ಕಠಿನ ಮಾಡಿಕೊಂಡಿದೆ. ಮುಂದಿನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಡಲಿದೆ. ಪಾಕಿಸ್ಥಾನ ಕೊನೆಯ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ. ಆ ಪಂದ್ಯವನ್ನು ಶತಾಯ ಗತಾಯ ಗೆಲ್ಲಲೇ ಬೇಕಾದ ಒತ್ತಡವಿದೆ.

ನಾಳೆ ಭಾನುವಾರ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಹಣಾಹಣಿ ಮೊದಲ ಸ್ಥಾನಕ್ಕಾಗಿ ಪೈಪೋಟಿಯ ಪಂದ್ಯ ಎನಿಸಿಕೊಂಡಿದೆ. ಆ ಬಳಿಕ ದಕ್ಷಿಣ ಆಫ್ರಿಕಾಕ್ಕೆ ಅಫ್ಘಾನ್ ವಿರುದ್ಧ ಇನ್ನೊಂದು ಪಂದ್ಯ ಬಾಕಿ ಉಳಿಯಲಿದೆ. ಭಾರತಕ್ಕೆ ನೆದರ್ ಲ್ಯಾಂಡ್ಸ್ ವಿರುದ್ಧ ಪಂದ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next