ಅಬುದಾಭಿ: ತವರಿನಲ್ಲೇ ಸತತವಾಗಿ ಸೋತು ತೀವ್ರ ಸಂಕಟದಲ್ಲಿದ್ದ ಶ್ರೀಲಂಕಾಕ್ಕೆ ಮರುಭೂಮಿಯಲ್ಲಿ ಗೆಲುವಿನ ಟಾನಿಕ್ ಲಭಿಸಿದೆ. ಅಬುದಾಭಿ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನದ ಬ್ಯಾಟಿಂಗ್ ಸರದಿಯನ್ನು ನುಚ್ಚುನೂರು ಮಾಡಿ 21 ರನ್ ಆಂತರದ ನಾಟಕೀಯ ಗೆಲುವು ಸಾಧಿಸಿದೆ.
ಗೆಲುವಿಗೆ 136 ರನ್ನುಗಳ ಸಣ್ಣ ಮೊತ್ತ ಪಡೆದ ಪಾಕಿಸ್ಥಾನ, ಲಂಕೆಯ ಎಡಗೈ ಸ್ಪಿನ್ನರ್ ರಂಗನ ಹೆರಾತ್ ದಾಳಿಗೆ ತತ್ತರಿಸಿ 47.4 ಓವರ್‌ಗಳಲ್ಲಿ 114 ರನ್ನಿಗೆ ಕುಸಿಯಿತು. ಹೆರಾತ್ ಸಾಧನೆ 43ಕ್ಕೆ 6 ವಿಕೆಟ್. ಮೊದಲ ಇನ್ನಿಂಗ್ಸ್‌ನಲ್ಲಿ ಅವರು 93 ರನ್ನಿಗೆ 5 ವಿಕೆಟ್ ಹಾರಿಸಿದ್ದರು.
ಸೋಮವಾರ ಪಾಕಿಸ್ಥಾನದ ಅಂತಿಮ ಆಟಗಾರ ಮೊಹಮ್ಮದ್ ಅಬ್ಟಾಸ್ ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸುವ ಮೂಲಕ ಹೆರಾತ್ ಲಂಕೆಯ ಗೆಲುವನ್ನು ಸಾರಿದರು. ವಿಶೇಷವೆಂದರೆ, ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಹೆರಾತ್‌ಗೆ ಒಲಿದ 400ನೇ ವಿಕೆಟ್ ಆಗಿದೆ. ಟೆಸ್ಟ್ ಇತಿಹಾಸದಲ್ಲಿ ಎಡಗೈ ಸ್ಪಿನ್ನರ್ ಓರ್ವ 400 ವಿಕೆಟ್ ಉರುಳಿಸಿದ ಮೊದಲ ಸಾಧಕನಾಗಿ ಮೂಡಿಬಂದಿದ್ದಾರೆ ರಂಗನ ಹೆರಾತ್. ಇದು ಅವರ 84ನೇ ಟೆಸ್ಟ್.
ಅಂತಿಮ ದಿನದಾಟ ಒಟ್ಟು 16 ವಿಕೆಟ್ ಪತನವನ್ನು ಕಂಡಿತು. 4ಕ್ಕೆ 69 ರನ್ ಮಾಡಿದ್ದ ಶ್ರೀಲಂಕಾದ ದ್ವಿತೀಯ ಇನ್ನಿಂಗ್ಸ್ 138ಕ್ಕೆ ಸಮಾಪ್ತಿಯಾಯಿತು. ಯಾಸಿರ್ ಷಾ 5 ವಿಕೆಟ್ ಕಬಳಿಸಿ ಮಿಂಚಿದರು.
136 ರನ್ ಬೆನ್ನಟ್ಟಲಾರಂಭಿಸಿದ ಪಾಕಿಸ್ಥಾನಕ್ಕೆ ಹೆರಾತ್ 4ನೇ ಓವರಿನಿಂದಲೇ ಏಟು ನೀಡತೊಡಗಿದರು. ಸುರಂಗ ಲಕ್ಮಲ್ ಜತೆ ಬೌಲಿಂಗಿಗೆ ಇಳಿದ ಹೆರಾತ್ ಇದರಲ್ಲಿ ಭರಪೂರ ಯಶಸ್ಸು ಕಂಡರು. ಆಫ್ಸ್ಪಿನ್ನರ್ ದಿಲುÅವಾನ್ ಪೆರೆರ 46 ರನ್ನಿಗೆ 3 ವಿಕೆಟ್ ಕಿತ್ತರು. ಪಾಕ್ ಪರ ಮೊದಲ ಟೆಸ್ಟ್ ಆಡಿದ ಹ್ಯಾರಿಸ್ ಸೊಹೈಲ್ ಸರ್ವಾಧಿಕ 34 ರನ್ ಹೊಡೆದರು.
ಸರಣಿಯ 2ನೇ ಟೆಸ್ಟ್ ದುಬಾೖಯಲ್ಲಿ ಅ. 6ರಿಂದ ಆರಂಭವಾಗಲಿದೆ. ಇದು ಡೇ-ನೈಟ್ ಪಂದ್ಯವೆಂಬುದು ವಿಶೇಷ.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-419 ಮತ್ತು 138. ಪಾಕಿಸ್ಥಾನ-422 ಮತ್ತು 114. ಪಂದ್ಯಶ್ರೇಷ್ಠ: ರಂಗನ ಹೆರಾತ್.