ಶಾರ್ಜಾ: “ಸೂಪರ್ ಫೋರ್’ ಸುತ್ತಿನ ಇನ್ನೆರಡು ಪಂದ್ಯ ಬಾಕಿ ಉಳಿದಿರುವಂತೆಯೇ ಏಷ್ಯಾ ಕಪ್ ಫೈನಲ್ ತಂಡಗಳ ಇತ್ಯರ್ಥವಾಗಿದೆ. ರವಿವಾರದ ಪ್ರಶಸ್ತಿ ಕಾಳಗದಲ್ಲಿ ಪಾಕಿಸ್ಥಾನ ಮತ್ತು ಶ್ರೀಲಂಕಾ ಸೆಣಸಲಿವೆ.
ಬುಧವಾರದ ಮುಖಾಮುಖಿಯಲ್ಲಿ ಪಾಕ್ ಒಂದು ವಿಕೆಟ್ ಅಂತರದಿಂದ ರೋಚಕವಾಗಿ ಅಫ್ಘಾನಿಸ್ಥಾನವನ್ನು ಮಣಿಸಿತು. ಇದರೊಂದಿಗೆ ಅಫ್ಘಾನ್ ಮಾತ್ರವಲ್ಲ, ಭಾರತ ಕೂಡ ಕೂಟದಿಂದ ನಿರ್ಗಮಿಸಿತು. ಇವೆರಡೂ ಸೂಪರ್ ಫೋರ್‌ನಲ್ಲಿನ್ನೂ ಗೆಲುವಿನ ಖಾತೆ ತೆರೆದಿಲ್ಲ. ಉಳಿದಿರುವುದು ಒಂದೇ ಪಂದ್ಯ. ಪಾಕ್ ಮತ್ತು ಲಂಕಾ ಆಡಿದ ಎರಡರಲ್ಲೂ ಗೆದ್ದು ಬಂದಿವೆ.
ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನ 6ಕ್ಕೆ ಕೇವಲ 129 ರನ್ ಮಾಡಿದರೆ, ಪಾಕ್ 19.2 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಬಾರಿಸಿತು. ಆರಂಭಿಕ ಕುಸಿತಕ್ಕೊಳಗಾದ ಪಾಕಿಸ್ಥಾನಕ್ಕೆ ಇಫ್ತಿಕಾರ್ ಅಹ್ಮದ್ ಮತ್ತು ಶದಾಬ್ ಖಾನ್ ರಕ್ಷಣೆ ಒದಗಿಸಿದರು.
ಕೊನೆಯಲ್ಲಿ ನಸೀಮ್ ಶಾ ಸತತ 2 ಸಿಕ್ಸರ್ ಬಾರಿಸಿ ಪಾಕ್ ಜಯಭೇರಿ ಮೊಳಗಿಸಿದರು. ಅಫ್ಘಾನಿಸ್ಥಾನದ ಆರಂಭ ಬಿರುಸಿನಿಂದ ಕೂಡಿತ್ತು. ಆರಂಭಿಕರಾದ ಹಜ್ರತುಲ್ಲ ಜಜಾಯ್ (21) ಮತ್ತು ರೆಹಮಾನುಲ್ಲ ಗುರ್ಬಜ್ (17) 3.5 ಓವರ್‌ಗಳಲ್ಲಿ 36 ರನ್ ಪೇರಿಸಿದರು. ವನ್‌ಡೌನ್‌ನಲ್ಲಿ ಬಂದ ಇಬ್ರಾಹಿಂ ಜದ್ರಾನ್ ಕೂಡ ಬಿರುಸಿನ ಆಟಕ್ಕೆ ಮುಂದಾದರು. 35 ರನ್ ಮಾಡಿದ ಅವರು ಅಫ್ಘಾನ್ ಸರದಿಯ ಗರಿಷ್ಠ ಸ್ಕೋರರ್.
12ನೇ ಓವರ್ ವೇಳೆ ಅಫ್ಘಾನ್ 3 ವಿಕೆಟಿಗೆ 78 ರನ್ ಬಾರಿಸಿ ದೊಡ್ಡ ಮೊತ್ತದ ಸೂಚನೆ ನೀಡಿತ್ತು. ಆದರೆ ಪಾಕಿಸ್ಥಾನದ ಶಿಸ್ತಿನ ಬೌಲಿಂಗ್ ಮುಂದೆ ಅಫ್ಘಾನ್ ತಂಡದ ಆಟ ನಡೆಯಲಿಲ್ಲ. 100ನೇ ಪಂದ್ಯ ಆಡಲಿಳಿದ ನಾಯಕ ಮೊಹಮ್ಮದ್ ನಬಿ ಗೋಲ್ಡನ್ ಡಕ್ ಅವಮಾನಕ್ಕೆ ಸಿಲುಕಿದರು.
ಪಾಕಿಸ್ಥಾನದ ಎಲ್ಲ 5 ಮಂದಿ ವಿಕೆಟ್ ಉರುಳಿಸಲು ಯಶಸ್ವಿಯಾದರು. ಹ್ಯಾರಿಸ್ ರವೂಫ್ 2 ವಿಕೆಟ್ ಕಿತ್ತರೆ, ಉಳಿದವರು ಒಂದೊಂದು ವಿಕೆಟ್ ಕೆಡವಿದರು.