ಇಸ್ಲಾಮಾಬಾದ್ : ಭಾರತೀಯರಿಗೆ ಸ್ವಾಗತಾರ್ಹ ಎನಿಸುವ ಸುದ್ದಿಯೊಂದನ್ನು ಇಂದು ಶುಕ್ರವಾರ ನೀಡಿರುವ ಪಾಕಿಸ್ಥಾನ ‘ಭಾರತದ ಸಿಕ್ಖ್ ಯಾತ್ರಿಕರಿಗಾಗಿ, ಗುರು ನಾನಕ್‌ಅವರ 550ನೇ ಜಯಂತಿಯ ಸಂದರ್ಭದಲ್ಲಿ, ತಾನು ಶೀಘ್ರವೇ ಕರ್ತಾರ್‌ಪುರ ಗಡಿ ಕಾರಿಡಾರ್ ತೆರೆಯುವುದಾಗಿ’ ಹೇಳಿದೆ.
ಪಂಜಾಬ್ ಕ್ಯಾಬಿನೆಟ್ ಸಚಿವ ನವಜ್ಯೋತ್ ಸಿಂಗ್ ಸಿಧು ಅವರು ಪಾಕಿಸ್ಥಾನದ ಈ ಘೋಷಣೆಯನ್ನು ಸ್ವಾಗತಿಸಿದ್ದಾರೆ ಮತ್ತು ಅದಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.
ಪಂಜಾಬ್ ನ ನಾರೋವಾಲ್ ಜಿಲ್ಲೆಯಲ್ಲಿನ ಕರ್ತಾರ್‌ಪುರ ಸಾಹಿಬ್ ಗೆ ಹೋಗುವ ಕಾರಿಡಾರ್ ಮಾರ್ಗವನ್ನು ಗುರು ನಾನಕ್‌ಅವರ 550ನೇ ಜಯಂತಿಯ ಸಂದರ್ಭದಲ್ಲಿ ಪಾಕಿಸ್ಥಾನ ಸಿಕ್ಖ ಯಾತ್ರಿಕರಿಗಾಗಿ ತೆರೆಯಲಿದೆ ಎಂದು ಪಾಕ್ ಪ್ರಕಟನೆ ತಿಳಿಸಿದೆ.
ಸಿಕ್ಖರ ಮೊದಲ ಗುರು, ಗುರು ನಾನಕ್ ಅವರು ಕರ್ತಾರ್‌ಪುರದಲ್ಲಿ ಕೊನೆಯುಸಿರೆಳಿದಿದ್ದರು. 2019ರಲ್ಲಿ ಅವರ ಜಯಂತಿಯನ್ನು ಅಚರಿಸಲಾಗುವುದು.
ಈ ನಿರ್ಧಾರಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಭಿನಂದಿಸಿರುವ ಸಚಿವ, ಮಾಜಿ ಕ್ರಿಕೆಟಿಗ ಸಿಧು ,”ಒಂದೊಮ್ಮೆ ನನಗೆ ಹೋಗಲು ಅನುಮತಿ ನೀಡಲಾದರೆ, ಯಾತ್ರಿಕರ ಮೊದಲ ತಂಡದ ಭಾಗವಾಗಿ ನಾನೇ ಕರ್ತಾರ್‌ಪುರಕ್ಕೆ ಹೋಗುತ್ತೇನೆ; ನನ್ನ ಗೆಳೆಯ ಇಮ್ರಾನ್ ನನ್ನ ಬದುಕನ್ನು ಯಶಸ್ವಿಗೊಳಿಸಿದ್ದಾರೆ; ಅವರು ರಾಜಕಾರಣವನ್ನು ಧರ್ಮದಿಂದ ಪ್ರತ್ಯೇಕಿಸಿದ್ದಾರೆ’ ಎಂದು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.