ಕರಾಚಿ: ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಜನನಿಬಿಡ ಪ್ರದೇಶದಲ್ಲಿ 99 ಪ್ರಯಾಣಿಕರಿರುವ ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನ (ಪಿಐಎ) ಪತನಗೊಂಡಿದ್ದು ಕನಿಷ್ಟ 82 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ -19 ಕಾರಣದಿಂದಾಗಿ ಕೆಲದಿನಗಳ ಹಿಂದಷ್ಟೆ ವಾಯುಯಾನ ನಿರ್ಬಂಧಗಳು ಸಡಿಲಗೊಂಡಿದ್ದವು. ಇದರ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ.
91 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿಗಳನ್ನು ಹೊತ್ತ ಪಿಐಎ ಎ -320 ವಿಮಾನ, ಮಾಡೆಲ್ ಕಾಲೋನಿ ಪ್ರದೇಶದ ಸಮೀಪದಲ್ಲಿರುವ ಜಿನ್ನಾ ಹೌಸಿಂಗ್ ಸೊಸೈಟಿಗೆ ಢಿಕ್ಕಿಯಾಗಿದೆ ಎಂದು ಅಲ್ಲಿನ ವಕ್ತಾರರು ತಿಳಿಸಿದ್ದಾರೆ. ಸ್ಥಳದಲ್ಲಿ ದಟ್ಟ ಹೊಗೆ ಕಂಡುಬರುತ್ತಿದ್ದು ಈ ಕುರಿತ ವಿಡಿಯೋವೊಂದು ಕೂಡ ವೈರಲ್ ಆಗಿದೆ.
ಅಪಘಾತ ಸಂಭವಿಸಿದ ಸ್ಥಳದಿಂದ ಈವರೆಗೆ 82 ಶವಗಳನ್ನು ಹೊರತೆಗೆಯಲಾಗಿದೆ ಎಂದು ಸಿಂಧ್ ಆರೋಗ್ಯ ಸಚಿವ ಅಜ್ರಾ ಪೆಚುಹೋ ಶುಕ್ರವಾರ ತಡರಾತ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಮಾನವು ಮೊದಲು ಮೊಬೈಲ್ ಟವರ್ ಗೆ ಅಪ್ಪಳಿಸಿದ್ದು ನಂತರ ವಸತಿ ಪ್ರದೇಶದ ಮೇಲೆ ಬಿದ್ದಿದೆ. ಪರಿಣಾಮವಾಗಿ ಕನಿಷ್ಟ 25 ಮನೆಗಳು ಜಖಂಗೊಂಡಿದ್ದು 30 ಸ್ಥಳೀಯ ನಿವಾಸಿಗಳು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರಲ್ಲಿ ಸ್ಥಳೀಯ ನಿವಾಸಿಗಳು ಸೇರಿರುವ ಸಾಧ್ಯತೆಯಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಪಿಐಎ ಅಧಿಕಾರಿಯೊಬ್ಬರ ಪ್ರಕಾರ, ವಿಮಾನವು ರಾಡಾರ್‌ನಿಂದ ಕಣ್ಮರೆಯಾಗುವ ಮೊದಲು ಲ್ಯಾಂಡಿಂಗ್ ಗೇರ್‌ನಲ್ಲಿ ಸಮಸ್ಯೆ ಇದೆ ಎಂದು ಕ್ಯಾಪ್ಟನ್ ವಾಯು ಸಂಚಾರ ನಿಯಂತ್ರಣಕ್ಕೆ ಮಾಹಿತಿ ನೀಡಿದ್ದರು ಎಂದು ತಿಳಿಸಿದ್ದಾರೆ.