ಡ್ಯುನೆಡಿನ್: ತೃತೀಯ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ಥಾನವನ್ನು ಜುಜುಬಿ 74 ರನ್ನಿಗೆ ಉದುರಿಸಿದ ನ್ಯೂಜಿಲ್ಯಾಂಡ್, ಏಕದಿನ ಸರಣಿಯನ್ನು ಅಧಿಕಾರಯುತವಾಗಿ ವಶಪಡಿಸಿಕೊಂಡಿದೆ. 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.
ಶನಿವಾರ ಡ್ಯುನೆಡಿನ್‌ನಲ್ಲಿ ನಡೆದ ಮುಖಾಮುಖೀಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ಸರಿಯಾಗಿ 50 ಓವರ್‌ಗಳಲ್ಲಿ 257 ರನ್ನಿಗೆ ಆಲೌಟ್ ಆಯಿತು. ಜವಾಬಿತ್ತ ಪಾಕಿಸ್ಥಾನ ಟ್ರೆಂಟ್ ಬೌಲ್ಟ್ ದಾಳಿಗೆ ತತ್ತರಿಸಿ 27.2 ಓವರ್‌ಗಳಲ್ಲಿ 74 ರನ್ನಿಗೆ ಆಟ ಮುಗಿಸಿತು. ಇದು ಏಕದಿನ ಇತಿಹಾಸದಲ್ಲಿ ಪಾಕಿಸ್ಥಾನದ 3ನೇ ಕನಿಷೃ ಗಳಿಕೆ. ಅಷ್ಟೇ ಅಲ್ಲ, ನ್ಯೂಜಿಲ್ಯಾಂಡಿನಲ್ಲಿ ವಿದೇಶಿ ತಂಡವೊಂದರ ಅತ್ಯಂತ ಕಡಿಮೆ ಸ್ಕೋರ್ ಕೂಡ ಆಗಿದೆ. 17 ರನ್ನಿಗೆ 5 ವಿಕೆಟ್ ಹಾರಿಸಿದ ಬೌಲ್ಟ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಪಾಕಿಸ್ಥಾನದ ಅಗ್ರ ಕ್ರಮಾಂಕದ ಐವರು ಸೇರಿ ಗಳಿಸಿದ ಒಟ್ಟು ರನ್ ಕೇವಲ 13. ಇದರಲ್ಲಿ ಇಬ್ಬರದು ಶೂನ್ಯ ಸಂಪಾದನೆ. 15ನೇ ಓವರ್ ವೇಳೆ 16 ರನ್ನಿಗೆ 6 ವಿಕೆಟ್ ಉದುರಿಸಿಕೊಂಡ ಪಾಕಿಸ್ಥಾನ, ಏಕದಿನದ ಕನಿಷ್ಠ ಸ್ಕೋರ್ (35 ರನ್) ದಾಖಲಿಸುವ ಅಪಾಯಕ್ಕೆ ಸಿಲುಕಿತ್ತು. ಆದರೆ ನಾಯಕ ಸಫìರಾಜ್ ಅಹ್ಮದ್ (ಅಜೇಯ 14), ಕೊನೆಯ ಇಬ್ಬರು ಆಟಗಾರರಾದ ಮೊಹಮ್ಮದ್ ಆಮಿರ್ (14) ಮತ್ತು ರುಮ್ಮನ್ ರಯೀಸ್ (16) ಸೇರಿಕೊಂಡು ತಂಡವನ್ನು ಈ ಅವಮಾನದಿಂದ ಪಾರುಮಾಡಿದರು. ಕೊನೆಯಲ್ಲಿ ಪಾಕ್, ಕಿವೀಸ್ ಕಪ್ತಾನ ಕೇನ್ ವಿಲಿಯಮ್ಸನ್ ಬಾರಿಸಿದ ಮೊತ್ತಕ್ಕಿಂತ ಒಂದು ರನ್ ಹೆಚ್ಚು ಮಾಡಿತು!
ನ್ಯೂಜಿಲ್ಯಾಂಡಿನ ಸವಾಲಿನ ಮೊತ್ತಕ್ಕೆ ವಿಲಿಯಮ್ಸನ್ (73), ಟಯ್ಲರ್ (52), ಗಪ್ಟಿಲ್ (45) ಮತ್ತು ಲ್ಯಾಥಂ (35) ಅವರ ಉತ್ತಮ ಆಟ ಕಾರಣವಾಯಿತು. ಒಂದು ಹಂತದಲ್ಲಿ 3ಕ್ಕೆ 209 ರನ್ ಮಾಡಿದ್ದ ಕಿವೀಸ್, ಆಲೌಟಾಗುವ ಯಾವ ಸೂಚನೆಯೂ ಇರಲಿಲ್ಲ. ಆದರೆ ಅಂತಿಮ 8 ಓವರ್‌ಗಳಲ್ಲಿ 48 ರನ್ ಅಂತರದಲ್ಲಿ 6 ವಿಕೆಟ್ ಹಾರಿಹೋಯಿತು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-50 ಓವರ್‌ಗಳಲ್ಲಿ 257 (ವಿಲಿಯಮ್ಸನ್ 73, ಟಯ್ಲರ್ 52, ಗಪ್ಟಿಲ್ 45, ರಯೀಸ್ 51ಕ್ಕೆ 3, ಹಸನ್ ಅಲಿ 59ಕ್ಕೆ 3). ಪಾಕಿಸ್ಥಾನ-27.2 ಓವರ್‌ಗಳಲ್ಲಿ 74 (ರಯೀಸ್ 16, ಸಫìರಾಜ್ 14, ಆಮಿರ್ 14, ಬೌಲ್ಟ್ 17ಕ್ಕೆ 5, ಮುನ್ರೊ 10ಕ್ಕೆ 2, ಫರ್ಗ್ಯುಸನ್ 28ಕ್ಕೆ 2). ಪಂದ್ಯಶ್ರೇಷ್ಠ: ಟ್ರೆಂಟ್ ಬೌಲ್ಟ್.