ಇಸ್ಲಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಮುಂಬರುವ ಅಮೆರಿಕಾ ಪ್ರವಾಸಕ್ಕಾಗಿ ಪಾಕಿಸ್ಥಾನದ ಮಾಯುಪ್ರದೇಶವನ್ನು ಬಳಿಸಿಕೊಳ್ಳುವ ಭಾರತದ ಮನವಿಯನ್ನು ಪಾಕಿಸ್ಥಾನ ತಿರಸ್ಕರಿಸಿದೆ.
ಸೆಪ್ಟಂಬರ್ 27ರಂದು ಪಾಕಿಸ್ಥಾನದ ವಾಯುಪ್ರದೇಶದ ಮೂಲಕ ಪ್ರಧಾನಿ ಮೋದಿ ಅವರ ವಿಮಾನ ಹಾರಾಟಕ್ಕೆ ಅನುಮತಿ ಕೋರಿ ಭಾರತವು ಅಧಿಕೃತ ಮನವಿಯನ್ನು ಸಲ್ಲಿಸಿತ್ತು.
ಆದರೆ ತನ್ನ ವಾಯುಪ್ರದೇಶದ ಮೂಲಕ ಭಾರತದ ಪ್ರಧಾನಮಂತ್ರಿಯವರ ವಿಮಾನದ ಹಾರಾಟಕ್ಕೆ ಪಾಕಿಸ್ಥಾನ ಅವಕಾಶ ನೀಡುವುದಿಲ್ಲ ಎಂಬ ವಿಚಾರವನ್ನು ಆ ದೇಶದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಪಾಕಿಸ್ಥಾನದ ಈ ನಿರ್ಧಾರ ನಾಗರಿಕ ವಿಮಾನಯಾನ ಸಂಸ್ಥೆಯ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿಲಿದೆ. ಈ ಒಪ್ಪಂದಕ್ಕೆ ಸಹಿ ಹಾಕಿರುವ ವಿಶ್ವದ ರಾಷ್ಟ್ರಗಳಲ್ಲಿ ಪಾಕಿಸ್ಥಾನವೂ ಒಂದಾಗಿದೆ.
ವಿಶ್ವದ ಯಾವುದೇ ರಾಷ್ಟ್ರವೂ ಯುದ್ಧ ಅಥವಾ ಬೇರಿನ್ಯಾವುದೇ ತುರ್ತು ಸನ್ನಿವೇಶಗಳ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ಪ್ರಯಾಣಿಕರ ವಿಮಾನಕ್ಕೆ ತನ್ನ ವಾಯುಮಾರ್ಗ ಬಳಕೆಗೆ ಅನುಮತಿಯನ್ನು ನಿರಾಕರಿಸುವಂತಿಲ್ಲ. ಒಂದುವೇಳೆ ಈ ವಿಚಾರವನ್ನು ಭಾರತವು ಜಾಗತಿಕ ವೇದಿಕೆಯಲ್ಲಿ ಪ್ರಸ್ತಾಪ ಮಾಡಿದರೆ ತನ್ನ ಈ ನಿರ್ಧಾರಕ್ಕೆ ಪಾಕಿಸ್ಥಾನ ಭಾರೀ ಪ್ರಮಾಣದ ದಂಡ ತೆರಬೇಕಾಗಿಬರಬಹುದು.