Advertisement

ಅಂಧರ ಟಿ-20 ವಿಶ್ವಕಪ್‌ ಕ್ರಿಕೆಟ್‌ ಪಾಕಿಸ್ಥಾನವನ್ನು ಮಣಿಸಿದ ಭಾರತ 

03:45 AM Feb 13, 2017 | Team Udayavani |

ಬೆಂಗಳೂರು: ಲೀಗ್‌ ಹಂತದಿಂದಲೂ ಸೋಲಿಲ್ಲದ ಸರದಾರನಾಗಿ ಮಿಂಚಿದ್ದ ಪಾಕಿಸ್ಥಾನ ತಂಡವನ್ನು ರವಿವಾರದ ಪ್ರಶಸ್ತಿ ಕಾಳಗದಲ್ಲಿ 9 ವಿಕೆಟ್‌ಗಳಿಂದ ಮಣಿಸಿದ ಭಾರತ ಸತತ 2ನೇ ಬಾರಿಗೆ ಅಂಧರ ಟಿ-20 ವಿಶ್ವಕಪ್‌ ಕ್ರಿಕೆಟ್‌ ಚಾಂಪಿಯನ್‌ ಆಗಿದೆ.

Advertisement

ರವಿವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಮೊದಲು  ಬ್ಯಾಟಿಂಗ್‌ ಮಾಡಿದ ಪಾಕಿಸ್ಥಾನ ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿ 9 ವಿಕೆಟಿಗೆ 197 ರನ್‌ ಪೇರಿಸಿತು. ಜವಾಬಿತ್ತ ಭಾರತ 17.4 ಓವರ್‌ಗಳಲ್ಲಿ ಒಂದೇ ವಿಕೆಟ್‌ ನಷ್ಟಕ್ಕೆ 200 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ಭಾರತ 2012ರ ಪ್ರಥಮ ಅಂಧರ ಟಿ-20 ವಿಶ್ವಕಪ್‌ ಪಂದ್ಯಾವಳಿಯಲ್ಲೂ ಪಾಕಿಸ್ಥಾನವನ್ನೇ ಮಣಿಸಿ ಚಾಂಪಿಯನ್‌ ಆಗಿತ್ತು. 5 ವರ್ಷಗಳ ಬಳಿಕ ನಡೆದ ಹೋರಾಟದಲ್ಲಿ ಪಾಕಿಗೆ ಸೇಡು ತೀರಿಸಿಕೊಳ್ಳಲಾಗಲಿಲ್ಲ. ಬದಲಿಗೆ, ಲೀಗ್‌ ಹಂತದಲ್ಲಿ ಪಾಕಿಸ್ಥಾನ ವಿರುದ್ಧ ಅನುಭವಿಸಿದ ಸೋಲಿಗೆ ಭಾರತವೇ ಸೇಡು ತೀರಿಸಿಕೊಂಡಿತು! ಪಾಕಿಸ್ಥಾನ ಅಜೇಯವಾಗಿ ಫೈನಲ್‌ ಪ್ರವೇಶಿಸಿತ್ತು. ಆದರೆ ನಿರ್ಣಾಯಕ ಹಂತದಲ್ಲಿ ಎಡವಿತು.

ಫೈನಲ್‌ನಲ್ಲಿ ಭಾರತೀಯ ಆಟಗಾರರು ಅತ್ಯುತ್ತಮ ಕ್ಷೇತ್ರರಕ್ಷಣೆ ಮೂಲಕ ಗಮನ ಸೆಳೆದರು. ಬಿಗು ಫೀಲ್ಡಿಂಗ್‌ ಸಂಘಟಿಸಿ ಸಾಕಷ್ಟು ರನ್‌ ನಿಯಂತ್ರಿಸಿದರು. ಹೀಗಾಗಿ ಪಾಕ್‌ ಸ್ಕೋರ್‌ 197 ರನ್ನಿಗೆ ನಿಂತಿತು.

ಪ್ರಕಾಶ್‌, ಅಜಯ್‌ ಮತ್ತೆ ಮಿಂಚು
ಚೇಸಿಂಗ್‌ ಹಾದಿಯಲ್ಲಿ ಆರಂಭಿಕಾರಾದ ಕನ್ನಡಿಗ ಪ್ರಕಾಶ್‌ ಜಯರಾಮಯ್ಯ (ಅಜೇಯ 99) ಮತ್ತು ಅಜಯ್‌ ಕುಮಾರ್‌ ರೆಡ್ಡಿ (43) ಭಾರತಕ್ಕೆ ಮತ್ತೂಮ್ಮೆ ನೆರವಾದರು. ಲೀಗ್‌ ಹಂತದಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತ ಬಂದಿದ್ದ ಪ್ರಕಾಶ್‌ ಕೇವಲ ಒಂದು ರನ್ನಿನಿಂದ ಶತಕ ವಂಚಿತರಾದರು. ಅಷ್ಟರಲ್ಲಿ ಭಾರತದ ಜಯಭೇರಿ ಮೊಳಗಲ್ಪಟ್ಟಿತತ್ತು.

Advertisement

ಅಜಯ್‌ ಕುಮಾರ್‌ ರೆಡ್ಡಿ ಜತೆಗೂಡಿದ ಪ್ರಕಾಶ್‌ ಮೊದಲ ವಿಕೆಟಿಗೆ 110 ರನ್‌ ಜತೆಯಾಟ ನಡೆಸಿ ಭಾರತದ ಗೆಲುವನ್ನು ಖಾತ್ರಿ ಪಡಿಸಿದ್ದರು. ತಂಡದ ಮೊತ್ತ 110  ರನ್‌ ಆಗಿದ್ದಾಗ ಅಜಯ್‌ ರನೌಟಾದರು. ಅನಂತರ ಬಂದ ಕೇತನ್‌ ಪಟೇಲ್‌ 26 ರನ್‌ ಮಾಡಿ ಗಾಯಾಳಾಗಿ ಹೊರ ನಡೆದರು. ಬಳಿಕ ಡಿ. ವೆಂಕಟೇಶ್‌ ಅವರನ್ನು ಕೂಡಿಕೊಂಡ ಪ್ರಕಾಶ್‌ ತಂಡವನ್ನು ದಡ ಸೇರಿಸಿದರು. ಪಾಕಿಸ್ಥಾನದ ಯಾವುದೇ ಬೌಲರಿಗೂ ಭಾರತವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಪಾಕಿಸ್ಥಾನದ ಆರಂಭಿಕರಾದ ಬಾದರ್‌ ಮುನೀರ್‌ (57  ರನ್‌) ಮತ್ತು ಮೊಹಮ್ಮದ್‌ ಜಮೀಲ್‌ (5 ರನ್‌) 58 ರನ್‌ ಜತೆಯಾಟ ನೀಡಿದರು. ಇವರಿಬ್ಬರು ಕ್ರೀಸ್‌ ಆಕ್ರಮಿಸಿಕೊಂಡು ನಿಂತರು ಎನ್ನುವಷ್ಟರಲ್ಲಿ ಗಣೇಶ್‌ ಮಿಂಚಿನ ಕ್ಷೇತ್ರರಕ್ಷಣೆ ನಡೆಸಿ ಜಮೀಲ್‌ ಅವರನ್ನು ರನೌಟ್‌ ಮಾಡಿದರು. ಅನಂತರ ಬಾದರ್‌ ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿದರಾದರೂ ಅವರಿಗೆ ಸೂಕ್ತ ಜತೆಗಾರನ ಕೊರತೆ ಕಾಡಿತು. ಅರ್ಧ ಶತಕ ದಾಖಲಿಸಿದ ಬಾದರ್‌ (57) ತಂಡದ ಮೊತ್ತ 118 ರನ್‌ ಆಗಿದ್ದಾಗ ಬೌಂಡರಿ ಬಳಿ ಕೇತನ್‌ ಪಟೇಲ್‌ ಪಡೆದ ಅದ್ಭುತ ಕ್ಯಾಚ್‌ಗೆ ಔಟಾಗುತ್ತಿದ್ದಂತೆ ಪಾಕಿಸ್ಥಾನ ನಾಟಕೀಯ ಕುಸಿತ ಕಂಡಿತು.

ಸಂಕ್ಷಿಪ್ತ ಸ್ಕೋರ್‌:  ಪಾಕಿಸ್ಥಾನ- 20 ಓವರ್‌ಗಳಲ್ಲಿ 9 ವಿಕೆಟಿಗೆ 197 (ಬಾದರ್‌ 57, ಆಮಿರ್‌ 20, ಕೇತನ್‌ 29ಕ್ಕೆ 2). ಭಾರತ-17.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 200 (ಪ್ರಕಾಶ್‌ ಅಜೇಯ 99, ಅಜಯ್‌ 43).

Advertisement

Udayavani is now on Telegram. Click here to join our channel and stay updated with the latest news.

Next