ದುಬಾೖ: ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಸೋಲಿನ ಆರಂಭ ಪಡೆದಿದೆ. ಶುಕ್ರವಾರದ ಮೊದಲ ಮುಖಾಮುಖೀಯಲ್ಲಿ ನ್ಯೂಜಿಲ್ಯಾಂಡ್ ಕೈಯಲ್ಲಿ 58 ರನ್ನುಗಳ ಆಘಾತಕ್ಕೆ ಸಿಲುಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ನ್ಯೂಜಿಲ್ಯಾಂಡ್ 4ಕ್ಕೆ 160 ರನ್ನುಗಳ ಸವಾಲಿನ ಮೊತ್ತ ಪೇರಿಸಿದರೆ, ಭಾರತ 19 ಓವರ್‌ಗಳಲ್ಲಿ 102ಕ್ಕೆ ಆಲೌಟ್ ಆಯಿತು.
ಚೇಸಿಂಗ್ ವೇಳೆ ಭಾರತ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಶಫಾಲಿ ವರ್ಮ ಕೇವಲ 2 ರನ್ ಮಾಡಿ ಮೊದಲಿಗರಾಗಿ ಪೆವಿಲಿಯನ್ ಸೇರಿಕೊಂಡರು. ಸ್ಮತಿ ಮಂಧನಾ (12), ನಾಯಕಿ ಹರ್ಮನ್‌ಪ್ರೀತ್ ಕೌರ್ (ಸರ್ವಾಧಿಕ 15) ಕಿವೀಸ್ ದಾಳಿಯನ್ನು ತಡೆದು ನಿಲ್ಲಲು ವಿಫಲರಾದರು. ಪವರ್ ಪ್ಲೇ ಒಳಗಾಗಿ 42 ರನ್ನಿಗೆ 3 ವಿಕೆಟ್ ಬಿತ್ತು. ಜೆಮಿಮಾ (13), ರಿಚಾ ಘೋಷ್ (12) ಕೂಡ ನೆರವಿಗೆ ನಿಲ್ಲಲಿಲ್ಲ. ರೋಸ್‌ಮೇರಿ ಮೈರ್ 4, ಲೀ ಟಹುಹು 3 ವಿಕೆಟ್ ಉರುಳಿಸಿದರು.
ನ್ಯೂಜಿಲ್ಯಾಂಡ್ ಉತ್ತಮ ಆರಂಭ ಪಡೆದ ಬಳಿಕ ನಾಯಕಿ ಸೋಫಿ ಡಿವೈನ್ ಬಾರಿಸಿದ ಅರ್ಧ ಶತಕದ ನೆರವಿನಿಂದ ನೂರೈವತ್ತರ ಗಡಿ ದಾಟಿತು. ಆರಂಭಿಕರಾದ ಸುಝೀ ಬೇಟ್ಸ್-ಜಾರ್ಜಿಯಾ ಪ್ಲಿಮ್ಮರ್ 7.4 ಓವರ್‌ಗಳಿಂದ 67 ರನ್ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು.
4ನೇ ಕ್ರಮಾಂಕದಲ್ಲಿ ಆಡಿದ ಸೋಫಿ ಡಿವೈನ್ 36 ಎಸೆತಗಳಿಂದ 57 ರನ್ ಬಾರಿಸಿ ಅಜೇಯರಾಗಿ ಉಳಿದರು (7 ಬೌಂಡರಿ). ಅಮೇಲಿಯಾ ಕೆರ್ (13) ಮತ್ತು ಬ್ರೂಕ್ ಹಾಲಿಡೇ (16) ಬೇಗನೇ ಔಟಾದರೂ ಡಿವೈನ್ ಒಂದೆಡೆ ಕ್ರೀಸ್ ಆಕ್ರಮಿಸಿದ್ದರಿಂದ ನ್ಯೂಜಿಲ್ಯಾಂಡ್ ಇನ್ನಿಂಗ್ಸ್ ಬೆಳೆಯುತ್ತ ಹೋಯಿತು. ಭಾರತದ ಪರ ರೇಣುಕಾ ಸಿಂಗ್ 2, ಅರುಂಧತಿ ರೆಡ್ಡಿ ಮತ್ತು ಆಶಾ ಶೋಭನಾ ತಲಾ ಒಂದು ವಿಕೆಟ್ ಉರುಳಿಸಿದರು.