ಬೆಂಗಳೂರು: ನಿರೀಕ್ಷೆ ಯಂತೆ ಭಾರತ- ನ್ಯೂಜಿಲ್ಯಾಂಡ್ ನಡುವಿನ ಬೆಂಗಳೂರು ಟೆಸ್ಟ್ ಪಂದ್ಯ ಮಳೆಯಲ್ಲಿ ತೊಯ್ದಿದೆ. ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮೊದಲ ದಿನದಾಟವನ್ನು ಸಂಪೂರ್ಣವಾಗಿ ಕಸಿದಿದೆ.
ಎಡಬಿಡದೆ ಸುರಿಯುತ್ತಿರುವ ಮಳೆ ಯಿಂದ ಮೊದಲ ದಿನದಾಟ ಖಂಡಿತ ನಡೆಯದು ಎಂಬುದು ಬೆಳಗ್ಗೆಯೇ ಅರಿವಿಗೆ ಬಂದಿತ್ತು. ಆದರೂ ಪಂದ್ಯ ವೀಕ್ಷಿಸಲು “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಸಾಕಷ್ಟು ವೀಕ್ಷಕರು ಹಾಜರಿದ್ದರು. ಇದು ರಾಜಧಾನಿ ಮಂದಿಯ ಕ್ರೀಡಾಭಿ ಮಾನಕ್ಕೆ ಸಾಕ್ಷಿ.
ಅಪರಾಹ್ನ ಸ್ವಲ್ಪ ಹೊತ್ತು ಮಳೆ ನಿಂತ ಕಾರಣ 1.50ರ ವೇಳೆ ಅಂಗಳಕ್ಕೆ ಹಾಕಲಾಗಿದ್ದ ಮೇಲ್ಭಾಗದ ಹೊದಿಕೆಯನ್ನು ತೆಗೆಯಲಾಯಿತು. 2 ಗಂಟೆಯ ಹೊತ್ತಿಗೆ ಪಂದ್ಯದ ಅಧಿ ಕಾರಿಗಳು ಮೈದಾನವನ್ನು ವೀಕ್ಷಿ ಸಲು ಆಗಮಿಸಿದರು. ಆಗ ಪಿಚ್‌ನ ಎರಡೂ ಭಾಗಗಳಲ್ಲಿ ಭಾರೀ ತೇವಾಂಶ ಇದ್ದುದು ಕಂಡುಬಂತು. ಅಂತಿಮವಾಗಿ ಅಪರಾಹ್ನ 2.34ಕ್ಕೆ ದಿನದಾಟ ರದ್ದುಗೊಂಡಿರುವುದಾಗಿ ಘೋಷಿಸಲಾಯಿತು.
ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಯುವ ಆರಂಭಕಾರ ಯಶಸ್ವಿ ಜೈಸ್ವಾಲ್ ಒಳಾಂಗಣ ಅಭ್ಯಾಸಕ್ಕೆಂದು ತೆರಳುವ ವೇಳೆ ಕೊಡೆ ಹಿಡಿದು ಮೈದಾನಕ್ಕೆ ಆಗಮಿಸಿದ್ದೊಂದೇ ವೀಕ್ಷಕರಿಗೆ ರಂಜನೆ ಒದಗಿಸಿದ ಕ್ಷಣಗಳಾಗಿದ್ದವು. ಸಹಾಯಕ ಕೋಚ್ ಅಭಿಷೇಕ್ ನಾಯರ್ ಕೂಡ ಜತೆಯಲ್ಲಿದ್ದರು.
ಎರಡನೇ ದಿನವೂ ಮಳೆ
ಗುರುವಾರವೂ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾಗಲಿದೆ. ಹವಾಮಾನ ವರದಿ ಪ್ರಕಾರ ಅಪರಾಹ್ನದ ತನಕ ಭಾರೀ ಮಳೆ ಸುರಿಯಲಿದೆ. ಆದರೆ ಪಂದ್ಯದ ನಿಯಮಾವಳಿಯಂತೆ ಬೆಳಗ್ಗೆ 8.45ಕ್ಕೆ ಟಾಸ್ ಹಾಗೂ 9.15ಕ್ಕೆ ದಿನದಾಟದ ಆರಂಭವನ್ನು ನಿಗದಿಗೊಳಿಸಲಾಗಿದೆ.