ಶ್ರೀನಗರ : ಜಮ್ಮು ಕಾಶ್ಮೀರ ಭಾಗದ ಒಂಭತ್ತು ಜನ ಉಗ್ರಗಾಮಿಗಳು ಭಾರತ ಪಾಕಿಸ್ಥಾನ ಗಡಿ ನಿಯಂತ್ರಣ ರೇಖೆಯ ವ್ಯಾಪಾರ ಮಾರ್ಗದ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿಯೊಂದನ್ನು ಭದ್ರತಾ ಅಧಿಕಾರಿಗಳು ಹೊರಗೆಡಹಿದ್ದಾರೆ.
ಪ್ರಸ್ತುತ ಈ ಉಗ್ರಗಾಮಿಗಳು ಪಾಕಿಸ್ಥಾನದಲ್ಲಿದ್ದು ಅಲ್ಲಿನ ಗುಪ್ತಚರ ಸಂಸ್ಥೆ ಐ.ಎಸ್.ಐ. ಸಹಾಯದಿಂದ ಈ ವ್ಯವಹಾರವನ್ನು ಸರಾಗವಾಗಿ ನಡೆಸುತ್ತಿದ್ದಾರೆ ಮಾತ್ರವಲ್ಲದೇ ಇದರಿಂದ ಬರುವ ಹಣವನ್ನು ಇವರು ಕಾಶ್ಮೀರ ಮತ್ತು ಭಾರತದ ವಿವಿಧ ಕಡೆಗಳಲ್ಲಿ ವಿಧ್ವಂಸಕ ಕೃತ್ಯಗಳಿಗೆ ಬಳಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಮೆಹ್ರಜುದ್ದೀನ್ ಭಟ್, ನಝೀರ್ ಅಹಮ್ಮದ್ ಭಟ್, ಬಸ್ರತ್ ಅಹಮ್ಮದ್ ಭಟ್, ಶೌಕತ್ ಅಹಮ್ಮದ್, ನೂರ್ ಮುಹಮ್ಮದ್, ಕುರ್ಷಿದ್, ಇಮ್ತಿಯಾಝ್ ಅಹಮ್ಮದ್, ಅಮೀರ್ ಮತ್ತು ಇಝಾಝ್ ರಹ್ಮಾನಿ ಎಂಬವರೇ ಆ ಒಂಭತ್ತು ಜನ ಕಾಶ್ಮೀರ ಮೂಲದ ಉಗ್ರರಾಗಿದ್ದಾರೆ. ಸದ್ಯಕ್ಕೆ ಈ ಉಗ್ರರು ಪಾಕಿಸ್ಥಾನದಲ್ಲಿ ಇದ್ದಾರೆ ಎಂಬ ಮಾಹಿತಿಯೂ ಅಧಿಕಾರಿಗಳಿಗೆ ಲಭ್ಯವಾಗಿದೆ.
ಪಾಕಿಸ್ಥಾನ ಜೊತೆಗಿನ ಎಲ್.ಒ.ಸಿ. ಮುಖೇನ ನಡೆಸುತ್ತಿದ್ದ ವ್ಯವಹಾರಗಳನ್ನು ಗುರುವಾರವಷ್ಟೇ ರದ್ದುಗೊಳಿಸಿ ಭಾರತ ಸರಕಾರವು ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪಾಕಿಸ್ಥಾನದಲ್ಲಿ ಠಿಕಾಣಿ ಹೂಡಿರುವ ಉಗ್ರರು ಶಸ್ತ್ರಾಸ್ತ್ರಗಳು, ಕಳ್ಳನೋಟುಗಳು ಹಾಗೂ ಮಾದಕ ದ್ರವ್ಯಗಳನ್ನು ಭಾರತದ ನೆಲದೊಳಕ್ಕೆ ನುಗ್ಗಿಸಲು ಈ ಮಾರ್ಗಗಳನ್ನೇ ಬಳಸುತ್ತಿದ್ದಾರೆ ಎಂಬ ಕಾರಣವನ್ನು ಭಾರತ ಸರಕಾರ ನೀಡಿತ್ತು.
ಉಗ್ರರೊಂದಿಗೆ ಸಂಪರ್ಕವಿರುವ ಎಲ್.ಒ.ಸಿ. ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ಉದ್ಯಮಗಳು ತಮ್ಮನ್ನು ತೊಡಗಿಸಿಕೊಂಡಿರುವುದು ರಾಷ್ಟ್ರೀಯ ತನಿಖಾ ದಳ ಇತ್ತೀಚೆಗೆ ನಡೆಸಿದ ಕೆಲವೊಂದು ಪ್ರಕರಣಗಳ ತನಿಖೆಯಲ್ಲೂ ಬಯಲಾಗಿತ್ತು.