Advertisement

ವಿಲಿಯಮ್ಸನ್‌ ದ್ವಿಶತಕ; ಸಂಕಷ್ಟದಲ್ಲಿ ಪಾಕ್‌

11:10 PM Dec 29, 2022 | Team Udayavani |

ಕರಾಚಿ: ಕೇನ್‌ ವಿಲಿಯಮ್ಸನ್‌ ಅವರ ಸಾಹಸದ ಮ್ಯಾರಥಾನ್‌ ಅಜೇಯ ದ್ವಿಶತಕದ ಸಾಧನೆಯಿಂದ ನ್ಯೂಜಿಲ್ಯಾಂಡ್‌ ತಂಡವು ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದು ಆತಿಥೇಯ ಪಾಕಿಸ್ಥಾನ ಸಂಕಷ್ಟದಲ್ಲಿ ಸಿಲುಕಿದೆ.

Advertisement

ಸುಮಾರು 10 ತಾಸುಗಳ ಕಾಲ ಬ್ಯಾಟಿಂಗ್‌ ನಡೆಸಿದ ವಿಲಿಯಮ್ಸನ್‌ 200 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅವರ ಈ ಸಾಹಸದ ಬ್ಯಾಟಿಂಗ್‌ನಿಂದಾಗಿ ನ್ಯೂಜಿಲ್ಯಾಂಡ್‌ ಟೀ ವಿರಾಮದ ವೇಳೆಗೆ 9 ವಿಕೆಟಿಗೆ 612 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಈ ಮೂಲಕ ಪ್ರವಾಸಿ ತಂಡ 174 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆಯಿತು. ಐಶ್‌ ಸೋಧಿ ತನ್ನ ಜೀವನಶ್ರೇಷ್ಠ 65 ರನ್‌ ಹೊಡೆದರು.

ಟೀ ವಿರಾಮದ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಪಾಕಿಸ್ಥಾನ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದು 77 ರನ್‌ ಗಳಿಸಿದೆ. ಇನ್ನಿಂಗ್ಸ್‌ ಸೋಲು ತಪ್ಪಿಸಲು ತಂಡ ಇನ್ನೂ 97 ರನ್‌ ಗಳಿಸಬೇಕಾಗಿದೆ. ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ನೀಡಿರುವ ಇಮಾಮ್‌ ಉಲ್‌ ಹಕ್‌ 45 ಮತ್ತು ನೈಟ್‌ವಾಚ್‌ಮ್ಯಾನ್‌ ನೌಮನ್‌ ಅಲಿ 4 ರನ್ನುಗಳಿಂದ ಆಡುತ್ತಿದ್ದಾರೆ. ಇನ್ನೊಂದು ದಿನದ ಆಟ ಬಾಕಿ ಉಳಿದಿದ್ದು ಪಾಕಿಸ್ಥಾನ ದಿನಪೂರ್ತಿ ಆಡಿ ಸೋಲನ್ನು ತಪ್ಪಿಸಲು ಪ್ರಯತ್ನಿಸಬೇಕಾಗಿದೆ. ಇಲ್ಲಿನ ಪಿಚ್‌ ಸ್ಪಿನ್‌ಗೆ ನೆರವಾಗುತ್ತಿರುವ ಕಾರಣ ನ್ಯೂಜಿಲ್ಯಾಂಡ್‌ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ವಿಲಿಯಮ್ಸನ್‌ ದ್ವಿಶತಕ: 

ಅಬ್ರಾರ್‌ ಅಹ್ಮದ್‌ ಅವರ ಎಸೆತದಲ್ಲಿ ತನ್ನ 21ನೇ ಬೌಂಡರಿ ಬಾರಿಸಿದ ವಿಲಿಯಮ್ಸನ್‌ ಆಬಳಿಕ ಒಂಟಿ ರನ್‌ ತೆಗೆದು ದ್ವಿಶತಕ ಪೂರ್ತಿಗೊಳಿಸಿದರು. ಇದು ಅವರ ಬಾಳ್ವೆಯ ಐದನೇ ದ್ವಿಶತಕವಾಗಿದೆ. ವಿಲಿಯಮ್ಸನ್‌ ಈ ಮೊದಲು ಸೋಧಿ ಜತೆಗೆ 7ನೇ ವಿಕೆಟಿಗೆ 159 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡಿದ್ದರು. ಇದರಿಂದ ಪ್ರವಾಸಿ ತಂಡ ಮುನ್ನಡೆ ಸಾಧಿಸುವಂತಾಯಿತು. ಕೊನೆಯ ಆಟಗಾರ ಅಜಾಜ್‌ ಪಟೇಲ್‌ ಕ್ರೀಸ್‌ಗೆ ಬಂದಾಗ ವಿಲಿಯಮ್ಸನ್‌ 186 ರನ್ನುಗಳಿಂದ ಆಡುತ್ತಿದ್ದರು. ಆ ಬಳಿಕ ಎಚ್ಚರಿಕೆಯಿಂದ ಆಡಿದ ವಿಲಿಯಮ್ಸನ ದ್ವಿಶತಕ ಪೂರ್ತಿಗೊಳಿಸಲು ಯಶಸ್ವಿಯಾದರು.

Advertisement

ವಿಲಿಯಮ್ಸನ್‌ ಸುಮಾರು ಎರಡು ವರ್ಷಗಳ ಬಳಿಕ ನೂರಕ್ಕಿಂತ ಹೆಚ್ಚಿನ ರನ್‌ ಗಳಿಸಿದ ಸಾಧನೆ ಮಾಡಿದ್ದಾರೆ. ಅವರು 2021ರ ಜನವರಿಯಲ್ಲಿ ಪಾಕಿಸ್ಥಾನ ವಿರುದ್ಧ ಕ್ರೈಸ್ಟ್‌ ಚರ್ಚ್‌ನಲ್ಲಿ ನಡೆದ ಪಂದ್ಯದಲ್ಲಿ 238 ರನ್‌ ಗಳಿಸಿದ್ದರು.

ಸಂಕ್ಷಿಪ್ತ ಸ್ಕೋರ್‌: 

ಪಾಕಿಸ್ಥಾನ 438 ಮತ್ತು 2 ವಿಕೆಟಿಗೆ 77 (ಇಮಾಮ್‌ ಉಲ್‌ ಹಕ್‌ 45 ಬ್ಯಾಟಿಂಗ್‌); ನ್ಯೂಜಿಲ್ಯಾಂಡ್‌ 9 ವಿಕೆಟಿಗೆ 612 ಡಿಕ್ಲೇರ್ಡ್ (ಕೇನ್‌ ವಿಲಿಯಮ್ಸನ್‌ 200 ಔಟಾಗದೆ, ಟಾಮ್‌ ಲಾಥಮ್‌ 113, ಡೆವೋನ್‌ ಕಾನ್ವೆ 92, ಡ್ಯಾರಿಲ್‌ ಮಿಚೆಲ್‌ 42, ಟಾಮ್‌ ಬ್ಲಿಂಡೆಲ್‌ 47, ಐಶ್‌ ಸೋಧಿ 65, ಅಬ್ರಾರ್‌ ಅಹ್ಮದ್‌ 205ಕ್ಕೆ 5, ನೌಮನ್‌ ಅಲಿ 185ಕ್ಕೆ 3).

ನ್ಯೂಜಿಲ್ಯಾಂಡ್‌ ವಿರುದ್ಧದ ಏಕದಿನ ಸರಣಿ : ಪಾಕ್‌ ಸಂಭಾವ್ಯರ ಪಟ್ಟಿ ಪ್ರಕಟ

ಲಾಹೋರ್‌: ಪ್ರವಾಸಿ ನ್ಯೂಜಿ ಲ್ಯಾಂಡ್‌ ವಿರುದ್ಧದ ಏಕದಿನ ಸರಣಿಗಾಗಿ ಪಾಕಿಸ್ಥಾನ ತಂಡವು 21 ಸದಸ್ಯರ ಸಂಭಾವ್ಯರ ತಂಡವನ್ನು ಪ್ರಕಟಿಸಿದೆ. ಶಕ್ತಿಶಾಲಿ ಹೊಡೆ ತಗಳ ಬ್ಯಾಟ್ಸ್‌ಮನ್‌ ಶಾರ್ಜೀಲ್‌ ಖಾನ್‌ ಅವರು ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ತಂಡದ ನೂತನ ಮುಖ್ಯ ಆಯ್ಕೆಗಾರ ಶಾಹಿದ್‌ ಅಫ್ರಿದಿ ಅವರು ಸಂಭಾವ್ಯರ ತಂಡದಲ್ಲಿ ಆರು ಮಂದಿ ಹೊಸ ಆಟಗಾರರನ್ನು ಸೇರಿಸಿ ಅಚ್ಚರಿಗೊಳಿಸಿದ್ದಾರೆ.

ಸಂಭಾವ್ಯರ ತಂಡದಿಂದ ಮುಂದಿನ ವಾರ ಅಂತಿಮ 16ರ ಬಳಗವನ್ನು ಅಂತಿಮ ಗೊಳಿಸಲಾಗುವುದು. ಸದ್ಯ ಗಾಯದ ಸಮಸ್ಯೆಗೆ ಚಿಕಿತ್ಸೆಯಲ್ಲಿರುವ ಶಾಹೀನ್‌ ಷಾ ಅಫ್ರಿದಿ ಮತ್ತು ಫಾಕರ್‌ ಜಮಾನ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಮೂರು ವರ್ಷಗಳ ಹಿಂದೆ ಆಸ್ಟ್ರೇಲಿ ಯದ ವಿರುದ್ಧ ಏಕದಿನ ಪಂದ್ಯವನ್ನಾಡಿದ ಶಾನ್‌ ಮಸೂದ್‌ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಇಂಗ್ಲೆಂಡ್‌ ವಿರುದ್ಧ ಇತ್ತೀಚೆಗೆ ಪಾದಾರ್ಪಣೆಗೈದಿದ್ದ ಅಬ್ರಾರ್‌ ಅಹ್ಮದ್‌ ಕೂಡ ಸಂಭಾವ್ಯರ ಪಟ್ಟಿಯಲ್ಲಿ ದ್ದಾರೆ. ಅವರು ಇಂಗ್ಲೆಂಡ್‌ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್‌ ಕಿತ್ತು ದಾಖಲೆ ಮಾಡಿದ್ದರು. ಕಳೆದ ಸೆಪ್ಟಂಬರ್‌ನಲ್ಲಿ ಟಿ20ಗೆ ಪಾದಾರ್ಪಣೆಗೈದಿದ್ದ ಆಮೀರ್‌ ಜಮಾಲ್‌ ಕೂಡ ಸಂಭಾವ್ಯರ ಪಟ್ಟಿಯಲ್ಲಿದ್ದಾರೆ.

ನ್ಯೂಜಿಲ್ಯಾಂಡ್‌ ವಿರುದ್ಧದ ಏಕದಿನ ಸರಣಿ ಕರಾಚಿಯಲ್ಲಿ ಜ. 9, 11 ಮತ್ತು 13ರಂದು ನಡೆಯಲಿದೆ. ಈ ಸರಣಿ ಕಳೆದ ಸೆಪ್ಟಂಬರ್‌ನಲ್ಲಿ ನಡೆಯಬೇಕಿತ್ತು. ಆದರೆ ಭದ್ರತಾ ಕಾರಣದಿಂದಾಗಿ ನ್ಯೂಜಿಲ್ಯಾಂಡ್‌ ತಂಡವು ಪ್ರವಾಸವನ್ನು ರದ್ದುಗೊಳಿಸಿತ್ತು.

21 ಸದಸ್ಯರ ಸಂಭಾವ್ಯರ ತಂಡ  :

ಬಾಬರ್‌ ಅಜಮ್‌, ಅಬ್ದುಲ್ಲ ಶಫೀಕ್‌, ಅಬ್ರಾರ್‌ ಅಹ್ಮದ್‌, ಆಮೀರ್‌ ಜಮಾಲ್‌, ಹ್ಯಾರಿಸ್‌ ರಾಫ್, ಹಸನ್‌ ಅಲಿ, ಇನ್ಸನುಲ್ಲಾ, ಇಮಾಮ್‌ ಉಲ್‌ ಹಕ್‌, ಕಮ್ರಾನ್‌ ಗುಲಾಮ್‌, ಮೊಹಮ್ಮದ್‌ ಹ್ಯಾರಿಸ್‌, ಮೊಹಮ್ಮದ್‌ ನವಾಜ್‌, ಮೊಹಮ್ಮದ್‌ ರಿಜ್ವಾನ್‌, ಮೊಹಮ್ಮದ್‌ ವಸೀಮ್‌, ನಸೀಮ್‌ ಶಾ, ಕಾಸಿಮ್‌ ಅಕ್ರಮ್‌, ಸಲ್ಮಾನ್‌ ಅಲಿ ಅಘ, ಶಾದಾಬ್‌ ಖಾನ್‌, ಶಹನವಾಜ್‌ ದಹಾನಿ, ಶಾನ್‌ ಮಸೂದ್‌, ಶಾರ್ಜೀಲ್‌ ಖಾನ್‌ ಮತ್ತು ತಯ್ಯಬ್‌ ತಾಹಿರ್‌.

Advertisement

Udayavani is now on Telegram. Click here to join our channel and stay updated with the latest news.

Next