ಇಸ್ಲಾಮಾಬಾದ್: ಪಾಕಿಸ್ಥಾನ ಸಾರ್ವ ತ್ರಿಕ ಚುನಾವಣೆಯ ಫಲಿತಾಂಶ ಘೋಷಣೆಯಲ್ಲಿ ವಿಳಂಬವಾಗಿದ್ದು, ಇನ್ನೂ ಮತ ಎಣಿಕೆ ಆಗುತ್ತಿರುವಂತೆಯೇ ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಪಕ್ಷವು ತಾವೇ ವಿಜಯ ಸಾಧಿಸಿರುವುದಾಗಿ ಘೋಷಿಸಿಕೊಂಡಿದೆ. ಇತ್ತ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷವೂ ತಾವು ಮುನ್ನಡೆಯಲ್ಲಿರುವುದಾಗಿ ಹೇಳಿ ಕೊಂಡಿದ್ದು ಇಡೀ ರಾಷ್ಟ್ರವೇ ಗೊಂದಲದ ಗೂಡಾಗಿದೆ.
ಸರಕಾರ ರಚನೆಯಾಗಲು ಯಾವುದೇ ಪಕ್ಷವು ರಾಷ್ಟ್ರೀಯ ಅಸೆಂಬ್ಲಿಯ 265 ಸ್ಥಾನಗಳ ಪೈಕಿ 133 ಸ್ಥಾನಗಳಲ್ಲಿ ಗೆಲುವು ಸಾಧಿಸಲೇಬೇಕಿದೆ. ಆದರೆ ಪಿಟಿಐ ಮತ್ತು ಪಿಎಂಎಲ್-ಎನ್ ಮತ ಎಣಿಕೆಯ ನಡುವೆಯೇ ಚುನಾವಣೆ ಯಲ್ಲಿ ಗೆದ್ದಿರುವುದಾಗಿ ಹೇಳಿಕೊಳ್ಳುತ್ತಿವೆ.
ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಲಾಹೋರ್‌ನಲ್ಲಿರುವ ಪಕ್ಷದ ಕೇಂದ್ರ ಕಚೇರಿಗೆ ತೆರಳಿ, ವಿಜಯ ಭಾಷಣವನ್ನೇ ಮಾಡಿದ್ದಾರೆ. ನಾವು ಈಗಾಗಲೇ ಗೆಲುವು ಸಾಧಿಸಿದ್ದೇವೆ. ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ರಾಷ್ಟ್ರವನ್ನು ಮತ್ತೆ ಮೇಲೆತ್ತಿ ಸದೃಢಗೊಳಿಸಲು ಎಲ್ಲ ಪಕ್ಷಗಳೂ ನಮ್ಮ ಜತೆಗೆ ಕೈ ಜೋಡಿಸಿ ಸರಕಾರ ರಚನೆಗೆ ನೆರವಾಗಬೇಕು ಎಂದೂ ಹೇಳಿದ್ದಾರೆ. ಪಿಎಂಎಲ್-ಎನ್‌ಗೆ ಬಹುಮತ ಇಲ್ಲದಿರುವ ಕಾರಣ ಬೇರೆ ಪಕ್ಷಗಳೊಂದಿಗೆ ಸೇರಿ ಸರಕಾರ ರಚನೆ ನಡೆಸಲು ಯೋಜಿಸಲಾಗುತ್ತಿದೆ ಎನ್ನಲಾಗಿದೆ.
ಇತ್ತ ಚುನಾವಣೆ ಫಲಿತಾಂಶಗಳ ಕುರಿತು ಜೈಲಿನಲ್ಲಿರುವ ಇಮ್ರಾನ್ ಅವರನ್ನೇ ಭೇಟಿಯಾಗಿ ಬಳಿಕ ವಿಚಾರ ಬಹಿರಂಗ ಪಡಿಸುವುದಾಗಿ ಪಿಟಿಐ ನಾಯಕರು ಹೇಳಿಕೊಂಡಿದ್ದಾರೆ. ಪಾಕ್ ಚುನಾವಣೆ ಆಯೋಗವಂತೂ ಫಲಿತಾಂಶದ ಬಗ್ಗೆ ಇನ್ನೂ ನಿಖರ ಮಾಹಿತಿ ನೀಡಿಲ್ಲ.
ಉಗ್ರ ಹಫೀಜ್ ಮಗನಿಗೆ ಸೋಲು: ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯ್ಯದ್‌ನ ಪುತ್ರ ಥಲಾ ಹಫೀಜ್ ಸಯ್ಯದ್‌ಗೆ ಪಾಕ್ ಚುನಾವಣೆ ಯಲ್ಲಿ ಸೋಲಾಗಿದೆ. ಲಾಹೋರ್‌ನಿಂದ ಥಲಾ ಸ್ಪರ್ಧಿಸಿದ್ದು, ಈ ಕ್ಷೇತ್ರದಲ್ಲಿ ಪಿಟಿಐ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ.