ಹೊಸದಿಲ್ಲಿ: ಬಾಲಕೋಟ್ ದಾಳಿ ಅನಂತರ ಗಡಿ ನಿಯಂತ್ರಣ ರೇಖೆ ಬಳಿ ಇದ್ದ ಉಗ್ರರ ನೆಲೆಗಳನ್ನೆಲ್ಲ ಖಾಲಿ ಮಾಡಿದ್ದ ಪಾಕಿಸ್ಥಾನ ಈಗ ಈ ಭಾಗದಲ್ಲಿ 16ಕ್ಕೂ ಹೆಚ್ಚು ಉಗ್ರ ನೆಲೆಗಳನ್ನು ಸ್ಥಾಪಿಸಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಗಡಿ ಭಾಗಗಳಲ್ಲಿ ಉಗ್ರ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ಅಲ್ಲಿಂದ ಉಗ್ರರು ಭಾರತದೊಳಗೆ ನುಸುಳಲು ನೆರವಾಗುವುದು ಪಾಕ್ ಯೋಜನೆಯಾಗಿದೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಗಡಿಯಿಂದ ಸ್ವಲ್ಪ ದೂರದಲ್ಲಿ ತರಬೇತಿ ಕೇಂದ್ರಗಳಿರುತ್ತವೆ. ಆ ತರಬೇತಿ ಕೇಂದ್ರಗಳಿಗೆ ಸಮೀಪದಲ್ಲಿ ಅಂದರೆ ಭಾರತದ ಗಡಿಯ ಅತ್ಯಂತ ಸಮೀಪದಲ್ಲಿ ನೆಲೆ ಸ್ಥಾಪಿಸಲಾಗಿರುತ್ತದೆ. ಈಗಾಗಲೇ ತರಬೇತಿ ಕೇಂದ್ರಗಳಿಂದ ಈ ನೆಲೆಗಳಿಗೆ ಉಗ್ರರು ಒಬ್ಬೊಬ್ಬರಾಗಿ ತಲುಪುತ್ತಿದ್ದಾರೆ. ಅಲ್ಲಿಂದ ಗಡಿಯೊಳಕ್ಕೆ ಉಗ್ರರು ಒಳನುಸುಳುತ್ತಾರೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳ ಲಾಗಿದೆ. ಸಾಮಾನ್ಯವಾಗಿ ಬೇಸಿಗೆ ಸಮಯ ದಲ್ಲಿ ಪಾಕಿಸ್ಥಾನ ಉಗ್ರ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಆದರೆ ಈ ಬಾರಿ ಉಗ್ರ ಚಟು ವಟಿಕೆಗೆ ಭಾರಿ ಮಟ್ಟದ ಹೊಡೆತ ಬಿದ್ದಿದೆ.
ಇತ್ತೀಚೆಗೆ ಉಗ್ರ ಝಾಕಿರ್ ಮೂಸಾನನ್ನು ಹತ್ಯೆಗೈದ ಅನಂತರದಲ್ಲಿ ಭಾರಿ ಪ್ರಮಾಣದಲ್ಲಿ ಉಗ್ರರಲ್ಲಿ ಪ್ರತೀಕಾರದ ಸಿಟ್ಟು ಶುರುವಾಗಿದೆ. ಇದಕ್ಕೆ ಪಾಕಿಸ್ಥಾನ ಸೇನೆ ಹಾಗೂ ಐಎಸ್‌ಐ ಬೆಂಬಲ ನೀಡಿ ಉಗ್ರರನ್ನು ಕಳುಹಿಸಿ ವಿಧ್ವಂಸಕ ಕೃತ್ಯ ನಡೆಸಲು ಪ್ರೋತ್ಸಾಹಿಸಲಿದೆ. 2016ರಲ್ಲಿ ಬುರ್ಹಾನ್ ವಾನಿ ಹತ್ಯೆಗೈದಾಗಲೂ ಇದೇ ರೀತಿಯ ಕೃತ್ಯವನ್ನು ನಡೆಸಿತ್ತು.
ಮೂಲಗಳ ಪ್ರಕಾರ ಜೈಶ್ ಎ ಮೊಹಮ್ಮದ್‌ನ ಬಹುತೇಕ ಎಲ್ಲ ಉಗ್ರರೂ ಸಾವನ್ನಪ್ಪಿದ್ದಾರೆ. ಸೇನೆ ಅತ್ಯಂತ ದಕ್ಷವಾಗಿ ಕಾರ್ಯನಿರ್ವಹಿಸುತ್ತಿರು ವುದರಿಂದಾಗಿ ಯಾವ ಹೊಸಬರೂ ಜೈಶ್ ಕ್ಯಾಂಪ್‌ಗೆ ಸೇರುತ್ತಿಲ್ಲ. ಅದರಲ್ಲೂ ಪುಲ್ವಾಮಾ ದಾಳಿಯ ಅನಂತರ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 30 ಕ್ಕೂ ಹೆಚ್ಚು ಜೈಶ್ ಉಗ್ರರನ್ನು ಹತ್ಯೆಗೈಯಲಾಗಿದೆ. ಒಟ್ಟಾರೆಯಾಗಿ ಸುಮಾರು 90 ಕ್ಕೂ ಹೆಚ್ಚು ಉಗ್ರರನ್ನು ಸೇನೆ ಮತ್ತು ಇತರ ಭದ್ರತಾ ಏಜೆನ್ಸಿಗಳು ಈ ವರ್ಷ ನಿರ್ಮೂಲನೆಗೊಳಿಸಿವೆ.