Advertisement

ಚೀನ ಬೆನ್ನಲ್ಲೇ ಪಾಕ್‌ ಸ್ನೇಹಹಸ್ತ: ಎಲ್‌ಒಸಿಯಲ್ಲಿ ಕದನ ವಿರಾಮ

12:17 AM Feb 26, 2021 | Team Udayavani |

ಜಮ್ಮು: ಚೀನದ ಬೆನ್ನಲ್ಲೇ ಪಾಕ್‌ ಭಾರತದೊಂದಿಗೆ ಸ್ನೇಹಹಸ್ತ ಚಾಚಲು ಮುಂದಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಭಾರತ- ಪಾಕ್‌ ಜಂಟಿಯಾಗಿ ಎಲ್ಒಸಿಯಲ್ಲಿ ಕದನ ವಿರಾಮ ಘೋಷಿಸಿದ್ದು, ಫೆ. 24ರ ಮಧ್ಯರಾತ್ರಿಯಿಂದ ಜಾರಿಗೊಂಡಿದೆ.

Advertisement

ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಯಲ್ಲಿ ಗುಂಡಿನ ಚಕಮಕಿ ಸಹಿತ ರಕ್ಷಣಾತ್ಮಕ ಹಿಂಸಾಚಾರ ತಗ್ಗಿಸುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. 2003ರ ಕದನ ವಿರಾಮ ನಿಯಮಾವಳಿಗಳಿಗೆ ಮರುಬದ್ಧತೆ ನೀಡಲು ಭಾರತ ಮತ್ತು ಪಾಕ್‌ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಸಮ್ಮತಿಸಿದ್ದಾರೆ.

ಜಂಟಿ ಹೇಳಿಕೆ
“ಎಲ್‌ಒಸಿ ಸೇರಿದಂತೆ ವಿವಿಧ ವಲಯಗಳಲ್ಲಿ ಮುಕ್ತ, ಸ್ಪಷ್ಟ ಮತ್ತು ಸೌಹಾರ್ದಯುತ ವಾತಾವರಣ ಸೃಷ್ಟಿಸುವ ಸಂಬಂಧ ನಾವು ಪರಿಶೀಲನೆ ನಡೆಸಿದ್ದೇವೆ. ಎಲ್ಲ ಒಪ್ಪಂದಗಳು, ನಿಯಮಾವಳಿಗಳಿಗೆ ಬದ್ಧವಾಗಿರಲು ಎರಡೂ ರಾಷ್ಟ್ರಗಳು ಒಪ್ಪಿವೆ’ ಎಂದು ಜಂಟಿ ಹೇಳಿಕೆ ತಿಳಿಸಿದೆ.

ಭಾರತದ ಡಿಜಿಎಂಒ ಲೆ|ಜ| ಪರಮ್‌ಜಿತ್‌ ಸಿಂಗ್‌ ಸಂಘಾ, ಪಾಕಿಸ್ಥಾನದ ಮೇ|ಜ| ನೌಮಾನ್‌ ಝಕಾರಿಯಾ, “ಎಲ್‌ಒಸಿಯಲ್ಲಿ ಶಾಂತಿಗೆ ಭಂಗ ತರುವ, ಹಿಂಸಾಚಾರ ಪ್ರಚೋದಿಸುವ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಉಭಯ ರಾಷ್ಟ್ರಗಳು ಸುಸ್ಥಿರ ಶಾಂತಿ ಸ್ಥಾಪನೆಗೆ ಬದ್ಧವಾಗಿವೆ’ ಎಂದು ಘೋಷಿಸಿದ್ದಾರೆ.

ಭಾರತದ ಎಚ್ಚರಿಕೆ
“ಕದನ ವಿರಾಮ ಜಾರಿಯಾಗಿದ್ದರೂ ಕಣಿವೆಯಲ್ಲಿ ಉಗ್ರನಿಗ್ರಹ ಕಾರ್ಯಾಚರಣೆ ನಿಲ್ಲದು’ ಎಂದು ಭಾರತೀಯ ಸೇನೆ ಎಚ್ಚರಿಸಿದೆ.

Advertisement

ಸಂಧಾನದ ಹಿಂದೆ “ಅಜಿತ್‌’ ಸಾಹಸ 
ಚೀನದಂತೆ ಪಾಕ್‌ಗೆ ದಿಢೀರನೆ ಜ್ಞಾನೋದಯ ಮಾಡಿಸಿದ ವ್ಯಕ್ತಿ ರಾಷ್ಟ್ರೀಯ ಭದ್ರತ ಸಲಹೆಗಾರ ಅಜಿತ್‌ ದೋವಲ್‌! ಇಲ್ಲೂ ಅವರು ತಮ್ಮ ಗುಪ್ತಚರ ಚಾಣಾಕ್ಷತೆಯ ಅಸ್ತ್ರ ಪ್ರಯೋಗಿಸಿ, ಪಾಕ್‌ನ ಅತ್ಯುನ್ನತ ಅಧಿಕಾರಿಗಳ ಜತೆ ಸಂಧಾನ ಯಶಸ್ವಿಗೊಳಿಸಿದ್ದಾರೆ.  ಭಾರತ- ಪಾಕ್‌ ಜಂಟಿ ಹೇಳಿಕೆಗೆ ಒಂದೆರಡು ತಿಂಗಳು ಮುನ್ನ ಪಾಕ್‌ ರಾಷ್ಟ್ರೀಯ ಭದ್ರತ ವಿಭಾಗದ ವಿಶೇಷ ಸಹಾಯಕ ಅಧಿಕಾರಿ ಯೂಸುಫ್ ಜತೆ ದೋವಲ್‌ ಮಾತುಕತೆ ನಡೆಸಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಪಾಕ್‌ ಸೇನಾ ಮುಖ್ಯಸ್ಥ, “ಭಾರತದ ಜತೆಗೆ ಶಾಂತಿ ಹಸ್ತಚಾಚುವ ಸಮಯ ಇದು’ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next