ಉಡುಪಿ: ಮಹಾಭಾರತ, ರಾಮಾಯಣ ಗ್ರಂಥಗಳಲ್ಲಿ ಬರುವ ವಿವಿಧ ಕಥಾನಕಗಳ ರಾಷ್ಟ್ರ ಮಟ್ಟದ ಸಾಂಪ್ರದಾಯಿಕ ಚಿತ್ರ ಕಲೆಗಳ ಶಿಬಿರ ಶ್ರೀಕೃಷ್ಣಮಠದಲ್ಲಿ ರಾಜಾಂಗಣದಲ್ಲಿ ಆರಂಭಗೊಂಡಿದೆ. ಬಿಹಾರ, ಕೇರಳ, ಕರ್ನಾಟಕ, ಒಡಿಶಾ, ತಮಿಳುನಾಡಿನ ಒಂಭತ್ತು ಕಲಾವಿದರು ಪಾಲ್ಗೊಂಡಿದ್ದಾರೆ.
ರಾಮನವಮಿ ಉತ್ಸವ ಪ್ರಯುಕ್ತ ಆಯೋಜನೆಗೊಂಡ ಶಿಬಿರವು ಎ. 15ರಿಂದ ಎ. 21ರ ವರೆಗೆ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ.
ಶಿವಪುರದ ಶಿಕ್ಷಕ, ಗದಗ ಮೂಲದ ಕಮಲ್ ಅಹಮ್ಮದ್ ಬಸೋಲಿ ಶೈಲಿಯಿಂದ ಪ್ರೇರಿತವಾದ ಚಿತ್ರಕಲೆಯನ್ನು ರಚಿಸಿದರೆ, ಮಂಗಳೂರು ಮಹಾಲಸಾ ಕಲಾ ಕಾಲೇಜಿನ ಶಿಕ್ಷಕ ಹಾಸನ ಮೂಲದ ಮೋಹನಕುಮಾರ್ ತಂಜಾವೂರು ಶೈಲಿಯ ಚಿತ್ರಗಳನ್ನು ರಚಿಸುತ್ತಿದ್ದಾರೆ. ಇವರದು 25 ವರ್ಷಗಳ ಕಲಾಜೀವನವಾಗಿದೆ. ಒಡಿಶಾದ ಗೋಪಾಲ ಮಹಾರಾಣ, ಓಂಪ್ರಕಾಶ್ ಮಹಾರಾಣ ಪಟ್ಟೆಚಿತ್ರ, ತಾಳೆಗರಿಯಲ್ಲಿ ಚಿತ್ರಗಳನ್ನು ಬರೆಯುತ್ತಿದ್ದಾರೆ.
ಇದನ್ನೂ ಓದಿ :ಉಡುಪಿ-ಮಣಿಪಾಲವನ್ನು ದೇಶಕ್ಕೆ ಮಾದರಿ ನಗರವನ್ನಾಗಿಸಲು ಯತ್ನ : ಅನುಮೋದನೆಯೊಂದೇ ಬಾಕಿ
ಬಿಹಾರ ದರ್ಭಾಂಗದವರಾದ ದರ್ಶನಕುಮಾರ್, ಕಲಶಿಯಾದೇವಿಯವರು ಮಧುಬನಿ (ಮಿಥಿಲಾ) ಮತ್ತು ಟ್ಯಾಟು ಚಿತ್ರಗಳನ್ನು ರಚಿಸುತ್ತಿದ್ದಾರೆ. ಗೌರಿಬಿದನೂರಿನ ಶ್ರೀನಿವಾಸ ರೆಡ್ಡಿಯವರು ಮೈಸೂರು ಸಾಂಪ್ರದಾಯಿಕ ಶೈಲಿಯ ಕಲಾವಿದರು. ಇವರು ಪ್ರಸಿದ್ಧ ಚಿತ್ರಕಲಾವಿದ ಬಿಕೆಎಸ್ ವರ್ಮಾರ ಶಿಷ್ಯ. 2014ರಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ಬೆಂಗಳೂರಿನ ಗುಂಡೂರಾವ್ ತಂಜಾವೂರು ಶೈಲಿಯ ಚಿತ್ರಗಳನ್ನು ರಚಿಸುತ್ತಿದ್ದಾರೆ. ಕೇರಳದ ವಡಗರ ಮೂಲದ ಸುಮೇಶ ಕೆ. ಷಣ್ಮುಖನ್ ಅವರು ಕೇರಳ ಸಾಂಪ್ರದಾಯಿಕ ಶೈಲಿಯ ಚಿತ್ರಗಳನ್ನು ಕ್ಯಾನ್‌ವಾಸ್‌ನಲ್ಲಿ ಮೂಡಿಸುತ್ತಿದ್ದಾರೆ.
ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಸಾಂಕೇತಿಕವಾಗಿ ಚಿತ್ರ ಶಿಬಿರವನ್ನು ಉದ್ಘಾಟಿಸಿ ಸಾಂಪ್ರದಾಯಿಕ ಚಿತ್ರಕಲೆಗಳನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಶಿಬಿರಕ್ಕೆ ಸಹಕಾರ ನೀಡುತ್ತಿರುವ ಕೆನರಾ ಬ್ಯಾಂಕ್ ಡಿಜಿಎಂ ಲೀನಾ ಪಿಂಟೋ, ಎಜಿಎಂ ಎಂ.ವೈ. ಹರೀಶ್, ಮಾರ್ಕೆಟಿಂಗ್ ಮೆನೇಜರ್‌ಗಳಾದ ದಿನೇಶ ಹೆಗ್ಡೆ, ನೀರಜ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಕೋಟ್ಯಾನ್, ಬಜರಂಗದಳದ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್. ಮೊದಲಾದವರು ಉಪಸ್ಥಿತರಿದ್ದರು. ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿ ಶಿಬಿರ ಸಂಚಾಲಕ ಪುರುಷೋತ್ತಮ ಅಡ್ವೆ ವಂದಿಸಿದರು.