Advertisement

ಫ.ಗು. ಹಳಕಟ್ಟಿ  ವ್ಯಕ್ತಿಯಲ್ಲ, ಅದ್ಭುತ ಶಕ್ತಿ 

04:58 PM Jul 06, 2018 | |

ಬಾದಾಮಿ: ಒಂದು ವಿಶ್ವವಿದ್ಯಾಲಯ ಮಾಡಬೇಕಾಗಿರುವ ಕೆಲಸವನ್ನು ಡಾ| ಫ.ಗು. ಹಳಕಟ್ಟಿ ಅವರು ಏಕಾಂಗಿಯಾಗಿ
ಸಾಧಿಸಿದರು. ಅವರೊಬ್ಬ ವ್ಯಕ್ತಿಯಲ್ಲ, ಅದೊಂದು ಅದ್ಭುತ ಶಕ್ತಿ ಎಂದು ಸಾಹಿತಿ ಚಂದ್ರಕಾಂತ ತಾಳಿಕೋಟಿ ಹೇಳಿದರು. ನಗರದ ಅಕ್ಕ ಮಹಾದೇವಿ ಅನುಭಾವ ಮಂಟಪದಲ್ಲಿ ಪ್ರವಚನ ಸಮಿತಿ ಹಾಗೂ ಅಕ್ಕನ ಬಳಗ ಮತ್ತು ಶರಣ ಸಾಹಿತ್ಯ ಪರಿಷತ್ತ ಸಹಯೋಗದಲ್ಲಿ ಹಮ್ಮಿಕೊಂಡ ಡಾ| ಫ.ಗು.ಹಳಕಟ್ಟಿ ಜನ್ಮ ದಿನಾಚರಣೆ ಅಂಗವಾಗಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ವಚನ ಸಾಹಿತ್ಯಕ್ಕೆ ಪುನಶ್ಚೇತನ ನೀಡಿದ ಶ್ರೇಯಸ್ಸು ವಚನ ಪಿತಾಮಹ ಎಂದು ಕರೆಸಿಕೊಂಡಿರುವ ಡಾ|ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಅವರು ಇಡೀ ಇಂಗ್ಲೆಂಡ್‌ ದೇಶದ ಇತಿಹಾಸ ಸಂಗ್ರಹಿಸಿ ಗ್ರಂಥ ರೂಪದಲ್ಲಿ ಪ್ರಕಟಿಸಿದ್ದಾರೆ. ಈಗಿನ ಕಾಲದ ಪಂಚಾಯತ್‌ ರಾಜ್ಯ ವ್ಯವಸ್ಥೆಯನ್ನು ಆಗಿನ ಕಾಲದಲ್ಲಿ ಜಾರಿಗೆ ತಂದ ಕೀರ್ತಿ ಗುರುಬಸಪ್ಪನವರಿಗೆ ಸಲ್ಲುತ್ತದೆ. ವಚನ ಸಾಹಿತ್ಯಕ್ಕೆ ಸಂಶೋಧನೆಗಾಗಿ ಹಳಕಟ್ಟಿ ಪಟ್ಟಕಷ್ಟ ಅಸಾಮಾನ್ಯ. ಆದ್ದರಿಂದ ಅವರನ್ನು ವಚನ ಗುಮ್ಮಟ ಎಂಬುದಾಗಿ ಪ್ರಸಿದ್ಧಿ ಹೊಂದಿದ್ದಾರೆ ಎಂದರು.

ಶರಣ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ಜಯಶ್ರೀ ಭಂಡಾರಿ ಮಾತನಾಡಿ, ಬಸವತತ್ವದ ಅನುಷ್ಠಾನಕ್ಕಾಗಿ ನಾಡಿನಾದ್ಯಂತ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಇಳಕಲ್‌ ವಿಜಯ ಮಹಾಂತೇಶ ಶ್ರೀಗಳು ಇತ್ತೀಚೆಗೆ ನಿಧನರಾಗಿದ್ದಾರೆ. ನಮ್ಮ ಜೊತೆ ಭೌತಿಕವಾಗಿ ಇರದಿದ್ದರೂ ಅವರು ಮಾಡಿರುವ ಸಾಧನೆಗಳು ಸದಾ ನಮ್ಮೊಂದಿಗೆ ಇರುತ್ತವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಲಿಂಗೈಕ್ಯರಾದ ಇಳಕಲ್‌ ವಿಜಯ ಮಹಾಂತೇಶ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಶಾರದಾ ಮೇಟಿ ಮಾತನಾಡಿದರು. ಕಸ್ತೂರೆವ್ವ ಮಮದಾಪುರ, ಅಕ್ಕನ ಬಳಗದ ಅಧ್ಯಕ್ಷೆ ರತ್ನಕ್ಕ ಪಟ್ಟಣದ, ಅನ್ನದಾನಿ ಹಿರೇಮಠ, ಮುಖ್ಯಶಿಕ್ಷಕ ಎಸ್‌.ಎಸ್‌. ಕಿತ್ತಲಿ, ಶಶಿಧರ ಮೂಲಿಮನಿ, ಸುಮಾ ಮಾಳಗಿ, ಬೂದಿಹಾಳ, ಪೂಜಾರ, ಶ್ರೀನಿವಾಸ ಕಲಾಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next