Advertisement

ಪಾಗಲ್‌ ಪ್ರೇಮಿಯ ಹಾರರ್‌ ಕಾಮಿಡಿ

11:20 AM Aug 12, 2018 | |

ಆತ ಪಾಗಲ್‌ ಪ್ರೇಮಿ. ಬೇಡ ಬೇಡವೆಂದರೂ ಆಕೆಯ ಹಿಂದೆ ಸುತ್ತುತ್ತಾನೆ. “ಬಂಗಾರು ನೀ ನನಗೆ ಬೇಕು ಬಂಗಾರು …’ ಎನ್ನುತ್ತಾ ಹುಚ್ಚು ಪ್ರೀತಿ ಮಾಡುತ್ತಾನೆ. ಆದರೆ, ಆಕೆಗೆ ಆತನ ಕಂಡರೆ ಅಲರ್ಜಿ. ಅದಕ್ಕಿಂತ ಹೆಚ್ಚಾಗಿ ಆಕೆ ಇನ್ನೊಬ್ಬನ ಪ್ರೀತಿಯಲ್ಲಿ ಬಿದ್ದಿರುತ್ತಾಳೆ. ಹೀಗಿರುವಾಗ ಒಂದು ಮರ್ಡರ್‌. ದೆವ್ವದ ಕಾಟ ಶುರು. “ಅಭಿಸಾರಿಕೆ’ ಲವ್‌ಸ್ಟೋರಿಯೊಂದಿಗೆ ಆರಂಭವಾಗಿ ಹಾರರ್‌ ಮೂಲಕ ಅಂತ್ಯಗೊಳ್ಳುವ ಕಥೆ. ಪಾಗಲ್‌ ಪ್ರೇಮಿಗಳು, ಅವರ ಪಾಗಲ್‌ ಪ್ರೀತಿ, ತಾನು ಪ್ರೀತಿಸುತ್ತಿರುವ ಹುಡುಗಿಗಾಗಿ ಏನೂ ಬೇಕಾದರೂ ಮಾಡುವಂತಹ ಮನಸ್ಥಿತಿಯ ಸಾಕಷ್ಟು ಸಿನಿಮಾಗಳು ಬಂದಿವೆ.

Advertisement

“ಅಭಿಸಾರಿಕೆ’ ಕೂಡಾ ಅದೇ ಶೈಲಿಯ ಸಿನಿಮಾ. ಆದರೆ, ಇಲ್ಲಿನ ಒಂದು ಸಣ್ಣ ಬದಲಾವಣೆ ಎಂದರೆ ಅದು ಹಾರರ್‌ ಟ್ವಿಸ್ಟ್‌. ಪ್ರೀತಿಗೆ ಹಾರರ್‌ ಸೇರಿಕೊಂಡಾಗ ಏನಾಗುತ್ತದೆ ಎಂಬ ಅಂಶವನ್ನು ಇಲ್ಲಿ ಸೇರಿಸಲಾಗಿದೆ. ಇಡೀ ಸಿನಿಮಾ ಈ ಎರಡು ಅಂಶಗಳ ಸುತ್ತ ಸಾಗುತ್ತದೆ. ಹಾಗಂತ ಈ ಸಿನಿಮಾದಲ್ಲಿ ತುಂಬಾನೇ ಕಾಡುವ ಅಥವಾ ಭಯಬೀಳಿಸುವ ಅಂಶಗಳು ಯಾವುದೂ ಇಲ್ಲ. ಆರಂಭದಲ್ಲಿ ಪಾಗಲ್‌ ಪ್ರೇಮಿಯ ಟ್ರ್ಯಾಕ್‌ ಒಂದು ಕಡೆಯಾದರೆ, ನಾಯಕಿಯ ಲವ್‌ ಮತ್ತೂಂದು ಕಡೆ …ಈ ಎರಡು ಅಂಶಗಳಲ್ಲೇ ಮೊದಲರ್ಧ ಮುಗಿದು ಹೋಗುತ್ತದೆ.

ನಂತರ ಹಾರರ್‌ ಟ್ರ್ಯಾಕ್‌. ಹಾರರ್‌ ಸಿನಿಮಾಗಳಲ್ಲಿ ವಿಕಾರ ರೂಪಗಳು ಕಾಣಿಸಿಕೊಂಡು ಹೆದರಿಸುವುದು ಸಾಮಾನ್ಯ. ಆದರೆ, ಇಲ್ಲಿ ಸತ್ತ ವ್ಯಕ್ತಿಯ ರುಂಡವಷ್ಟೇ ಬಂದು ಕಾಡುತ್ತದೆ. ಅದು ಬಿಟ್ಟರೆ ಕಪ್ಪುಬೇಕು ಭಯಬೀಳಿಸುತ್ತದೆ. ಆ “ಮಟ್ಟಿಗೆ’ ಈ ಚಿತ್ರ ಹೊಸದಾಗಿದೆ. ಪ್ರೇಕ್ಷಕ ತುಂಬಾ ಭಯಬೀಳಬಾರದು, ಆತ ನಗು ನಗುತ್ತಾ ಹಾರರ್‌ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕೆಂಬುದು ನಿರ್ದೇಶಕರ ಉದ್ದೇಶ.

ಅದೇ ಕಾರಣದಿಂದ ನವದಂಪತಿಯ ಎಂಟ್ರಿ ಮೂಲಕ ಚಿತ್ರದಲ್ಲಿ ಕಾಮಿಡಿಯೂ ಕೂಡಾ ಸೇರಿಕೊಳ್ಳುತ್ತದೆ.  ನಿರ್ದೇಶಕರು ಇನ್ನಷ್ಟು ಪೂರ್ವತಯಾರಿಯೊಂದಿಗೆ ಸಿನಿಮಾ ಮಾಡಿದ್ದರೆ, ಚಿತ್ರ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತು. ಆದರೆ, ಕಥೆಗಿಂತ ಹೆಚ್ಚಾಗಿ ಕಥೆಗೆ ಸಂಬಂಧಪಡದ ದೃಶ್ಯಗಳು ತುಂಬಿರುವ ಮೂಲಕ ಸಿನಿಮಾ ತನ್ನ ಗಂಭೀರತೆಯನ್ನು ಕಳೆದುಕೊಂಡಿದೆ. ಬಹುತೇಕ ಸಿನಿಮಾ ಒಂದು ಮನೆಯಲ್ಲಿ ನಡೆದು ಹೋಗುತ್ತದೆ.

ಒಂದು ಮನೆ ಸೇರಿಕೊಳ್ಳುವ ನಾಲ್ಕೈದು ಮಂದಿ, ಅವರಿಗೆ ದೆವ್ವದ ಕಾಟ, ಅದರಿಂದ ಹೊರಬರಲು ಅವರು ಪೇಚಾಡುವ ರೀತಿಯ ಮೂಲಕ ಸಾಗುತ್ತದೆ. ಚಿತ್ರದಲ್ಲಿ ಗಮನ ಸೆಳೆಯೋದು ಯಶವಂತ್‌ ಶೆಟ್ಟಿ. ಆದರೆ, ಅವರನ್ನು ಸಿನಿಮಾದುದ್ದಕ್ಕೂ ಬಳಸಿಕೊಂಡಿಲ್ಲ. ಆದರೂ ಸಿಕ್ಕ ಅವಕಾಶದಲ್ಲಿ ಯಶವಂತ್‌ ಗಮನ ಸೆಳೆಯುತ್ತಾರೆ. ನಾಯಕಿ ಸೋನಾಲ್‌ ಮೊಂತೆರೋ ಇಡೀ ಸಿನಿಮಾದುದ್ದಕ್ಕೂ ಸಾಗಿಬಂದಿದ್ದಾರೆ. ಆದರೆ ನಟನೆಯಲ್ಲಿ ಮತ್ತಷ್ಟು ಪಳಗಬೇಕಿದೆ. ಉಳಿದಂತೆ ಅಶೋಕ್‌, ಗಿರಿ ಇದ್ದಷ್ಟು ಹೊತ್ತು ಇಷ್ಟವಾಗುತ್ತಾರೆ. 

Advertisement

ಚಿತ್ರ: ಅಭಿಸಾರಿಕೆ
ನಿರ್ಮಾಣ: ಭಾಗ್ಯಲಕ್ಷ್ಮೀ ಪ್ರೊಡಕ್ಷನ್ಸ್‌
ನಿರ್ದೇಶನ: ಮಧುಸೂದನ್‌
ತಾರಾಗಣ: ಸೋನಾಲ್‌ ಮೊಂತೆರೋ, ಯಶವಂತ್‌ ಶೆಟ್ಟಿ, ತೇಜ್‌, ಅಶೋಕ್‌, ಗಿರಿ ಮತ್ತಿತರರು. 

* ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next