ಕಾಪು : ಭಗವಂತ ಕೇವಲ ಗರ್ಭಗುಡಿಯ ಒಳಗೆ ಮಾತ್ರಾ ನೆಲೆಸಿಲ್ಲ, ಬದಲಿಗೆ ಎಲ್ಲಾ ವ್ಯಕ್ತಿಗಳ ಹೃದಯದಲ್ಲಿ ಮತ್ತು ಪ್ರಕೃತಿಯಲ್ಲಿ ಅಡಗಿರುವ ಎಲ್ಲಾ ಅಂಶಗಳಲ್ಲಿಯೂ ಭಗವಂತ ನೆಲೆಸಿರುತ್ತಾನೆ. ಪ್ರಕೃತಿ ಮತ್ತು ಮನುಷ್ಯನ ಹೃದಯ ಮಂದಿರದೊಳಗೆ ನೆಲೆಸಿರುವ ಭಗವಂತನನ್ನು ಭಾವಪೂರ್ಣ ಭಕ್ತಿಯಿಂದ ಆರಾಽಸಿದಾಗ ಮಾತ್ರಾ ಭಗವಂತನ ಸ್ವರೂಪಗಳು ಪ್ರಕಟಗೊಂಡು, ಭಗವಂತನ ಅನುಗ್ರಹ ಪ್ರಾಪ್ತವಾಗುತ್ತದೆ ಎಂದು ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಟ್ರಸ್ಟಿ ಉಡುಪಿ ಶ್ರೀ ಪೇಜಾವರ ಮಠಾಽಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಪಾದೂರು ಚಂದ್ರನಗರ ಶ್ರೀ ರಾಮ ಭಜನಾ ಮಂದಿರದ ೧೦ ನೇ ವಾರ್ಷಿಕ ಭಜನಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಭಜನೆಯಿಂದ ಸಮಾಜದ ರಕ್ಷಣೆ, ಸಂಘಟನೆ ಸಾಧ್ಯವಿದೆ. ಭಜನೆಯಿಂದ ಸಂತೃಪ್ತಗೊಳ್ಳುವ ಪ್ರಭು ಶ್ರೀರಾಮ ಎಲ್ಲಾ ಜೀವ ಜಂತುಗಳನ್ನೂ ಅನುಗ್ರಹಿಸುವ ಮಹಾನ್ ಶಕ್ತಿಯಾಗಿದ್ದಾನೆ. ರಾಮ ದೇವರ ಆರಾಧನೆಯಿಂದ ಸರ್ವ ಕಷ್ಟಗಳೂ ದೂರವಾಗಿ ಇಷ್ಟಾರ್ಥಗಳು ನೆರವೇರುತ್ತವೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಆರ್. ಮೆಂಡನ್ ಮಾತನಾಡಿ, ಪೇಜಾವರ ಶ್ರೀಗಳು ನಡೆಸುತ್ತಿರುವ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಯ ಕಾರ್ಯಕ್ರಮಗಳು ಸಾರ್ವಕಾಲಿಕವಾಗಿ ಅನುಕರಣೀಯವಾಗಿವೆ. ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್‌ನ ಟ್ರಸ್ಟಿಗಳಾಗಿ ದಕ್ಷಿಣ ಭಾರತದ ಪ್ರತಿನಿಽಯಾಗಿ ಸೇವೆ ಸಲ್ಲಿಸುತ್ತಿರುವ ಅವರ ಆಶೀರ್ವಚನ ಮತ್ತು ಪಾದಸ್ಪರ್ಷದದಿಂದ ಪಾದೂರು ಶ್ರೀ ರಾಮ ಭಜನಾ ಮಂದಿರವು ಪುನೀತವಾಗಿದೆ ಎಂದರು.
ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಸುಧಾಕರ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸುರೇಶ್ ಪಿ. ಶೆಟ್ಟಿ ಗುರ್ಮೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ವೈ. ಮಾಧವ ಸುವರ್ಣ, ಉದ್ಯಮಿ ಮಾಧವ ಶೆಟ್ಟಿ ಹೊಸಮನೆ, ಭಜನಾ ಮಂದಿರದ ಗೌರವಾಧ್ಯಕ್ಷ ರಂಗನಾಥ ಶೆಟ್ಟಿ, ಮಜೂರು ಗ್ರಾ. ಪಂ. ಉಪಾಧ್ಯಕ್ಷ ಮಧುಸೂಧನ್ ಸಾಲ್ಯಾನ್ ಅತಿಥಿಗಳಾಗಿ ಭಾಗವಹಿಸಿದ್ದರು.
ಸೌಹಾರ್ದತೆ ಮೆರೆದ ಸಮ್ಮಾನ
ಪಾದೂರು ಜನತಾಕಾಲೊನಿ ಶ್ರೀ ರಾಮ ಭಜನಾ ಮಂದಿರವು ಕೇವಲ ಭಜನೆಗೆ ಸೀಮಿತವಾಗಿರದೇ ಸಾಮಾಜಿಕ ಸೇವಾ ಕಾರ್ಯಕ್ರಮಗಳಿಗೂ ಪ್ರಸಿದ್ಧಿಯಾಗಿದ್ದು, ಸೌಹಾರ್ದತೆಯ ತಾಣವೂ ಆಗಿದೆ. ಮಂದಿರದ ದಶಮಾನೋತ್ಸವದ ಪ್ರಯುಕ್ತ ಶಿಕ್ಷಕ ಸುಬ್ರಹ್ಮಣ್ಯ ತಂತ್ರಿ, ಶಿರ್ವ ಸಿದ್ಧಿ ವಿನಾಯಕ ಮಂದಿರದ ನಿರ್ಮಾತು ಗ್ಯಾಬ್ರಿಯಲ್ ಫ್ಯಾಬಿಯನ್ ನಜರತ್ ಮತ್ತು ವಾದ್ಯ ವಾದಕ ಜಲೀಲ್ ಸಾಹೇಬ್ ಅವರನ್ನು ಸಮ್ಮಾನಿಸಿ, ಸೌಹಾರ್ದತೆ ಮೆರೆಯಲಾಯಿತು.
ಪೂರ್ಣ ಕುಂಭ ಸ್ವಾಗತ
ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ ಟ್ರಸ್ಟ್ ನ ಟ್ರಸ್ಟಿ ಉಡುಪಿ ಪೇಜಾವರ ಮಠದ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ವಿವಿಧ ಗಣ್ಯರನ್ನು ಕಾಪು – ಶಿರ್ವ ರಸ್ತೆ ಬಳಿಯ ದ್ವಾರದಿಂದ ಭಜನಾ ಮಂದಿರದವರೆಗೆ ಪೂರ್ಣ ಕುಂಭ ಸ್ವಾಗತದೊಂದಿಗೆ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಶ್ರೀ ರಾಮ ಭಜನಾ ಮಂದಿರದ ದಶಮಾನೋತ್ಸವ ವರ್ಷದ ಭಜನಾ ಮಂಗಲೋತ್ಸವ ಪ್ರಯುಕ್ತ ವಿವಿಧ ಭಜನಾ ಮಂಡಳಿಗಳ ಸಹಕಾರದೊಂದಿಗೆ ಭಜನಾ ಕಾರ್ಯಕ್ರಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಅಶ್ವಥ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ರಾಮ ಭಜನಾ ಮಂದಿರದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಉದ್ಯಮಿ / ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸುರೇಶ್ ಪಿ. ಶೆಟ್ಟಿ ಗುರ್ಮೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಮಲ್ಲಿಕಾ ರಾವ್ ವರದಿ ವಾಚಿಸಿದರು. ಶ್ರೀನಿವಾಸ್ ಐತಾಳ್ ಸಮ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷೆ ಶ್ರುತಿ ಎಸ್. ಶೆಟ್ಟಿ ವಂದಿಸಿದರು. ಆಶಾ ಆರ್. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.