ಪಡುಬಿದ್ರಿ: ಮಿಂಚಿನಬಾವಿ ಶ್ರೀ ಕೋಡ್ದಬ್ಬು ಸನ್ನಿಧಾನದ ಎದುರಲ್ಲಿ ಪಂಚಾಯತ್ ರಸ್ತೆಗೆ ತಗಡು ಚಪ್ಪರದ ನಿರ್ಮಾಣ ಪಂಚಾಯತ್‌ಗೇ ಬಿಟ್ಟ ವಿಚಾರವಾಗಿದೆ. ಹಾಗಾಗಿ ಇದಕ್ಕೆ ಸಾನ್ನಿದ್ಧ್ಯದ ಬಳಿಯ ಎರಡು ಮನೆಯವರಾದ ನಾವು ಪಂಚಾಯತ್‌ಗೆ ಈ ಹಿಂದೆ ನೀಡಿರುವ ಆಕ್ಷೇಪಣೆಗಳನ್ನು ವಾಪಾಸು ಪಡೆದಿದ್ದೇವೆ. ಇದರಲ್ಲಿ ಮುಸ್ಲಿಂ ಸಮುದಾಯವೆಲ್ಲವನ್ನೂ ಎಳೆದುತರಬೇಡಿ. ಕ್ಷೇತ್ರದ ಬಳಿಯಿದ್ದು 2004 ರಿಂದ ಇಂದಿನವರೆಗೂ ಸೌಹರ್ದತೆಯನ್ನು ಕಾಪಾಡಿಕೊಂಡು ಬಂದವರು ನಾವು ಎಂದು ಮಿಂಚಿನ ಬಾವಿ ಕ್ಷೇತ್ರದ ಬಳಿಯ ನಿವಾಸಿಗಳಾದ ಕಲಂದರ್ ಹಾಗೂ ರೆಹಾನಾ ಹೇಳಿದರು.
ಅವರು ಜೂ. 4ರಂದು ರಸ್ತೆಗೆ ತಗಡು ಚಪ್ಪರ ನಿರ್ಮಾಣದ ಕುರಿತಾಗಿ ನೀಡಿರುವ ಆಕ್ಷೇಪಣೆಗಳನ್ನು ವಾಪಾಸು ಪಡೆಯುತ್ತಿರುವ ಕುರಿತಾಗಿ ಮನವಿಗಳನ್ನು ಪಡುಬಿದ್ರಿ ಗ್ರಾ. ಪಂ. ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ ಅವರಿಗಿತ್ತ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಾರ್ವಜನಿಕ ಹಿತಾಸಕ್ತಿ, ಮನೆ ಮಕ್ಕಳ ಸುರಕ್ಷತೆ, ವಿಶೇಷವಾಗಿ ಆ ಪ್ರದೇಶದಲ್ಲಿ ಬೀಸುವ ಬಲವಾದ ಗಾಳಿಯ ಒತ್ತಡಗಳನ್ನು ಪರಿಗಣಿಸಿ ಹಾಗೂ ಆ ರಸ್ತೆಯಲ್ಲಿ ಸಾಗುವ ಶಾಲಾ ವಾಹನ, ಘನವಾಹನಗಳನ್ನು ಗಮನದಲ್ಲಿಟ್ಟುಕೊಂಡು ಚಪ್ಪರದ ನಿರ್ಧಾರವನ್ನು ಪಂಚಾಯತ್ ತೆಗೆದುಕೊಳ್ಳಬೇಕಿದೆ ಎಂದೂ ರೆಹಾನಾ ಪ್ರತಿಪಾದಿಸಿದರು.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ಗ್ರಾ. ಪಂ. ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಅವರು, ಪಡುಬಿದ್ರಿಯಲ್ಲಿ ಈ ಹಿಂದಿನಿಂದಲೂ ಮತೀಯ ಸಾಮರಸ್ಯ, ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದವರು ನಾವಾಗಿದ್ದೇವೆ. ಚಪ್ಪರದ ಕುರಿತಾಗಿ ಆಕ್ಷೇಪಣೆಗಳನ್ನು ಮಿಂಚಿನಬಾವಿ ಕೋಡ್ದಬ್ಬು ದೈವಸ್ಥಾನದ ಬಳಿಯ ನಿವಾಸಿಗಳಾದ ಕಲಂದರ್ ಹಾಗೂ ರೆಹಾನಾ ವಾಪಾಸು ಪಡೆದಿರುವುದು ಸಂತಸ ತಂದಿದೆ. ಪರಸ್ಪರ ಸಹಮತದಿಂದಲೇ ತಗಡು ಚಪ್ಪರದ ನಿರ್ಮಾಣವಾಗಲಿ. ಡೋರ್ ನಂಬರ್ ಇಲ್ಲವಾದ್ದರಿಂದ ಪಂಚಾಯತ್ ಮೂಲಕ ಯಾವುದೇ ಪರವಾನಿಗೆಯನ್ನು ನೀಡಲಾಗದು ಎಂದಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ. ಪಂ. ಕಾರ್ಯದರ್ಶಿ ರೂಪಲತಾ, ಸದಸ್ಯರಾದ ಸಂದೇಶ್ ಶೆಟ್ಟಿ ಪಾದೆಬೆಟ್ಟು, ಶೋಭಾ ಶೆಟ್ಟಿ ಪಾದೆಬೆಟ್ಟು, ಅಬ್ದುಲ್ ರಜಾಕ್, ನಝೀರ್, ಯೂಸುಫ್ ಕಂಚಿನಡ್ಕ, ಶೆಹನಾಝ್, ಆಸ್ಮಾ, ಆಶಾಬಿ ಮತ್ತಿತರರಿದ್ದರು.