ಲಕ್ನೋ : ಡಿಸೆಂಬರ್ 1ರಂದು ಪದ್ಮಾವತಿ ಚಿತ್ರ ಬಿಡುಗಡೆಗೊಂಡರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾದೀತು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇಂದ್ರ ಸರಕಾರಕ್ಕೆ ತಿಳಿಸಿದ್ದಾರೆ.
ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂಬ ಆರೋಪ ಇರುವುದನ್ನು ಹಾಗೂ ಜನರಲ್ಲಿ ಚಿತ್ರದ ಬಗ್ಗೆ ತೀವ್ರವಾದ ವಿರೋಧಾತ್ಮಾಕ ಅಭಿಪ್ರಾಯ ಇರುವುದನ್ನು ಕೇಂದ್ರ ಸೆನ್ಸಾರ್ ಮಂಡಳಿಗೆ ತಿಳಿಸಬೇಕು; ಚಿತ್ರ ಡಿ.1ರಂದು ಬಿಡುಗಡೆಯಾದರೆ ಉತ್ತರ ಪ್ರದೇಶದಲ್ಲಿ ಎಲ್ಲೆಡೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿ ಕ್ಷೋಭೆ ನಿರ್ಮಾಣಗೊಳ್ಳಬಹುದು ಎಂದು ವಿವರಿಸುವ ಪತ್ರವೊಂದನ್ನು ಕೇಂದ್ರ ಸರಕಾರಕ್ಕೆ ಬರೆಯಲಾಗಿದೆ ಎಂದು ಉತ್ತರ ಪ್ರದೇಶದ ಗೃಹ ಕಾರ್ಯದರ್ಶಿ ಅರವಿಂದ ಕುಮಾರ್ ಮಾಧ್ಯಮಕ್ಕೆ ತಿಳಿಸಿದರು.
“ಜನರ ವಿರೋಧಾತ್ಮಕ ಅಭಿಪ್ರಾಯವನ್ನು ಮನ್ನಿಸಿ ಕೇಂದ್ರ ಸೆನ್ಸಾರ್ ಮಂಡಳಿ ನಿರ್ಧಾರಕ್ಕೆ ಬರಬೇಕು; ಆ ಬಗ್ಗೆ ಮಂಡಳಿಗೆ ವಸ್ತುಸ್ಥಿತಿಯನ್ನು ತಿಳಿಹೇಳಬೇಕು; ಗುಪ್ತಚರ ಮಾಹಿತಿಗಳ ಪ್ರಕಾರ ಚಿತ್ರ ನಿರ್ಮಾಪಕರು ಈಗಾಗಲೇ ಚಿತ್ರವನ್ನು ಸೆನ್ಸರ್ ಮಂಡಳಿಯ ಒಪ್ಪಿಗೆಗೆ ಸಲ್ಲಿಸಿದ್ದಾರೆ. ಕಳೆದ ಅಕ್ಟೋಬರ್ 9ರಂದು ಚಿತ್ರದ ಟ್ರೇಲರ್ ಬಿಡುಗಡೆಯಾದಂದಿನಿಂದ ವಿವಿಧ ಸಾಮಾಜಿಕ ಹಾಗೂ ಇತರ ಸಂಘಟನೆಗಳು ಚಿತ್ರವನ್ನು ಬಹುವಾಗಿ ವಿರೋಧಿಸಿವೆ ಮತ್ತು ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿವೆ’ ಎಂದು ಪತ್ರದಲ್ಲಿ ಹೇಳಲಾಗಿದೆ.
ಈ ರೀತಿಯ ಬಲವಾದ ಪ್ರತಿಭಟನೆಗಳು ಈ ಹಿಂದೆಯೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಭಂಗಗೊಳಿಸಿದ್ದವು ಎಂದು ಕುಮಾರ್ ಹೇಳಿದರು.
ಉತ್ತರ ಪ್ರದೇಶದಲ್ಲಿ ನ.22, 26, 29ರಂದು ಪೌರ ಸಂಸ್ಥೆಗಳಿಗೆ ಚುನಾವಣೆ ನಡೆಯಲಿವೆ; ಡಿ.1ರಂದು ಮತ ಎಣಿಕೆ ನಡೆಯಲಿದೆ; ಡಿ.2ರಂದು ಮುಸ್ಲಿಮರ ಬಾರವಾಫಾತ್ ಮೆರವಣಿಗೆ ನಡೆಯಲಿದೆ. ಡಿ.1ರಂದು ಪದ್ಮಾವತಿ ಬಿಡುಗಡೆಯಾದರೆ ಬಹಳ ದೊಡ್ಡ ರೀತಿಯ ಕಾನೂನು ಸುವ್ಯವಸ್ಥೆ ಸಮಸ್ಯೆ ರಾಜ್ಯದಲ್ಲಿ ತಲೆದೋರಲಿದೆ ಎಂದು ಪತ್ರವು ಎಚ್ಚರಿಸಿದೆ.