ಹೊಸದಿಲ್ಲಿ : ಇನ್ನಷ್ಟೇ ಬಿಡುಗಡೆ ಭಾಗ್ಯ ಕಾಣಬೇಕಿರುವ “ಪದ್ಮಾವತಿ’ ಚಿತ್ರ, ಇತಿಹಾಸವನ್ನು ತಿರುಚಲಾದ ಕಾರಣಕ್ಕೆ ಗಂಭೀರ ಪ್ರತಿಭಟನೆ, ನಿಷೇಧಕ್ಕೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಸಂಸದೀಯ ಮಂಡಳಿಯೊಂದು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಸಿಬಿಎಫ್ಸಿ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಷಿ ಅವರನ್ನು ಮಾತುಕತೆಗಾಗಿ ಆಹ್ವಾನಿಸಿದೆ.
ವರದಿಗಳ ಪ್ರಕಾರ ಜೋಷಿ ಮತ್ತು ಬನ್ಸಾಲಿ ಅವರು ಇಂದು ಗುರುವಾರ ಸಂಸದೀಯ ಮಂಡಳಿಯನ್ನು ಕಾಣಲಿದ್ದಾರೆ.
150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಪದ್ಮಾವತಿ ಚಿತ್ರದ ಬಿಡುಗಡೆ ಸಂಬಂಧಿತ ವಿವಾದದಲ್ಲಿ ಹಸ್ತಕ್ಷೇಪ ನಡೆಸಲು ಬಿಜೆಪಿ ಸಂಸದ ಅನುರಾಗ್ ಠಾಕೂರ್ ನೇತೃತ್ವದ 30 ಸದಸ್ಯರ ಸಂಸದೀಯ ಸ್ಥಾಯೀ ಸಮಿತಿ ನಿರ್ಧರಿಸಿತ್ತು. ಅಂತೆಯೇ ಈ ಸಮಿತಿ ಪದ್ಮಾವತಿ ಚಿತ್ರ ತಯಾರಕರು ಮತ್ತು ಸೆನ್ಸಾರ್ ಮಂಡಳಿಯ ಅಧಿಕಾರಿಗಳಿಂದ ಸ್ಪಷ್ಟನೆ ಕೋರಿತ್ತು.
ಖ್ಯಾತ ಬಾಲಿವುಡ್ ನಟರಾದ ಪರೇಶ್ ರಾವಲ್ ಮತ್ತು ರಾಜ್ ಬಬ್ಬರ್ ಅವರು ಸಂಸದೀಯ ಮಂಡಳಿಯ ಸದಸ್ಯರಾಗಿದ್ದು “ಪದ್ಮಾವತಿ’ ಚಿತ್ರದ ವಿವಾದದ ಕುರಿತಾಗಿ ಪರಾಮರ್ಶೆ ನಡೆಸಲಿದ್ದಾರೆ.
ಈ ನಡುವೆ ಪದ್ಮಾವತಿ ಚಿತ್ರ ನಿರ್ಮಾಪಕರು ಚಿತ್ರದ 3ಡಿ ಆವೃತ್ತಿಯನ್ನು ಸೆನ್ಸಾರ್ ಸರ್ಟಿಫಿಕೇಟ್‌ಗಾಗಿ ಸಲ್ಲಿಸಿದ್ದು ಅದರ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ.
ಪದ್ಮಾವತಿ ಚಿತ್ರವನ್ನು ನಿರ್ಮಾಪಕರು ಮೊದಲು 2ಡಿಯಲ್ಲಿ ನಿರ್ಮಿಸಿದ್ದು ಅದನ್ನು ಈಗ 3ಡಿಗೆ ಪರಿವರ್ತಿಸಿದ್ದಾರೆ. 3ಡಿ ಟ್ರೇಲರ್‌ಗೆ ಧನಾತ್ಮಕ ಪ್ರತಿಕ್ರಿಯೆ ಬಂದಿರುವ ಕಾರಣ ಚಿತ್ರದ 3ಡಿ ಆವೃತ್ತಿಯನ್ನು ಸೆನ್ಸಾರ್ ಸರ್ಟಿಫಿಕೇಟ್‌ಗಾಗಿ ಸಲ್ಲಿಸಲಾಗಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.