ಮೈಸೂರು: ಭತ್ತದಲ್ಲಿ ಹೈಬ್ರಿಡ್ (ಮಿಶ್ರ) ತಳಿಯನ್ನು ಸಂಶೋಧಿಸಿ “ಭತ್ತದ ಮಹಾದೇವಪ್ಪ’ ಎಂದೇ ಖ್ಯಾತರಾಗಿ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಕೃಷಿ ವಿಜ್ಞಾನಿ ಡಾ| ಎಂ. ಮಹಾದೇವಪ್ಪ (83) ಅವರು ಮಾ. 6ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮಾದಾಪುರ ಗ್ರಾಮದಲ್ಲಿ ಮಾರ್ಚ್ 7ರಂದು ಅಂತ್ಯಸಂಸ್ಕಾರ ನೆರವೇರಲಿದೆ. ಇವರು ಮಣಿಪಾಲದ ಭಾರತ ವಿಕಾಸ್ ಟ್ರಸ್ಟ್‌ನಲ್ಲಿ ಸಕ್ರಿಯರಾಗಿದ್ದರು.
ಚಾಮರಾಜನಗರ ಜಿಲ್ಲೆಯ ಮಾದಾಪುರದಲ್ಲಿ 1937ರ ಆ. 4ರಂದು ಜನಿಸಿದ್ದ ಇವರು, 1960ರಲ್ಲಿ ಹೆಬ್ಟಾಳಿನ ಕೃಷಿ ಕಾಲೇಜಿನಲ್ಲಿ ಪದವಿ ಪಡೆದು ದಾಖಲೆಯ ಅವಧಿಯಲ್ಲಿ ಕೊಯಮತ್ತೂರು ಕೃಷಿ ಕಾಲೇಜಿನಲ್ಲಿ ಪ್ರಥಮ ಸ್ಥಾನದಲ್ಲಿ ಮಾಸ್ಟರ್ ಮತ್ತು ಡಾಕ್ಟರೇಟ್ ಪದವಿ ಪಡೆದಿದ್ದರು. ಮುಂದೆ 40 ವರ್ಷಗಳವರೆಗೆ ಸತತವಾಗಿ ಅಧ್ಯಯನ, ಬೋಧನೆ, ಸಂಶೋಧನೆ, ಆಡಳಿತದಲ್ಲಿ ಸಾಧನೆ ಮಾಡಿದ್ದರು.
ಕೃಷಿ ಕ್ಷೇತ್ರದ ಸಾಧನೆಗಾಗಿ ಕೇಂದ್ರ ಸರಕಾರ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಧಾರವಾಡದ ಕೃಷಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಬಾರಿಗೆ ಎರಡು ಬಾರಿ ಕುಲಪತಿಗಳಾಗಿದ್ದರು. ಇವರು “ಮಧು’, “ಮಂಗಳ’, “ಪುಷ್ಪ’, “ಪ್ರಗತಿ’, “ವಿಕ್ರಮ’, “ಮುಕ್ತಿ’ “ಬಿಳಿಮುಕ್ತಿ’ “ಜಿ.ಎಂ.ಕೆ.-17′ ಮುಂತಾದ ಭತ್ತದ ತಳಿಗಳನ್ನು ಸಂಶೋಧಿಸಿದ್ದಾರೆ. ಇದಲ್ಲದೆ ರಾಷ್ಟ್ರದಲ್ಲೇ ಮೊದಲ ಬಾರಿಗೆ ಭತ್ತದಲ್ಲಿ ಹೈಬ್ರಿಡ್(ಮಿಶ್ರ) ತಳಿಯನ್ನು ಸಂಶೋಧಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಫಿಲಿಫೈನ್ಸ್‌ನಲ್ಲಿರುವ ಅಂತಾರಾಷ್ಟ್ರೀಯ ಭತ್ತ ಸಂಶೋಧನ ಕೇಂದ್ರದಲ್ಲಿ ಎರಡೂವರೆ ವರ್ಷ ಸಂಶೋಧನೆ ನಡೆಸಿದ್ದರು.
ಇವರಿಗೆ ಪದ್ಮಶ್ರೀ(2005), ಪದ್ಮಭೂಷಣ(2014), ಹೂಕರ್ ಪ್ರಶಸ್ತಿ (1981), ಕರ್ನಾಟಕ ರಾಜೋತ್ಸವ ಪ್ರಶಸ್ತಿ (1984), ಭಾರತ ರತ್ನ ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ (1999), ಸರ್ ಚೋಟುರಾಂ(1996), ಜೀವಮಾನ ಸಾಧನೆ (2009), ಎಲ್.ಟಿ.ಎ.(2011), ಕನ್ನಡ ಶ್ರೇಷ್ಠ ಕೃತಿ ಬರಹ ಪ್ರಶಸ್ತಿ(2005), ಕೆ.ಕೆ.ಎಂ.ಪ್ರಶಸ್ತಿ(1972), ನಾಗಮ್ಮ ದತ್ತಾತ್ರೇಯ ಪ್ರಶಸ್ತಿ(1989) ಸೇರಿ ಹಲವು ಪ್ರಶಸ್ತಿಗಳು ಸಂದಿವೆ. ರೇಷ್ಮೆ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ, ಭಾರತೀಯ ವಿಜ್ಞಾನ ಬರಹಗಾರರ ಸಂಸ್ಥೆ ಸೇರಿ ಹಲವು ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳಿಂದ ಪ್ರಶಸ್ತಿ ಹಾಗೂ ಫೆಲೋಶಿಪ್‌ಗ್ಳನ್ನು ಪಡೆದಿದ್ದಾರೆ.
“ಕರ್ನಾಟಕದಲ್ಲಿ ಭತ್ತದ ಕೃಷಿ’, “ಭತ್ತದ ಕೃಷಿ’, “ಭತ್ತ’, “ಬೀಜೋತ್ಪಾದನೆ ಮತ್ತು ತಾಂತ್ರಿಕತೆ’, “ಭತ್ತದ ಉತ್ಪಾದನೆಯ ಸಮಸ್ಯೆಗಳು ಮತ್ತು ಪರಿಹಾರ’ ಸೇರಿ 20ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ.