Advertisement
ಭತ್ತದ ಬೆಳೆಯ ಸಂರಕ್ಷಣೆ ಹಾಗೂ ರೈತರಿಗೆ ಅಗತ್ಯ ಸಲಹೆ ಸೂಚನೆ ನೀಡಲು ಉಡುಪಿ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ವಿಜ್ಞಾನಿಗಳು ವಿವಿಧೆಡೆ ಗದ್ದೆಗೆ ಭೇಟಿ ನೀಡಿ ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಿ, ಮಾದರಿ ಸಂಗ್ರಹಿಸುವರು.
ಕರಾವಳಿಯಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ 38 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಇತ್ತು. ಆದರೆ 35,580 ಹೆಕ್ಟೇರ್ ಅಂದರೆ ಶೇ. 93.44ರಷ್ಟು ಬಿತ್ತನೆಯಾಗಿದೆ. ದ.ಕ. ಜಿಲ್ಲೆಯಲ್ಲಿ 9,390 ಹೆಕ್ಟೇರ್ ಪ್ರದೇಶ ಗುರಿ ಹೊಂದಿದ್ದು, ಶೇ. 100ರಷ್ಟು ಬಿತ್ತನೆ ಮಾಡಲಾಗಿದೆ.
ಮುಂಗಾರು ವಿಳಂಬವಾದದ್ದರಿಂದ ಉಡುಪಿಯಲ್ಲಿ ಜೂನ್ ಮತ್ತು ಜುಲೈ ಮೊದಲ ವಾರದಲ್ಲಿ ನಿರೀಕ್ಷೆಯಷ್ಟು ಬಿತ್ತನೆಯಾಗಿರಲಿಲ್ಲ. ಹೀಗಾಗಿ ಒಟ್ಟು ಬಿತ್ತನೆಯಲ್ಲಿ ಕುಸಿತವಾಗಿದೆ. ಕಳೆದ ವರ್ಷ 35,767 ಹೆಕ್ಟೇರ್ ಬಿತ್ತನೆಯಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಸ್ವಲ್ಪ ಕಡಿಮೆಯಾಗಿದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.
Related Articles
ಮಳೆ ಕೊರತೆಯಿಂದ ಎರಡೂ ಜಿಲ್ಲೆಗಳಲ್ಲಿ ಭತ್ತದ ಗದ್ದೆಗಳಲ್ಲಿ ತೇವಾಂಶ ಕಡಿಮೆಯಾಗಿ ಸಮಸ್ಯೆ ಹೆಚ್ಚಿದೆ. ಇದನ್ನು ತಪ್ಪಿಸಲು ರೈತರು ಭತ್ತದ ಗದ್ದೆಗೆ ಕನಿಷ್ಠ ನೀರಿನ ವ್ಯವಸ್ಥೆಯನ್ನು ಮಾಡಬೇಕು ಮತ್ತು ಸಸಿಗಳ ಸಂರಕ್ಷಣೆ ದೃಷ್ಟಿಯಿಂದ ನೀರಿನಲ್ಲಿ ಪೊಟಾಷಿಯಂ ಬೆರೆಸಿ ಸಸಿಗಳಿಗೆ ಸಿಂಪಡಿಸಬೇಕು ಎನ್ನುತ್ತಾರೆ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳು.
Advertisement
ಭತ್ತಕ್ಕೆ ನೀರು ಯಾವಾಗ ಆವಶ್ಯಕ?ಬಿತ್ತನೆಯಾದ ದಿನದಿಂದಲೇ ಗದ್ದೆಯಲ್ಲಿ ನೀರು ಇರಬೇಕು. ಹೂ ಬಿಡುವ ಸಂದರ್ಭದಲ್ಲೂ ನೀರು ಅತ್ಯಗತ್ಯ. ಕಾಳುಕಟ್ಟುವ ಅಥವಾ ತೆನೆ ಬಿಡುವ ಹಂತದಲ್ಲಿ ಗದ್ದೆಯಲ್ಲಿ ನೀರು ನಿಂತಿರಬೇಕು.
ಆಗ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ ಎನ್ನುತ್ತಾರೆ ವಿಜ್ಞಾನಿಗಳು. ಪ್ರಸ್ತುತ ನೀರಾವರಿ ಇದ್ದರೂ ಮಳೆಯ ರೂಪದಲ್ಲಿ ಬಂದರಷ್ಟೇ ಬೇಸಾಯಕ್ಕೆ ಉತ್ತಮ ಎನ್ನುತ್ತಾರೆ ರೈತರು. ಒಂದೆರಡು ದಿನಗಳಿಂದ ಕರಾವಳಿಯಲ್ಲಿ ಮೋಡ ಕವಿದ ವಾತಾವರಣ ಕಂಡುಬಂದರೂ ಅಲ್ಲಲ್ಲಿ ಮಳೆಯಾಗುತ್ತಿರು ವುದು ಬಿಟ್ಟರೆ ವ್ಯಾಪಕವಾಗಿ ಮಳೆಯಾಗಿಲ್ಲ. ಈ ಬಾರಿ ಮಳೆಯ ಕೊರತೆಯಿಂದ ಭತ್ತದ ಗದ್ದೆಯಲ್ಲಿ ನೀರು ನಿಂತಿಲ್ಲ. ಬಹುತೇಕ ಕಡೆ ರೈತರು ಕೆರೆ, ನದಿಗಳಿಂದ ನೀರು ಹಾಯಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಭತ್ತದ ಗದ್ದೆಯಲ್ಲಿ ನೀರು ನಿಲ್ಲದೆ ಇದ್ದಾಗ ಕಳೆ ಜಾಸ್ತಿಯಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು ಮತ್ತು ಆಗಾಗ್ಗೆ ಕಳೆ ಕೀಳಬೇಕು. ಸಾಕಷ್ಟು ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ತೇವಾಂಶ ಕಡಿಮೆಯಾದಂತೆ ಬಿಸಿಲಿನ ತಾಪಕ್ಕೆ ಸಸಿಗಳು ಹಳದಿ ಬಣ್ಣಕ್ಕೆ ತಿರುಗಲಾರಂಭಿಸುತ್ತವೆ. ಇದರಿಂದ ಮುಂದೆ ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ. ಮಳೆ ಕೊರತೆ ಇರುವುದರಿಂದ ಭತ್ತದ ಗದ್ದೆಯಲ್ಲಿ ನೀರು ಕಡಿಮೆಯಾಗುತ್ತಿದೆ. ಭತ್ತಕ್ಕೆ ಸಾಕಷ್ಟು ತೇವಾಂಶ ಇರಬೇಕು. ಇದೇ ಪರಿಸ್ಥಿತಿ ಮುಂದುವರಿದರೆ ಇಳುವರಿಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಬೆಳೆ ಸಂರಕ್ಷಣೆಗಾಗಿ ರೈತರಿಗೆ ಅಗತ್ಯ ಸಲಹೆ, ಸೂಚನೆಗಳನ್ನು ಇಲಾಖೆಯಿಂದ ನೀಡುತ್ತಿದ್ದೇವೆ.
– ಸೀತಾ ಎಂ.ಸಿ., ಡಾ| ಕೆಂಪೇಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ, ದ.ಕ. ರಾಜು ಖಾರ್ವಿ ಕೊಡೇರಿ