ಹುಣಸೂರು: ಭತ್ತಕ್ಕೆ ರೋಗ ಕಾಣಿಸಿಕೊಂಡಿರುವ ಪ್ರದೇಶಕ್ಕೆ ಕೃಷಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಜಯಕುಮಾರ್ ಕೃಷಿ ತಜ್ಞರ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ ಚೌಡಿಕಟ್ಟೆ ಹಾಗೂ ಬಲ್ಲೇಹಳ್ಳಿ ನಾಲಾ ಬಯಲಿನಲ್ಲಿ ಓಡಾಡಿದ ಅಧಿಕಾರಿಗಳ ತಂಡ ರೈತರೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿ ನೀಡಿದ್ದಾರೆ.
ಈ ಭಾಗದಲ್ಲಿ ಸಾರಜನಕ ಹೆಚ್ಚು ಬಳಸಿರುವುದರಿಂದಾಗಿ ಮೇಲ್ನೋಟಕ್ಕೆ ಈ ರೀತಿಯ ರೋಗ ಕಾಣಿಸಿಕೊಂಡಿದ್ದು. ಮಂಡ್ಯ ವಿ.ಸಿ.ಫಾರಂಗೆ ಸ್ಯಾಂಪಲ್ ಕಳುಹಿಸಿದ್ದು, ಅಲ್ಲಿಂದ ವರದಿ ಬಂದ ನಂತರವಷ್ಟೆ ನಿಕರ ಕಾರಣ ತಿಳಿಯಲಿದೆ ರೈತರು ಕೃಷಿ ತಜ್ಞರು ಶಿಪಾರಸು ಮಾಡದ ಬಿತ್ತನೆ ಬೀಜ ನಾಟಿ ಮಾಡದಂತೆ ಮನವಿ ಮಾಡಿದರು.
ಹೆಚ್ಚು ಇಬ್ಬನಿ ಬೀಳುತ್ತಿರುವುದರಿಂದಾಗಿ ಭತ್ತದ ಬೆಳೆಯಲ್ಲಿ ಕುತ್ತಿಗೆ ರೋಗ ಕಾಣಿಸಿಕೊಂಡಿದ್ದು, ಸಾರಜನಕ ರಸಗೊಬ್ಬರವನ್ನು ಶಿಫಾರಸು ಮಾಡಿದ ಪ್ರಮಾಣಕ್ಕಿಂತ(ಎಕರೆಗೆ 20 ಕೆ.ಜಿ) ಹೆಚ್ಚು ಬಳಸಿದ್ದಲ್ಲಿ ರೋಗ ಹರಡುವ ಸಾಧ್ಯತೆ ಇದ್ದು, ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕಿದೆ.
ಈ ರೋಗವು ಸದ್ಯಕ್ಕೆ ಚೌಡಿಕಟ್ಟೆ, ಬಲ್ಲೇನಹಳ್ಳಿ ನಾಲಾ ವ್ಯಾಪ್ತಿಯಲ್ಲಿ ಶ್ರೀರಾಮಗೋಲ್ಡ್ ಭತ್ತದ ಬೆಳೆಯಲ್ಲಿ ಈಗಾಗಲೇ ಬಾಧಿಸಿದೆ. ತಾಲೂಕಿನ ಇನ್ನಿತರ ಭತ್ತದ ಬೆಳೆ ಬೆಳಯುವಂತ ಪ್ರದೇಶಗಳಾದ ಉದ್ದೂರು ನಾಲಾ, ಹನುಮಂತಪುರನಾಲಾ, ಕೃಷ್ಣಾಪುರ, ಶಿರಿಯೂರುನಾಲಾ ಮತ್ತು ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಮುನ್ನಚ್ಚರಿಕೆ ವಹಿಸುವಂತೆ ಸೂಚಿಸಿದರು.
ರೋಗದ ಲಕ್ಷಣಗಳು: ಹೊಡೆದಾಟಿದ ಭತ್ತದ ತೆನೆಯ ಕುತ್ತಿಗೆ ಭಾಗವು ಸುಟ್ಟಂತೆ ಕಾಣುವುದು. ಬಾಧಿಸಿದ ಭತ್ತದ ಬೆಳೆ ತೆನೆ ಬಿಳಿ ತೆನೆಯಂಡ ಕಂಡುಬಂದು ಜೊಳ್ಳನಿಂದ ಕೂಡಿರುತ್ತದೆ. ಭತ್ತದ ಕಾಳುಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುವುದು.
ಹತೋಟಿ ಕ್ರಮಗಳು: ರೋಗ ಕಾಣಿಸಿಕೊಂಡಿದ್ದಲ್ಲಿ ಟ್ರೈ ಸೆ„ಕ್ಲೋಜೋಲ್ 0.6ಗ್ರಾಂ, ಅಥವಾ ಟೆಬುಕೋನಜೋಲ್ ಶೇ.50 ಮತ್ತು ಟ್ರೈಪೊಕ್ಸಿಸ್ಟ್ರೋಬಿನ್ 25% ಸಂಯುಕ್ತ ಶಿಲೀಂದ್ರನಾಶಕ 0.4 ಗ್ರಾಂ ಒಂದು ಲೀಟರ್ ನೀರಿನಲ್ಲಿ ಬೆರಸಿ ಅಂಟುದ್ರಾವಣದ ಜೊತೆ ಸಿಂಪಡಿಸಬೇಕು.
ಬೆಂಕಿರೋಗದ ಮನ್ನಚ್ಚರಿಕೆಯಾಗಿ ಟ್ರೈಸೆ„ಕ್ಲೋಜೋಲ್ 0.6ಗ್ರಾಂ ಶಿಲೀಂದ್ರನಾಶಕವನ್ನು ಅಂಟು ದ್ರಾವಣ ಜೊತೆಗೆ ಬೇರಿಸಿ ಸಿಂಪರಣೆ ಮಾಡಬೇಕು. ಎಕರೆಗೆ ಸುಮಾರು 150-200 ಲೀಟರ್‌ನಷ್ಟು ಸಿಂಪರಣಾ ದ್ರಾವಣ ಸಿಂಪಡಿಸಬೇಕು. ರೈತರು ಕಡ್ಡಾಯವಾಗಿ ಮುನ್ನಚ್ಚರಿಕೆ ಕ್ರಮವಹಿಸಿ ತಜ್ಞರು ಸೂಚಿಸಿರುವ ಹತೋಟಿ ಕ್ರಮಗಳನ್ನು ಕೈಗೊಳ್ಳಲು ಕೃಷಿ ಸಹಾಯಕ ನಿರ್ದೇಶಕ ಜಯಕುಮಾರ್ ಸೂಚಿಸಿದರು.