ಪಣಜಿ: ಗೋವಾ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳಲ್ಲಿ ಕಡಿಮೆ ಮತಗಳ ಅಂತರದಿಂದ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಗೋವಾದ ಜನರು ಬಿಜೆಪಿಗೆ ರಾಜ್ಯದ ಆಡಳಿತವನ್ನು ನೀಡಲು ನಿರ್ಧರಿಸಿದ್ದಾರೆ ಮತ್ತು ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಗೋವಾ ಕಾಂಗ್ರೇಸ್ ಚುನಾವಣಾ ಉಸ್ತುವಾರಿ ಪಿ. ಚಿದಂಬರಂ ಹೇಳಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು-ಗೋವಾದಲ್ಲಿ ನಾವು ಸೋಲನ್ನು ಒಪ್ಪಿಕೊಂಡಿದ್ದೇವೆ. ಆದರೆ ನಾವು ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತೇವೆ. ಬಿಜೆಪಿಯು ಕೇವಲ ಶೇ 33 ರಷ್ಟು ಮತಗಳನ್ನು ಪಡೆದಿದೆ. ಇಷ್ಟೊಂದು ಮತದಾರರು ವಿಭಜನೆಗೊಂಡಿದ್ದು, ಕಾಂಗ್ರೇಸ್ ಪಕ್ಷಕ್ಕೆ ಹೊಡೆತ ಬಿದ್ದಿದೆ. ವಿರೋಧಿ ಮತಗಳು ವಿಭಜನೆಗೊಂಡಿರುವುದರಿಂದ ಬಿಜೆಪಿ ಅಧಿಕಾರದ ಹಾದಿ ಸುಲಭವಾಗಿದೆ ಎಂದು ಪಿ.ಚಿದಂಬರಂ ಹೇಳಿದರು.
ಈ ಸಂದರ್ಭದಲ್ಲಿ ಗೋವಾ ಕಾಂಗ್ರೇಸ್ ಪ್ರಭಾರಿ ದಿನೇಶ್ ಗುಂಡೂರಾವ್ ಮಾತನಾಡಿ- ಪ್ರಸಕ್ತ ಚುನಾವಣೆಯಲ್ಲಿ ಯುವ ಮತ್ತು ವಿದ್ಯಾವಂತ ಅಭ್ಯರ್ಥಿಗಳು ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಹೀಗಾಗಿ ಗೋವಾದಲ್ಲಿ ಕಾಂಗ್ರೇಸ್ ಪಕ್ಷವು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಆದರೆ ಈ ಫಲಿತಾಂಶ ಅನಿರೀಕ್ಷಿತವಾಗಿದೆ ಎಂದು ಹೇಳಿದರು.
ಗೋವಾ ಪ್ರದೇಶ ಕಾಂಗ್ರೇಸ್ ಸಮೀತಿ ಅಧ್ಯಕ್ಷ ಗಿರೀಶ್ ಚೋಡಕರ್ ಸೋಲಿನ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನ ತೊರೆಯಲು ಸಿದ್ಧತೆ ನಡೆಸಿದ್ದಾರೆ. ಪ್ರಸಕ್ತ ಚುನಾವಣೆ ಫಲಿತಾಂಶದ ಕುರಿತಂತೆ ಮಾತನಾಡಿದ ಚೋಡಣಕರ್- ಮತ ವಿಭಜನೆಯಿಂದಾಗಿ 7 ರಿಂದ 9 ಕಾಂಗ್ರೇಸ್ ಅಭ್ಯರ್ಥಿಗಳು ಸೋತಿದ್ದಾರೆ. ಶೇ 67 ರಷ್ಟು ಮತದಾರರು ಬಿಜೆಪಿ ವಿರುದ್ಧ ಮತಹಾಕಿದ್ದಾರೆ ಎಂದರು.
ಇದನ್ನೂ ಓದಿ : ಸಾಕುಪ್ರಾಣಿಗಳ ಮೇಲೆ ನಿರಂತರ ದಾಳಿ ಮಾಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ