Advertisement

ಪ್ರಧಾನಿಗಳ ಮಹತ್ವಾಂಕ್ಷೆಯ ಸ್ವಾಮಿತ್ವ ಯೋಜನೆಗೆ ತಾಲೂಕಿನಲ್ಲಿ ಹಿನ್ನಡೆ

09:28 AM Sep 10, 2021 | Team Udayavani |

ಗಂಗಾವತಿ:ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸ್ವಾಮಿತ್ವ ಯೋಜನೆಗೆ ಸಿಬ್ಬಂದಿ ಕೊರತೆ ಮತ್ತಿತರ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಹಿನ್ನಡೆಯಾಗಿದೆ. ಸ್ವಾಮಿತ್ವ ಯೋಜನೆಯಿಂದ ಹಳ್ಳಿ ಜನರ ಹಲವು ದಶಕಗಳ ಕನಸು ನನಸಾಗಲಿದ್ದು ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಚ್ಚಾಶಕ್ತಿಯಿಂದ ಕಾರ್ಯ ಮಾಡಬೇಕಿದೆ.

Advertisement

ಗ್ರಾಮೀಣ ಭಾಗದಲ್ಲಿ ಮನೆ ಮತ್ತು ಖಾಲಿ ಜಾಗಗಳಿಗೆ 9/11 (ಕ್ರಮಬದ್ಧವಾದ ಆಸ್ತಿ)ಹಾಗೂ 11ಬಿ(ಕ್ರಮಬದ್ಧವಲ್ಲದ ಆಸ್ತಿ) ದಾಖಲಾತಿಗಳನ್ನು ವಾಸ ಸ್ಥಳದ ನಿವೇಶಗಳಿಗೆ ನೀಡಲಾಗುತ್ತದೆ. ಸ್ವಾತಂತ್ರ್ಯ ನಂತರ ಗ್ರಾಮಠಾಣಾಗಳ ವ್ಯಾಪ್ತಿಯಲ್ಲಿದ್ದ ಮನೆಗಳಿಗೆ ಮತ್ತು ಸುತ್ತಲಿನ ಜಾಗಕ್ಕೆ ಸರಕಾರ ದಾಖಲೆ ನೀಡಲಾಗಿತ್ತು. ನಂತರ ಜನಸಂಖ್ಯೆ ಹೆಚ್ಚಳದ ಪರಿಣಾಮ ಗ್ರಾಮೀಣ ಭಾಗದಲ್ಲಿ ಕುಟುಂಬಳ ಸಂಖ್ಯೆ ಹೆಚ್ಚಳವಾಗಿದ್ದರಿಂದ ಗ್ರಾಮಗಳ ಪಕ್ಕದ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಜನರು ಬದುಕು ನಡೆಸುತ್ತಿದ್ದಾರೆ.

5-6 ದಶಕಗಳು ಕಳೆದರೂ ಈ ಮನೆ ಜಾಗಕ್ಕೆ ಸರಕಾರ ದಾಖಲೆ ನೀಡಿಲ್ಲ. ಇದರಿಂದ ತಮ್ಮ ಮನೆ ಜಾಗದ ದಾಖಲೆಗಳಿಗಾಗಿ ಗ್ರಾ.ಪಂ. ತಹಸೀಲ್ ಕಚೇರಿ ಸುತ್ತಿದರೂ ಪ್ರಯೋಜನವಾಗಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ ವರ್ಷ ಎಪ್ರೀಲ್‌ನಲ್ಲಿ ಪಂಚಾಯತ್ ರಾಜ್ಯ ದಿನಾಚರಣೆಯ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಿಂದ ನಿಯಮ ಜಾರಿ ಮಾಡಿ ಇ-ಗ್ರಾಮ್ ಸ್ವರಾಜ್ ಪೋರ್ಟಲ್ ಆರಂಭಿಸಿ ಸ್ವಾಮಿತ್ವ ಯೋಜನೆ ಮೂಲಕ ವಾಸವಾಗಿರುವ ಜಾಗಕ್ಕೆ ದಾಖಲೆ ನೀಡುವ ನಿಯಮವನ್ನು ಜಾರಿ ಮಾಡಿದ್ದಾರೆ.

ಸ್ವಾಮಿತ್ವ ಯೋಜನೆಯನ್ನು  ಕಂದಾಯ, ಸರ್ವೇ,ಗ್ರಾ.ಪಂ.ಗಳು ಪಂಚಾಯತ್ ರಾಜ್ಯ ಇಲಾಖೆಗಳ ಮೂಲಕ ಅನುಷ್ಠಾನ ಮಾಡಲು ನಿಯಮ ರೂಪಿಸಲಾಗಿದೆ. 1954 ರಲ್ಲಿ ಗ್ರಾಮಠಾಣಗಳನ್ನು ಗುರುತಿಸಿ ಅಲ್ಲಿಯ ಮನೆಗಳಿಗೆ ದಾಖಲೆ ನೀಡಲಾಗಿದೆ. ಅಂದಿನಿಂದ ಜನಸಂಖ್ಯೆ ಹೆಚ್ಚಾದಂತೆ  ಗ್ರಾಮಗಳು ವಿಸ್ತಿರ್ಣವಾಗಿದ್ದು ಕುಟುಂಬಗಳ ಸಂಖ್ಯೆ ಶೇ.200 ರಷ್ಟು ಹೆಚ್ಚಾಗಿವೆ.ಮನೆಗಳ ಸಂಖ್ಯೆಯೂ ಸ್ವಾಭಾವಿಕವಾಗಿ ಹೆಚ್ಚಾಗಿವೆ. ಹೆಚ್ಚಾದ ಮನೆ ಅಥವಾ ನಿವೇಶನಗಳಿಗೆ ಗ್ರಾ.ಪಂ. ಆಸ್ತಿ ದಾಖಲೆ ಕೊಟ್ಟಿಲ್ಲ ಇವುಗಳನ್ನು ಕ್ರಮಬದ್ಧವಲ್ಲದ ಆಸ್ತಿ ಪಟ್ಟಿಯಲ್ಲಿನ ಸೇರಿಸಿ 11 ಬಿ ನೀಡಲಾಗುತ್ತಿದೆ. ಇದರಿಂದ ಜಾಗ ಅಥವಾ ಮನೆ ಮಾಲೀಕರಿಗೆ ಬ್ಯಾಂಕ್ ಸಾಲ ಸೇರಿ  ಸರಕಾರದ ಯೋಜನೆಗಳು ಗಗನ ಕುಸುಮವಾಗಿವೆ.

ಜನರ ಕಷ್ಟಗಳನ್ನು ದೂರ ಮಾಡಲು ಕೇಂದ್ರ ಸರಕಾರ 2020 ರಲ್ಲಿ ಸ್ವಾಮಿತ್ವ ಯೋಜನೆ ಅನುಷ್ಠಾನ ಮಾಡಿದ್ದರೂ ಜಿಲ್ಲೆಯಲ್ಲಿ ಸರ್ವೇ ಇಲಾಖೆಯ ಸಿಬ್ಬಂದಿ ಕೊರತೆ ಮತ್ತು ಇಚ್ಚಾಶಕ್ತಿಯ ಕೊರತೆಯಿಂದ ಜಿಲ್ಲೆಯ 16 ಗ್ರಾ.ಪಂ.ಗಳ 10 ಗ್ರಾಮಗಳಲ್ಲಿ ಮಾತ್ರ ಇದೀಗ ಸರ್ವೇ ಕಾರ್ಯ ನಡೆಯುತ್ತಿದೆ. ಜಿಲ್ಲಾಡಳಿತ ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯತೆಯ ತೋರಿಸುತ್ತಿದೆ.

Advertisement

ಗಂಗಾವತಿ ತಾಲೂಕಿನ ಶ್ರೀರಾಮನಗರ ಮತ್ತು ಚಿಕ್ಕಬೆಣಕಲ್ ಗ್ರಾ.ಪಂ. ವ್ಯಾಪ್ತಿಯ ತಲಾ ಒಂದು ಹಳ್ಳಿಯಲ್ಲಿ ಸ್ವಾಮಿತ್ವ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ.

ಗ್ರಾ.ಪಂ.ಗಳ ಎಲ್ಲಾ ಹಳ್ಳಿಗಳಲ್ಲಿ ಜಾಗದ ಮಾಲೀಕರ ಸಮ್ಮುಖದಲ್ಲಿ ಜಾಗವನ್ನು ಸರ್ವೇ ಮಾಡಿ ಗಡಿ ಗುರುತಿಸಿ ಡ್ರೋಣ್ ಕ್ಯಾಮರಾ ಮೂಲಕ ಪೋಟೊ ಸೆರೆ ಹಿಡಿದು ಈ ದಾಖಲೆಗಳನ್ನು ಇ-ಗ್ರಾಮಸ್ವರಾಜ್ ಆಪ್ ಮೂಲಕ ಸಂಬಂಧಪಟ್ಟ ಗ್ರಾ.ಪಂ.ಗೆ ಸೇರ್ಪಡೆ ಮಾಡಬೇಕು. ನಂತರ ಜಾಗದ ಮಾಲೀಕ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿ ಮನೆ ಅಥವಾ ಜಾಗದ ದಾಖಲಾತಿ ಪಡೆಯಬಹುದಾಗಿದೆ. ಅಗತ್ಯ ದಾಖಲೆ ಇಟ್ಟುಕೊಂಡು ಬ್ಯಾಂಕ್ ಲೋನ್ ಅಥವಾ ಸರಕಾರದ ಯೋಜನೆ ಲಾಭ ಪಡೆಯಬಹುದಾಗಿದೆ.

ಇದನ್ನೂ ಓದಿ:ಕೆ.ಎಸ್.ಸಿ.ಎ  ಕ್ರೀಡಾ ಸಂಸ್ಕೃತಿಯನ್ನು ಹುಟ್ಟುಹಾಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಆನೆಗೊಂದಿ ಭಾಗದ ಬಹುತೇಕ ಗ್ರಾಮಗಳಲ್ಲಿ ಗ್ರಾಮಠಾಣಾ ವ್ಯಾಪ್ತಿ ಮೀರಿ ಊರುಗಳು ಬೆಳೆದಿವೆ. ದಾಖಲೆಗಳು ಇಲ್ಲ ಇದರಿಂದ ವ್ಯಾಪಾರ ವಹಿವಾಟು ಮಾಡಲು ಆಗುವುದಿಲ್ಲ. ಸ್ವಾಮಿತ್ವ ಯೋಜನೆಯಡಿ ಜಾಗದ ಮಾಲೀಕರ ಸಮ್ಮುಖದಲ್ಲಿ ಜಾಗ ಅಥವಾ ಮನೆ ಸರ್ವೆ ನಡೆಸಿ ದಾಖಲೆ ನೀಡಿ ಈ ಭಾಗದ ಜನರ ನೆರವಿಗೆ ಜಿಲ್ಲಾಡಳಿತ ಮುಂದಾಗಬೇಕಿದೆ. ಇಲ್ಲಿಯ ರೆಸಾರ್ಟ್ ಹೊಟೇಲ್ ಸಕ್ರಮಕ್ಕೂ ಮೊದಲು ಸ್ವಾಮಿತ್ವ ಯೋಜನೆಯಡಿ ಸರ್ವೇ ನಡೆಸಿ ದಾಖಲೆ ನೀಡಬೇಕು. ಆಗ ಸಕ್ರಮಕ್ಕೆ ಈ ಭಾಗದ ಜನರು ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ. ಇನ್ನೂ ಹೊಲ ಗದ್ದೆಗಳಲ್ಲಿ ರೆಸಾರ್ಟ್ ಹೊಟೇಲ್ ನಿರ್ಮಿಸಿಕೊಂಡವರಿಗೆ ಎನ್‌ಎ ಮಾಡಿಸಿಕೊಳ್ಳಲು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಎನ್‌ಓಸಿ ನೀಡುವ ಕೆಲವು ನಿಯಮಗಳಲ್ಲಿ ಮಾರ್ಪಾಡು ಮಾಡಬೇಕೆನ್ನುವುದು ಇಲ್ಲಿಯ ಜನರ ಅಭಿಪ್ರಾಯವಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಂಕ್ಷೆಯ ಸ್ವಾಮಿತ್ವ ಯೋಜನೆಯಡಿ ಗ್ರಾಮಗಳಲ್ಲಿ ದಾಖಲೆ ಇಲ್ಲದ ಜಾಗ ಅಥವಾ ಮನೆ ಸರ್ವೇ ನಡೆಸಿ ಡ್ರೋನ್ ಕ್ಯಾಮರಾ ಮೂಲಕ ಪೊಟೋ ದಾಖಲೆ ಸಮೇತ ಗ್ರಾ.ಪಂ.ನಲ್ಲಿ ಅಳವಡಿಸುವ ಕಾರ್ಯ ತಾಲೂಕಿನಲ್ಲಿ ಪ್ರಗತಿಯಲ್ಲಿದೆ. ‌

ಕೊರೊನಾ ಮತ್ತು ಸಿಬ್ಬಂದಿ ಕೊರತೆಯ ಕಾರಣಕ್ಕೆ ವಿಳಂಭವಾಗಿದೆ. ವಿಶೇಷವಾಗಿ ಆನೆಗೊಂದಿ ಭಾಗದ ಗ್ರಾ.ಪಂ.ಗಳಲ್ಲಿ ತ್ವರಿತವಾಗಿ ಸ್ವಾಮಿತ್ವ ಯೋಜನೆ ಅನುಷ್ಠಾನ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಈ ಭಾಗದಲ್ಲಿ ಪ್ರವಾಸೋದ್ಯಮದ ಮೂಲಕ ಜನರ ಆರ್ಥಿಕ ಶಕ್ತಿ ವೃದ್ದಿಗೆ ಇದು ಸಹಕಾರಿಯಾಗಲಿದೆ ಎಂದು ತಾ.ಪಂ. ಇಒ ಡಾ|ಮೋಹನಕುಮಾರ ತಿಳಿಸಿದ್ದಾರೆ.

ಕೆ.ನಿಂಗಜ್ಜ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next