Advertisement

Bengaluru: ಬಿಸಿಲಿಗೆ ಬೆಂದ ತರಕಾರಿ: ಬೀದಿ ವ್ಯಾಪಾರಿಗಳು ತತ್ತರ

10:55 AM Apr 13, 2024 | Team Udayavani |

ಬೆಂಗಳೂರು: ನಗರದಲ್ಲಿನ ಬಿಸಿಲಿನ ಧಗೆ ಬೀದಿ ವ್ಯಾಪಾರಿಗಳ ಬದುಕನ್ನೇ ಸುಡುತ್ತಿದೆ. ಅಧಿಕ ತಾಪಮಾನದಿಂದಾಗಿ ತಳ್ಳುವ ಗಾಡಿಯಲ್ಲಿನ ಹೂವು, ಹಣ್ಣು, ಸೊಪ್ಪು, ತರಕಾರಿ ಕೆಲವೇ ಗಂಟೆಗಳಲ್ಲಿ ಬಾಡಿ ಹೋಗುತ್ತಿದ್ದು, ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Advertisement

ಬಿಸಿಲಿಗೆ ಹೆದರಿ ಮನೆಯಲ್ಲಿಯೇ ಇರುವಂತೆಯೂ ಇಲ್ಲ, ಇತ್ತ ಸುಡುಬಿಸಿಲಿಗೆ ಬೆನ್ನೊಡ್ಡಿ ವ್ಯಾಪಾರ ಮಾಡಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಲಿಕಾನ್‌ ಸಿಟಿಯಲ್ಲಿ‌ ತಾಪಮಾನ ಇದೀಗ 36 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಇಂತಹದರಲ್ಲಿ ಕಿ.ಮೀ. ಗಟ್ಟಲೇ ಗಾಡಿಗಳನ್ನು ತಳ್ಳಿಕೊಂಡು ಹೋಗಲು ಬೀದಿ ಬದಿ ವ್ಯಾಪಾರಿಗಳಿಗೆ ಸಾಧ್ಯವಾಗುತ್ತಿಲ್ಲ. ತರಕಾರಿ, ಹೂ, ಹಣ್ಣು ತಾಜಾತನ ಉಳಿಸಿಕೊಳ್ಳಲು ಆಗುತ್ತಿಲ್ಲ. ನೀರಿನಲ್ಲಿ ನೆನೆಸಿದ ಗೋಣಿಚೀಲ ಹಾಕಿದರೂ ಕ್ಷಣಾರ್ಧದಲ್ಲಿ ಒಣಗಿ ಹೋಗುತ್ತಿದೆ. ಬಿಸಿಲಿನಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದರ ಜತೆಗೆ ಆಹಾರ ಪದಾರ್ಥ ಬಾಡದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎನ್ನುತ್ತಾರೆ ಬೀದಿ ವ್ಯಾಪಾರಿಗಳು.

ವ್ಯಾಪಾರಕ್ಕೆ ಬಿಸಿಲ ಹೊಡೆತ: ಬಿಸಿಲಿನ ತಾಪಕ್ಕೆ ಕಂಗೆಟ್ಟಿರುವ ವ್ಯಾಪಾರಿಗಳು ತಮ್ಮ ವ್ಯಾಪಾರದ ಅವಧಿ ಬದಲಿಸಿಕೊಂಡಿದ್ದಾರೆ. ಈ ಹಿಂದೆ ಬೆಳಗ್ಗೆಯಿಂದ ಸಂಜೆಯವರೆಗೂ ಬೀದಿಗಳಲ್ಲಿ ತಳ್ಳುವ ಬಂಡಿ ಮೂಲಕ ವ್ಯಾಪಾರ ಮಾಡುತ್ತಿದ್ದರು. ಆದರೆ, ಈಗ ಸುಡುಬಿಸಿಲು ಆರೋಗ್ಯದ ಮೇಲೂ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆವರೆಗೆ, ಮಧ್ಯಾಹ್ನ 3 ನಂತರ ವ್ಯಾಪಾರ ಆರಂಭಿಸುತ್ತಾರೆ. ಆದರೆ, ಕೆಲವರು ಎದ್ದೇಳುವುದೇ ಬೆಳಗ್ಗೆ 10 ಗಂಟೆಯಾಗಿರುತ್ತದೆ. ಮಧ್ಯಾಹ್ನ ನಂತರ ವ್ಯಾಪಾರ ಮಾಡೋಣ ಎಂದರೆ ಬಿಸಿಲಿನ ಪ್ರಖರತೆಯಿಂದಾಗಿ 5 ಗಂಟೆವರೆಗೂ ಯಾರು ಮನೆಯಿಂದ ಹೊರಬರುವುದಿಲ್ಲ. ಹೀಗಾಗಿ, ಹೇಳಿಕೊಳ್ಳುವ ವ್ಯಾಪಾರ ನಡೆಯುತ್ತಿಲ್ಲ ಎಂದು ಜೆ.ಪಿ.ನಗರ 6ನೇ ಹಂತದ ತಳ್ಳುವ ಬಂಡಿ ವ್ಯಾಪಾರಿ ಷಣ್ಮುಗನ್‌ ಅಸಹಾಯಕತೆ ವ್ಯಕ್ತಪಡಿಸಿದರು.

ಬರದ ಹಿನ್ನೆಲೆಯಲ್ಲಿ ತರಕಾರಿಗಳ ಬೆಲೆ ಕೂಡ ಮಾರುಕಟ್ಟೆಯಲ್ಲಿ ಅಧಿಕವಿದೆ. ಬಿಸಿಲಿನ ಧಗೆಗೆ ತಾಜಾತನದ ತರಕಾರಿಗಳು ಕ್ಷಣ ಮಾತ್ರದಲ್ಲಿ ಬಾಡಿ ಹೋಗಲಿದ್ದು, ಗ್ರಾಹಕರು ಕೂಡ ಅಂತಹ ತರಕಾರಿಗಳನ್ನು ಖರೀದಿಸಲು ಆಸಕ್ತಿ ತೋರುವುದಿಲ್ಲ. ಈಗ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುವುದೇ ಒಂದು ಸವಾಲಾಗಿದೆ ಎನ್ನುತ್ತಾರೆ.

ಈ ಹಿಂದೆ ತಳ್ಳುವ ಬಂಡಿಯಲ್ಲಿ ಪ್ರತಿ ದಿನ 12 ಸಾವಿರ ರೂ.ವರೆಗೂ ತರಕಾರಿ, ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೆ. ಆದರೆ, ಈಗ 3 ಸಾವಿರ ರೂ.ನಿಂದ 3,500 ರೂ. ವ್ಯಾಪಾರ ಆಗುತ್ತಿದೆ ಎಂದು ಗಾಂಧಿಬಜಾರ್‌ ವ್ಯಾಪಾರಿ ವಿನೋದ್‌ ವಾಸ್ತವ ಅಳಲು ತೊಡಿಕೊಂಡರು.

Advertisement

ಬಿಸಿಲಿನ ಧಗೆಯಿಂದಾಗಿ ಬೀದಿಗಳಲ್ಲಿ ತಳ್ಳುವ ಬಂಡಿ ನೂಕುವುದು ಕಷ್ಟವಾಗಿದೆ. ತರಕಾರಿ, ಹಣ್ಣು, ಹೂ, ನೀರಾಂಶವುಳ್ಳ ಪದಾರ್ಥಗಳ ತಾಜಾತನ ಮಧ್ಯಾಹ್ನದ ವೇಳೆಗೆ ಕಳೆದುಕೊಳ್ಳುತ್ತದೆ. ಹೀಗಾಗಿ ಖರೀದಿಸಲು ಜನ ಹಿಂದೇಟು ಹಾಕುತ್ತಾರೆ. ವ್ಯಾಪಾರ ಮಾಡುವುದೇ ಕಷ್ಟವಾಗಿದೆ. ರಂಗಸ್ವಾಮಿ, ರಾಜ್ಯಾಧ್ಯಕ್ಷ, ಕರ್ನಾಟಕ ಬೀದಿ ಬದಿ ಸಂಘಟನೆಗಳ ಒಕ್ಕೂಟ.

ಬರದ ಹಿನ್ನೆಲೆಯಲ್ಲಿ ಹೂವಿನ ಬೆಲೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಬಿಸಿಲು ಹೆಚ್ಚಾಗಿ ತಳ್ಳುಗಾಡಿಯಲ್ಲಿ ಹೂವು ಮಾರಾಟ ಮಾಡುವುದು ಕಷ್ಟವಾಗಿದೆ. ಬಿಸಿಲಿಗೆ ಕ್ಷಣ ಮಾತ್ರದಲ್ಲಿ ಹೂವುಗಳು ಬಾಡಿ ಹೋಗುತ್ತವೆ. ಕನಕಾಂಬರ ಹೂವು ಸಂರಕ್ಷಣೆ ಮಾಡಲು ಆಗುವುದೇ ಇಲ್ಲ. ಮುತ್ತುಲಕ್ಷ್ಮೀ, ಬನಶಂಕರಿಯ ಹೂವು ವ್ಯಾಪಾರಿ.

ದೇವೇಶ ಸೂರಗುಪ್ಪ

 

Advertisement

Udayavani is now on Telegram. Click here to join our channel and stay updated with the latest news.

Next