ಕೆ.ಆರ್.ಪುರ: ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ರಾಮಮೂರ್ತಿನಗರದ ಮುಖ್ಯರಸ್ತೆ ಹಾಗೂ ಸುತ್ತಮುತಲಿನ ತಗ್ಗು ಪ್ರದೇಶದ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ರಾಜಕಾಲುವೆಯ ನೀರು ಸರಾಗವಾಗಿ ಹರಿಯಲು ಅವಕಾಶವಿಲ್ಲದ ಪರಿಣಮ, ಸರ್ ಎಂ.ವಿ ಬಡಾವಣೆ, ಮ್ಯಾಥು ಮೆಮೋರಿಯಲ್ ಶಾಲೆ ಆವರಣ, ಕಲ್ಕೆರೆ ಕೃಷ್ಣ ಅಪಾರ್ಟ್‌ಮೆಂಟ್, ರಾಮಮೂರ್ತಿನಗರ ಮುಖ್ಯರಸ್ತೆಗಳು ಜಲಾವೃತಗೊಂಡು ಸಾರ್ವಜನಿಕರು ಪರದಾಡಿದರು.
ಕೌದೇನಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ತುಂಬಿ ರಸ್ತೆಗೆ ನುಗ್ಗಿದ ಪರಿಣಾಮ ರಾಮಮೂರ್ತಿನಗರ ಮುಖ್ಯರಸ್ತೆ ಕೂಡ ಸಂಪೂರ್ಣವಾಗಿ ಜಲಾವೃತಗೊಂಡು, ಐಟಿಐನಿಂದ ರಾಮಮೂರ್ತಿನಗರ ರಿಂಗ್ ರಸ್ತೆಯವರೆಗೂ ಸಂಚಾರದಟ್ಟಣೆ ಉಂಟಾಗಿತ್ತು.
ಕೊಳಚೆ ನೀರು ರಸ್ತೆ ಮೇಲೆ ಕೊಡಿಯಂತೆ ಹರಿದ ಕಾರಣ, ಹಲವು ವಹನಗಳು ರಸ್ತೆಯಲ್ಲೇ ಕೆಟ್ಟು ನಿಂತವು. ಕೆಲವೆಡೆ ರಾಜಕಾಲುವೆ ನೀರು ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗಿತು. ಸರ್ ಎಂ.ವಿ.ಬಡಾವಣೆಯ ಇಪ್ಪತಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಮನೆಯ ಸಂಪ್‌ಗ್ಳಿಗೆ ಕೊಳಚೆ ನೀರು ಸೇರಿತು. ಧಾನ್ಯ, ಟಿ.ವಿ, ಪ್ರೀಡ್ಜ್ ಸೇರಿ ಬೆಲೆಬಾಳುವ ವಸ್ತುಗಳು ಹಾನಿಗೀಡಾದವು.
ಈ ಹಿಂದೆ ಮನೆಗಳಿಗೆ ನೀರು ನುಗ್ಗಿದಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ, ಸಮಸ್ಯೆಯನ್ನು ಕೂಡಲೇ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಅದು ಈವರೆಗೂ ಈಡೇರಿಲ್ಲ ಎಂದು ಸ್ಥಳೀಯ ನಿವಾಸಿ ಉಷಾರಾಣಿ ಅಳಲು ತೋಡಿಕೊಂಡರು.
ಮಳೆಯಿಂದ ಮನೆ ಜಲಾವೃತಗೊಂಡಿದೆ. ಸಂಪ್‌ನಲ್ಲಿ ಕೊಳಚೆ ನೀರು ತುಂಬಿಕೊಂಡಿದ್ದು, ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ. ಅಧಿಕಾರಿಗಳಿಗೆ ಕೆರೆ ಮಾಡಿದೆರ ಚುನಾವಣೆ ಕೆಲಸದ ಒತ್ತಡದಲ್ಲಿದ್ದೇವೆ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ರೇಣುಕಾ ದೂರಿದರು.