ಮುಂಬೈ: ಇದೇ ಮೊದಲ ಬಾರಿಗೆ ಮಹಿಳಾ ಐಪಿಎಲ್ ನಡೆಸಲು ಬಿಸಿಸಿಐ ಮುಂದೆ ಬಂದಿದೆ. ಇದಕ್ಕಾಗಿ ಸಿದ್ದತೆಗಳು ಭರದಿಂದ ನಡೆಯುತ್ತಿದೆ. ಇದೀಗ ಮಹಿಳಾ ಐಪಿಎಲ್ ತಂಡಗಳನ್ನು ಖರೀದಿ ಮಾಡಲು ಟೆಂಡರ್ ಆಹ್ವಾನ ಮಾಡಿದ್ದು, ಸುಮಾರು 30 ಕಂಪನಿಗಳು ಆಸಕ್ತಿ ತೋರಿಸಿದೆ ಎಂದು ವರದಿಯಾಗಿದೆ.
ಇದುವರೆಗೆ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳದ ತಂಡಗಳೂ ಮಹಿಳಾ ಐಪಿಎಲ್ ತಂಡ ಹೊಂದಲು ಮುಂದೆ ಬಂದಿವೆ. ಚೆನ್ನೈ ಮೂಲದ ಶ್ರೀರಾಮ್ ಗ್ರೂಪ್, ನೀಲಗಿರಿ ಗ್ರೂಪ್, ಎಡಬ್ಲ್ಯೂ ಗ್ರೂಪ್, ಎಪಿಎಲ ಅಪೋಲೊ, ಹಳದಿರಾಮ್ ಸಂಸ್ಥೆಗಳು ಆಸಕ್ತಿ ತೋರಿಸಿದೆ.
ಐಟಿಟಿ (ಟೆಂಡರ್ ಆಹ್ವಾನ) ಯನ್ನು ಖರೀದಿಸಿದವರೆಲ್ಲರೂ ಬಿಡ್ ಮಾಡಬೇಕಾಗಿಲ್ಲ. ಆದರೂ ಮಹಿಳಾ ಐಪಿಎಲ್ ಭಾರತೀಯ ಕಾರ್ಪೊರೇಟ್ ಗಳನ್ನು ಉತ್ಸಾಹಿಸುತ್ತಿರುವುದು ಗಮನಿಸಬೇಕಾದ ವಿಚಾರ.
ಸಿಮೆಂಟ್ ಕಂಪನಿಗಳಾದ ಚೆಟ್ಟಿನಾಡ್ ಸಿಮೆಂಟ್ ಮತ್ತು ಜೆಕೆ ಸಿಮೆಂಟ್ ಗಳು ಆಸಕ್ತಿ ಹೊಂದಿದೆ. ಒಂದು ವೇಳೆ ಬಿಡ್ ಗೆದ್ದರೆ ಐಪಿಎಲ್ ನಲ್ಲಿ ಪಾಲ್ಗೊಂಡ ಮೂರನೇ ಸಿಮೆಂಟ್ ಕಂಪನಿಯಾಗಿರಲಿದೆ. ಈಗಾಗಲೇ ಇಂಡಿಯಾ ಸಿಮೆಂಟ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫ್ರಾಂಚೈಸಿ ಹೊಂದಿದೆ.
ಇದನ್ನೂ ಓದಿ:ಗಣರಾಜ್ಯೋತ್ಸವ ಪರೇಡ್: ನೌಕಾಪಡೆ ತಂಡಕ್ಕೆ ಮಂಗಳೂರಿನ ದಿಶಾ ಅಮೃತ್ ನೇತೃತ್ವ
ಐಪಿಎಲ್ ಹೊರತುಪಡಿಸಿ ಇತರ ಲೀಗ್ ಗಳಲ್ಲಿ ತಂಡ ಹೊಂದಿರುವ ಕಪ್ರಿ ಗ್ಲೋಲ್, ಅದಾನಿ ಗ್ರೂಪ್ ಕೂಡಾ ಐಟಿಟಿ ಖರೀದಿ ಮಾಡಿದೆ. ಅಲ್ಲದೆ ಎಲ್ಲಾ ಐಪಿಎಲ್ ತಂಡಗಳು ಮಹಿಳಾ ಐಪಿಎಲ್ ನ ಐಟಿಟಿ ಖರೀದಿ ಮಾಡಿದೆ.
ಜನವರಿ 25ರಂದು ಮುಂಬೈನಲ್ಲಿ ಹರಾಜು ನಡೆಯಲಿದೆ. ಮಾಧ್ಯಮ ಹಕ್ಕುಗಳ ಮಾರಾಟದಿಂದ ಬಿಸಿಸಿಐ ಮೊದಲ ವರ್ಷದಲ್ಲಿ 125 ಕೋಟಿ ರೂಪಾಯಿಗಳವರೆಗೆ ಗಳಿಸಲಿದೆ.