ಉತ್ತರಾಖಂಡ್: ನೆಹರು ಪರ್ವತಾರೋಹಣ ಸಂಸ್ಥೆಯ ಸುಮಾರು 20ಕ್ಕೂ ಅಧಿಕ ಮಂದಿ ಪರ್ವತಾರೋಹಿಗಳು ಹಿಮಕುಸಿತಕ್ಕೆ ಸಿಲುಕಿರುವ ಘಟನೆ ಉತ್ತರಾಖಂಡ್ ನ ದಾಂಡ-2 ಪರ್ವತ ಶಿಖರ ಪ್ರದೇಶದಲ್ಲಿ ಮಂಗಳವಾರ (ಅಕ್ಟೋಬರ್ 04) ಸಂಭವಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಕಂಬಳ ವೇಳಾಪಟ್ಟಿ ಪ್ರಕಟ
ಜಿಲ್ಲಾಡಳಿತ, ರಕ್ಷಣಾ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಎಂಟು ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿ ವಿವರಿಸಿದೆ. ಘಟನಾ ಸ್ಥಳದಲ್ಲಿ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಮತ್ತು ಐಟಿಬಿಪಿ ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಭಾರೀ ಹಿಮಕುಸಿತ ದುರ್ಘಟನೆ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿರುವ ಸಿಎಂ ಧಾಮಿ, ಶೀಘ್ರ ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯನ್ನು ಕಳುಹಿಸುವಂತೆ ಮನವಿ ಮಾಡಿಕೊಂಡಿರುವುದಾಗಿ ಹೇಳಿದರು.
ಹಿಮಕುಸಿತದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಭಾರತೀಯ ವಾಯುಪಡೆ ಈಗಾಗಲೇ ಎರಡು ಚೀತಾ ಹೆಲಿಕಾಪ್ಟರ್ ಗಳನ್ನು ರವಾನಿಸಿರುವುದಾಗಿ ವರದಿ ತಿಳಿಸಿದೆ. ಉತ್ತರಕಾಶಿಯ ನೆಹರು ಪರ್ವತಾರೋಹಣ ಸಂಸ್ಥೆಯ 40 ಜನ ಪರ್ವತಾರೋಹಿಗಳ ತಂಡ ಟ್ರಕ್ಕಿಂಗ್ ಹೊರಟಿದ್ದು, ಇದರಲ್ಲಿ 33 ಮಂದಿ ಪರ್ವತಾರೋಹಿಗಳು ಮತ್ತು 7 ಮಂದಿ ತರಬೇತುದಾರರು ಇದ್ದಿರುವುದಾಗಿ ವರದಿ ವಿವರಿಸಿದೆ.
ದಾಂಡ-2 ಪರ್ವತ ಶಿಖರದ ಮೇಲೆ ಭಾರೀ ಹಿಮಕುಸಿತ ಸಂಭವಿಸಿದ ಪರಿಣಾಮ 20ಕ್ಕೂ ಅಧಿಕ ಮಂದಿ ಸಿಲುಕಿದ್ದು, ಅವರನ್ನೆಲ್ಲಾ ರಕ್ಷಿಸುವ ಕಾರ್ಯ ಭರದಿಂದ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.