Advertisement

2017ರಲ್ಲಿ ಭಾರತದಲ್ಲಿ ವಾಯು ಮಾಲಿನ್ಯಕ್ಕೆ ಬಲಿಯಾದವರ ಸಂಖ್ಯೆ 12 ಲಕ್ಷ

09:01 AM Apr 04, 2019 | Hari Prasad |

ನವದೆಹಲಿ: 2017ನೇ ಇಸವಿಯೊಂದರಲ್ಲೇ ಭಾರತದಲ್ಲಿ ವಾಯುಮಾಲಿನ್ಯಕ್ಕೆ ಬಲಿಯಾದವರ ಸಂಖ್ಯೆ ಬರೋಬ್ಬರಿ 1.2 ಮಿಲಿಯನ್‌ ಅಂದರೆ 12 ಲಕ್ಷ! ಈ ಆಘಾತಕಾರಿ ಮಾಹಿತಿ ಬಹಿರಂಗವಾಗಿರುವುದು ವಾಯುಮಾಲಿನ್ಯಕ್ಕೆ ಸಂಬಂಧಿಸಿ ಹೊರಬಿದ್ದಿರುವ ಜಾಗತಿಕ ವರದಿ ಮೂಲಕ.

Advertisement

ಇನ್ನು ಜಾಗತಿಕ ವಾಯು ಪರಿಸ್ಥಿತಿ ಮಟ್ಟ 2019 ವರದಿಗಳ ಪ್ರಕಾರ ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿನ ವಿವಿಧ ರೀತಿಯ ವಾಯು ಮಾಲಿನ್ಯಗಳಿಗೆ ದೀರ್ಘ‌ಕಾಲೀನ ಒಳಪಡುವಿಕೆಯಿಂದ ಸ್ಟ್ರೋಕ್‌, ಮಧುಮೇಹ, ಹೃದಯಾಘಾತ, ಶ್ವಾಸಕೋಶದ ಕ್ಯಾನ್ಸರ್‌ ಹಾಗೂ ಗಂಭೀರ ಸ್ವರೂಪದ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ 2017ರಲ್ಲಿ ವಿಶ್ವಾದ್ಯಂತ 5 ಮಿಲಿಯನ್‌ ಜನ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು ಇದು ವಾಯು ಮಾಲಿನ್ಯ ಸಮಸ್ಯೆಯ ಗಂಭೀರತೆಯನ್ನು ಸಾರುತ್ತಿದೆ.

ಅಮೆರಿಕಾ ಮೂಲದ ಹೆಲ್ತ್‌ ಎಫೆಕ್ಟ್ಸ್ ಇನ್ಸ್ಟಿಟ್ಯೂಟ್‌ ಎಂಬ ಸಂಸ್ಥೆಯು ಈ ವರದಿಯನ್ನು ತಯಾರಿಸಿದ್ದು ಇದರ ಫ‌ಲಿತಾಂಶಗಳನ್ನು ಬುಧವಾರದಂದು ಈ ಸಂಸ್ಥೆ ಬಿಡುಗಡೆಗೊಳಿಸಿದೆ. ಈ ವರದಿಯಲ್ಲಿ ಉಲ್ಲೇಖವಾಗಿರುವಂತೆ ಒಟ್ಟು 5 ಮಿಲಿಯನ್‌ ಸಾವುಗಳಲ್ಲಿ 3 ಮಿಲಿಯನ್‌ ಸಾವು ನೇರವಾಗಿ ಪಿ.ಎಂ.2.5 ಕಾರಣದಿಂದಲೇ ಸಂಭವಿಸಿದ್ದು, ಇವುಗಳಲ್ಲಿ ಅರ್ಧದಷ್ಟು ಸಾವುಗಳು ಭಾರತ ಮತ್ತು ಚೀನಾದಲ್ಲಿ ಸಂಭವಿಸಿದೆ ಮಾತ್ರವಲ್ಲದೇ ವಿಶ್ವದಲ್ಲಿ ನೇರ ವಾಯುಮಾಲಿನ್ಯದಿಂದ ಸಂಭವಿಸುತ್ತಿರುವ ಸಾವುಗಳಲ್ಲಿ ಅರ್ಧದಷ್ಟು ಸಾವುಗಳಿಗೆ ಭಾರತ ಮತ್ತು ಚೀನಾದಲ್ಲಿ ಉಂಟಾಗುತ್ತಿರುವ ವಾಯುಮಾಲಿನ್ಯವೇ ನೇರ ಕಾರಣವಾಗಿದೆ ಎಂಬ ಅಂಶವನ್ನೂ ಈ ವರದಿ ಪತ್ತೆ ಮಾಡಿದೆ.

ಈ ವರದಿಯಲ್ಲಿ ಬಹಿರಂಗವಾಗಿರುವ ಇನ್ನೊಂದು ಕಳವಳಕಾರಿ ಅಂಶವೆಂದರೆ, ದಕ್ಷಿಣ ಏಷ್ಯಾದಲ್ಲಿ ಜನಿಸುವ ಮಗುವಿನ ಆಯಸ್ಸು ಎರಡು ವರ್ಷ ಆರು ತಿಂಗಳು ಕಡಿಮೆಯಾಗುತ್ತಿದೆ ಮತ್ತಿದಕ್ಕೆ ಈ ಭಾಗಗಳಲ್ಲಿ ದಿನೇ ದಿನೇ ವಿಕೋಪಕ್ಕೆ ಹೋಗುತ್ತಿರುವ ವಾಯುಮಾಲಿನ್ಯವೇ ಕಾರಣವಾಗಿದೆ. ಅದೇ ರೀತಿ ಜಾಗತಿಕ ಜೀವಿತಾವಧಿ 20 ತಿಂಗಳುಗಳಷ್ಟು ಕಡಿಮೆಗೊಳ್ಳುತ್ತಿದೆ. ವಿಶ್ವಾದ್ಯಂತ ರಸ್ತೆ ಅಪಘಾತ ಅಥವಾ ಮಲೇರಿಯಾ ಕಾರಣಗಳಿಂದ ಉಂಟಾಗುತ್ತಿರುವ ಒಟ್ಟು ಸಾವಿನ ಸಂಖ್ಯೆಗಿಂತ ವಾಯುಮಾಲಿನ್ಯ ಸಂಬಂಧಿತ ಕಾಯಿಲೆಗಳಿಂದ ಸಾಯುವವರ ಸಂಖ್ಯೆ ಹೆಚ್ಚು ಎಂಬ ಅಂಶವನ್ನು ಈ ವರದಿ ಹೊರಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next