ಆಳಂದ: ತಾಲೂಕಿನ ಕೋರಳ್ಳಿ, ತೀರ್ಥ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರು ಅನುದಾನ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ರಾಜ್ಯ ಬಂಜಾರಾ ಕ್ರಾಂತಿದಳ ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ, ತಾಲೂಕು ಅಧ್ಯಕ್ಷ ವೆಂಕಟೇಶ ಪಿ. ರಾಠೊಡ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನಾ ಧರಣಿ ಸತ್ಯಾಗ್ರಹ ಕೈಗೊಂಡು ಬೇಡಿಕೆ ಈಡೇರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಕೋರಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅನುದಾನ ಕಡಿಮೆ ಬಂದರೂ ಸಹಿತ ಅಧಿಕ ಖರ್ಚು ತೋರಿಸಿದ್ದಾರೆ. ತೀರ್ಥ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೋಣೆ ಕೆಲಸ ಪೂರ್ಣ ಕೈಗೊಳ್ಳದೆ ಅನುದಾನ ವರ್ಷವಾದರೂ ಸಂಬಂಧಿತರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಜಿಡಗಾ ಸರ್ಕಾರಿ ಪ್ರೌಢಶಾಲೆಯಲ್ಲಿ ಕಟ್ಟಡಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳಿಂದ ಮಾಹಿತಿ ಕೇಳಿದರೂ ನೀಡುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸಿಬ್ಬಂದಿ ಕಚೇರಿಗೆ ಸಮಯಕ್ಕೆ ಹಾಜರಾಗಿ ಸಮರ್ಪಕವಾಗಿ ಶಿಕ್ಷಕರಿಗೆ ಸೇವೆ ಒದಗಿಸಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಸಂಕೇತ ಪವಾರ, ಕ್ರಾಂತಿದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಪವಾರ, ರಾಜ್ಯ ಉಪಾಧ್ಯಕ್ಷ ಸದಾನಂದ ಪವಾರ, ತಾಲೂಕು ಉಪಾಧ್ಯಕ್ಷ ಸುರೇಶ ಪವಾರ, ವಿಜಯಕುಮಾರ ರಾಠೊಡ, ಬಳಿರಾಮ ಚವ್ಹಾಣ, ಮಲ್ಲಿನಾಥ ರಾಠೊಡ, ಕಿಶನ ಚವ್ಹಾಣ, ಮಿಥನ ರಾಠೊಡ ಮತ್ತಿತರರು ಪಾಲ್ಗೊಂಡಿದ್ದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಿಕ್ಷಣಾಧಿಕಾರಿಗಳು ಈ ಕುರಿತು ಶಾಲೆಗಳಿಗೆ ಭೇಟಿ ದಾಖಲೆ ಪರಿಶೀಲಿಸಿ ಸೂಕ್ತಕ್ರಮಕ್ಕೆ ಶಿಫಾರಸು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.